ಗುರುವಾರ , ಜನವರಿ 21, 2021
23 °C
ಜಿಲ್ಲೆಯ ಐದು ಕೇಂದ್ರಗಳಲ್ಲಿ ಪ್ರಾಯೋಗಿಕ ಪರಿಶೀಲನೆ: 6700 ಫಲಾನುಭವಿಗಳ ಪಟ್ಟಿ ಸಿದ್ಧ

ಕೋವಿಡ್‌ ಲಸಿಕೆ: ಅಣಕು ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೋವಿಡ್‌–19‌ ಲಸಿಕೆ ನೀಡಿಕೆ ಅಣಕು ಕಾರ್ಯಾಚರಣೆ ನಗರದ ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಐದು ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಶುಕ್ರವಾರ ನಡೆಯಿತು.

ಹಾವೇರಿ ನಗರದ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ, ಬ್ಯಾಡಗಿ ತಾಲ್ಲೂಕು ಆಸ್ಪತ್ರೆ, ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರ, ಕಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರ, ಸವಣೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಅಣಕು ಲಸಿಕಾ ಕಾರ್ಯಕ್ರಮ ನಡೆಯಿತು. 

ಪ್ರತಿ ಕೇಂದ್ರದಲ್ಲಿ ನಾಲ್ಕು ಕೊಠಡಿಗಳ ವ್ಯವಸ್ಥೆ ಮಾಡಲಾಗಿತ್ತು. ನೋಂದಾಯಿತ ಸಿಬ್ಬಂದಿಯನ್ನು ಲಸಿಕಾ ಕೇಂದ್ರದ ಹೊರ ಆವರಣದಲ್ಲಿ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ನೋಂದಣಿ ಕೊಠಡಿಯೊಳಗೆ ಪ್ರವೇಶಕ್ಕೆ ಮುನ್ನ ಥರ್ಮಲ್ ಸ್ಕ್ಯಾನರ್ ಮೂಲಕ ಜ್ವರ ತಪಾಸಣೆ ನಡೆಸಲಾಯಿತು.

ಅರ್ಧ ಗಂಟೆ ನಿಗಾ:

ಲಸಿಕೆ ಪಡೆಯುವವರು ಮೊದಲಿಗೆ ನೋಂದಣಿ ಕೇಂದ್ರದಲ್ಲಿ ದಾಖಲೆ ಪರಿಶೀಲನೆ ಮಾಡಿಸಿಕೊಂಡು ನಿರೀಕ್ಷಣಾ ಕೊಠಡಿಯಲ್ಲಿ ಕುಳಿತುಕೊಳ್ಳಬೇಕು. ನಂತರ ತಮ್ಮ ಸರದಿ ಬಂದಾಗ ಲಸಿಕಾ ಕೇಂದ್ರಕ್ಕೆ ಹೋಗಬೇಕು. ಆನಂತರ ಮತ್ತೊಂದು ನಿರೀಕ್ಷಣಾ ಕೊಠಡಿಯಲ್ಲಿ ಇರಿಸಿ, ಲಸಿಕೆ ಪಡೆದವರನ್ನು ಅರ್ಧ ಗಂಟೆ ನಿಗಾದಲ್ಲಿಡಲಾಗಿತ್ತು. ಯಾವುದೇ ಅಡ್ಡ ಪರಿಣಾಮಗಳು ಬಂದಿಲ್ಲ ಎಂಬುದು ಖಚಿತವಾದ ನಂತರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಅಡ್ಡಪರಿಣಾಮದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ತುರ್ತು ಚಿಕಿತ್ಸೆಗೆ ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಎಲ್ಲ ಔಷಧ ಹಾಗೂ ವೈದ್ಯರನ್ನು ಒಳಗೊಂಡ ತಂಡ ಸಿದ್ಧವಾಗಿರುವಂತೆ ವ್ಯವಸ್ಥೆ ಮಾಡಲಾಗಿತ್ತು.

ಸಕಲ ಸಿದ್ಧತೆ:

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪರಮೇಶ್ವರ ಹಾವನೂರ ಮಾತನಾಡಿ, ನೋಂದಣಿ, ನಿರೀಕ್ಷಣಾ, ಲಸಿಕೆ, ಹಾಗೂ ತುರ್ತು ನಿಗಾ ಘಟಕ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಆರು ಅಡಿ ಅಂತರ ಕಾಯ್ದುಕೊಂಡು ಕೋವಿಡ್‌ ಲಸಿಕೆ ನೀಡಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ಪಡೆಯಲು ಗುರುತಿನ ಚೀಟಿ ಕಡ್ಡಾಯವಾಗಿದೆ. ಐವರು ಅಧಿಕಾರಿಗಳನ್ನು ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇದರಿಂದ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಲಸಿಕಾ ಕಾರ್ಯಕ್ರಮದ ಪ್ರಾಯೋಗಿಕ ತಿಳಿವಳಿಕೆ ನೀಡಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

125 ಸಿಬ್ಬಂದಿ ಭಾಗಿ:

ಜಿಲ್ಲಾ ಆರ್‌ಸಿಎಚ್ ಅಧಿಕಾರಿ‌ ಡಾ.ಜಯಾನಂದ ಮಾತನಾಡಿ, ‘ಜಿಲ್ಲೆಯ ಐದು ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯ ಅಣಕು ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿ ಕೇಂದ್ರದಲ್ಲಿ 25 ಆರೋಗ್ಯ ಸಿಬ್ಬಂದಿ ನೋಂದಾಯಿಸಿಕೊಂಡಿದ್ದು, ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಲಸಿಕೆ ಸಂಗ್ರಹಕ್ಕಾಗಿ ಈಗಾಗಲೇ ಜಿಲ್ಲಾಡಳಿತ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ’ ಎಂದು ತಿಳಿಸಿದರು.

ಹಾವೇರಿ ಜಿಲ್ಲೆಯಲ್ಲಿ ಲಸಿಕೆಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿದಂತೆ 6700 ಫಲಾನುಭವಿಗಳನ್ನು ಗುರುತಿಸಲಾಗಿದ್ದು, 6712 ಜನ ಈವರೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾನಿಕ ವೈದ್ಯಾಧಿಕಾರಿ ಡಾ.ಸುರೇಶ ಪೂಜಾರ, ಡಾ.ನಿರಂಜನ ಬಣಕಾರ ಇತರ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.