ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆಗಾಗಿ ಸೈಕಲ್‌ ಯಾತ್ರೆ: ಸೈಕ್ಲಿಸ್ಟ್‌ ರಾಬಿನ್‌ ಸಿಂಗ್‌

Published 21 ಡಿಸೆಂಬರ್ 2023, 5:35 IST
Last Updated 21 ಡಿಸೆಂಬರ್ 2023, 5:35 IST
ಅಕ್ಷರ ಗಾತ್ರ

ಹಾವೇರಿ: ‘ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಶಿಕ್ಷಣ, ಅಭಿವೃದ್ಧಿ ಹಾಗೂ ಸಬಲೀಕರಣಕ್ಕೆ ಆದ್ಯತೆ ನೀಡುವಂತೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ಬಹಳ ಮುಖ್ಯವಾಗಿದೆ’ ಎಂದು ಸೈಕ್ಲಿಸ್ಟ್‌ ರಾಬಿನ್‌ಸಿಂಗ್ ವಿಷ್ಣುಸಿಂಗ್ ಹೇಳಿದರು.

ಹಾವೇರಿ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಾನು ಉತ್ತರ ಪ್ರದೇಶದ ಇಟಿವಾ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿ, ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ದೇಶದಾದ್ಯಂತ ಸಂಚರಿಸಿ ಅನೇಕ ವಿಷಯಗಳನ್ನು ಕಲಿತಿದ್ದೇನೆ. ಗ್ರಾಮಕ್ಕೆ ತೆರಳಿದನಂತರ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತೇನೆ’ ಎಂದು ತಿಳಿಸಿದರು.

‘ಪರಿಸರ ಸಂರಕ್ಷಣೆ ಒಬ್ಬರಿಂದ ಸಾಧ್ಯವಿಲ್ಲ, ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಪರಿಸರ ಸಂರಕ್ಷಣೆ ಸಾಧ್ಯ. ಸ್ವಚ್ಛ ಪರಿಸರ, ಶುದ್ಧ ಗಾಳಿ ಹಾಗೂ ಶುದ್ಧ ಆಹಾರದ ಜಾಗೃತಿ ಮೂಡಿಸಲು ದೇಶದಾದ್ಯಂತ ಸೈಕಲ್ ಜಾಥಾ ಕೈಗೊಳ್ಳಲಾಗಿದೆ’ ಎಂದರು.

ದೆಹಲಿಯಲ್ಲಿ ಉಂಟಾಗುವ ವಾಯು ಮಾಲಿನ್ಯದಿಂದ ಜನರಿಗೆ ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ರಾಜ್ಯ, ದೇಶಗಳಿಗೆ ಗಡಿ ಇದೆ. ಆದರೆ, ಪರಿಸರಕ್ಕೆ ಯಾವುದೇ ಗಡಿ ಇರುವುದಿಲ್ಲ. ಪ್ರಪಂಚದ ಯಾವುದೇ ಭಾಗದಲ್ಲಿ ಪರಿಸರಕ್ಕೆ ಹಾನಿಯಾದರೂ ಸಹ ಹಲವು ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ವಾಯು ಮಾಲಿನ್ಯ, ಜಲ ಮಾಲಿನ್ಯದಿಂದ ಪರಿಸರ ಹಾಳಾಗುತ್ತಿದೆ ಎಂದು ರಾಬಿನ್‌ ಸಿಂಗ್‌ ಕಳವಳ ವ್ಯಕ್ತಪಡಿಸಿದರು. 

ನೈಸರ್ಗಿಕ ನೀರು ಕುಡಿಯಿರಿ

‘ನಾವು ಸೇವಿಸುವ ಆಹಾರ ಶುದ್ಧವಾಗಿಲ್ಲ. ಇಂದು ಎಲ್ಲರೂ ಸಾಮಾನ್ಯವಾಗಿ ಮಿನರಲ್ ವಾಟರ್ ಕುಡಿಯುತ್ತಿದ್ದಾರೆ. ಆದರೆ, ಆ ನೀರಿನಲ್ಲಿ ಮಿನರಲ್ಸ್ ಇಲ್ಲ. ಗಾಳಿ, ನೀರು ಹಾಗೂ ಆಹಾರ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ದೇಶಿ ಆಹಾರ ಪದ್ಧತಿ ಅನುಸರಿಸಬೇಕು. ನೈಸರ್ಗಿಕವಾಗಿ ದೊರೆಯುವ ನೀರನ್ನು ಕುಡಿಯಬೇಕು. ನಾನು ನೈಸರ್ಗಿಕವಾಗಿ ದೊರೆಯುವ ನೀರು ಕುಡಿಯುತ್ತೇನೆ ಸದೃಢವಾಗಿದ್ದೇನೆ’ ಎಂದು ತಿಳಿಸಿದರು.

ಹಾವೇರಿ ನಗರಕ್ಕೆ ಆಗಮಿಸಿದ್ದ ವೇಳೆ ರಾಬಿನ್‍ಸಿಂಗ್ ವಿಷ್ಣುಸಿಂಗ್ ಅವರು ಜಿ.ಎಚ್. ಕಾಲೇಜಿನಲ್ಲಿ ಪರಿಸರ, ಕಾಡು, ನೀರು, ವಾಯು ಮಾಲಿನ್ಯದ ಕುರಿತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

26 ಸಾವಿರ ಕಿ.ಮೀ. ಪ್ರಯಾಣ!

‘ತಮಿಳುನಾಡಿನ ಕನ್ಯಾಕುಮಾರಿಯಿಂದ 10 ಅಕ್ಟೋಬರ್ 2022ರಿಂದ ಸೈಕಲ್ ಜಾಥಾ ಆರಂಭಿಸಲಾಗಿದ್ದು ಈವರೆಗೆ ತಮಿಳನಾಡು ಕೇರಳ ಕರ್ನಾಟಕ ಆಂಧ್ರಪ್ರದೇಶ ಓಡಿಸಾ ಜಾರ್ಖಂಡ್‌ ಪಶ್ಚಿಮ ಬಂಗಾಳ ಅಸ್ಸಾಂ ಮೇಘಾಲಯ ತ್ರಿಪುರಾ ಮಿಜೋರಾಂ ಬಿಹಾರ ಉತ್ತರ ಪ್ರದೇಶ ಉತ್ತರಾಖಂಡ ಹರಿಯಾಣ ಪಂಜಾಬ್‌ ದೆಹಲಿ ರಾಜಸ್ಥಾನ ಗುಜರಾತ್‌ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಂಚರಿಸಲಾಗಿದೆ. ಈವರೆಗೆ 26 ಸಾವಿರ ಕಿ.ಮೀ. ಪ್ರಯಾಣಿಸಲಾಗಿದೆ. ಪ್ರತಿದಿನ 110 ರಿಂದ 120 ಕಿ.ಮೀ ಪ್ರಯಾಣಿಸುತ್ತಿದ್ದೇನೆ’ ಎಂದು ರಾಬಿನ್‌ ಸಿಂಗ್‌ ಹೇಳಿದರು.  ಇಲ್ಲಿಂದ ಗದಗ ಜಿಲ್ಲೆ ಲಕ್ಷ್ಮೇಶ್ವರಕ್ಕೆ ತೆರಳಲಿದ್ದು ತೆಲಂಗಾಣ ಹಾಗೂ ಛತ್ತೀಸಘಡ ಮೂಲಕ 11 ಮಾರ್ಚ್ 2024ರಂದು ಉತ್ತರ ಪ್ರದೇಶದ ಭೂಪಾಲದಲ್ಲಿ ನನ್ನ ಸೈಕಲ್‌ ಯಾತ್ರೆ ಸಮಾರೋಪಗೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT