ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕೆ ಒತ್ತಾಯ: ಕುಟುಂಬ ಸಮೇತ ಪ್ರತಿಭಟನೆ

ಮನೆ ನಿರ್ಮಾಣದ ₹ 5 ಲಕ್ಷ ಪರಿಹಾರದ ಹಣ ಬೇರೊಬ್ಬರ ಖಾತೆಗೆ
Last Updated 7 ಅಕ್ಟೋಬರ್ 2020, 2:41 IST
ಅಕ್ಷರ ಗಾತ್ರ

ಶಿಗ್ಗಾವಿ: ಅತಿವೃಷ್ಟಿಯಿಂದ ಬಿದ್ದ ಮನೆಗೆ ಪರಿಹಾರ ಬೇರೊಬ್ಬರ ಖಾತೆಗೆ ಜಮಾ ಆಗಿದ್ದು ಕೂಡಲೇ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಶಿಗ್ಗಾವಿ ತಾಲ್ಲೂಕಿನ ಬನ್ನೂರು ಗ್ರಾಮ ಪಂಚಾಯ್ತಿ ಮುಂದೆ ಫಲಾನುಭವಿ ಹನುಮಂತಗೌಡ ಲಿಂಗನಗೌಡ ಹುಡೇದಗೌಡ್ರ ದಂಪತಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಳೆದ ವರ್ಷ ಸುರಿದ ಭಾರಿ ಮಳೆಗೆ ಮನೆ ಸಂಪೂರ್ಣ ಬಿದ್ದು ಹಾನಿಯಾಗಿದ್ದು, ಅದನ್ನು ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ 'ಬಿ' ಸ್ಕೀಂನಲ್ಲಿ ಮನೆ ಕಟ್ಟಿಕೊಳ್ಳಲು ₹ 5 ಲಕ್ಷ ಪರಿಹಾರದ ಆದೇಶ ನೀಡಿದರು. ಆ ಹಣದಿಂದ ಮನೆ ಕಟ್ಟಿಕೊಳ್ಳಲು ಸಿದ್ಧರಾಗುತ್ತಿದ್ದರು. ಆದರೆ ಫಲಾನುಭವಿ ಬ್ಯಾಂಕ್ ಖಾತೆಗೆ ಮಂಜೂರಾಗಬೇಕಾದ ಪರಿಹಾರಧನ ಬೇರೊಬ್ಬರ ಬ್ಯಾಂಕ್ ಖಾತೆಗೆ ಜಮೆಯಾಗಿದ್ದು ಹಣ ಪಡೆಯಲು ಪರದಾಡುವಂತಾಗಿದೆ.

‘ಸಮಸ್ಯೆ ನಿವಾರಿಸಿ, ಮನೆ ಕಟ್ಟಿಕೊಳ್ಳಲು ನನ್ನ ಹೆಸರಿಗೆ ಬಂದ ಪರಿಹಾರದ ಹಣವನ್ನು ನನ್ನ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳುವಂತೆ ಕಳೆದ 8 ಎಂಟು ತಿಂಗಳುಗಳಿಂದ ನಿತ್ಯ ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಮನವಿ ಸಲ್ಲಿಸಿದರೂ ಪರಿಹಾರ ಸಿಗದಿದ್ದಾಗ ಬೇಸರಗೊಂಡು ಪ್ರತಿಭಟನೆ ಕೈಗೊಂಡಿದ್ದೇನೆ’ ಎಂದುಹನುಮಂತಗೌಡ ತಿಳಿಸಿದರು.

ಅವರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಗ್ರಾಮದ ಮುಖಂಡ ಟಾಕನಗೌಡ್ರ ಪಾಟೀಲ, ‘ಅಧಿಕಾರಿಗಳ ಬೇಜವಾಬ್ದಾರಿಯಿಂದ ಪರಿಹಾರದ ಹಣ ಬೇರೊಬ್ಬರ ಖಾತೆಗೆ ಜಮೆಯಾಗಿದೆ. ಇದನ್ನು ಸರಿಪಡಿಸುವ ಹೊಣೆ ಅಧಿಕಾರಿಗಳ ಮೇಲಿದೆ. ಹೀಗಾಗಿ ತಕ್ಷಣ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ಎಚ್ಚರಿಸಿದರು.

ಮುಖಂಡರಾದ ಬಸನಗೌಡ್ರ ದುಂಡಿಗೌಡ್ರ, ಫಕ್ಕೀರಗೌಡ್ರ ಹುಡೇದಗೌಡ್ರ, ಈರನಗೌಡ್ರ ಹೊನ್ನಾಗೌಡ್ರ, ಮಲ್ಲೇಶ ರಾಂಪುರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಫಲಾನುಭವಿ ಹುಡೇದಗೌಡ್ರರಿಗೆ ಬರಬೇಕಾದ ಪರಿಹಾರದ ಹಣ ಬೇರೊಬ್ಬರ ಖಾತೆಗೆ ಜಮೆಯಾದ ವಿಷಯದ ಕುರಿತು ಗ್ರಾಮ ಪಂಚಾಯ್ತಿ ವತಿಯಿಂದ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ’ ಎಂದು ಪಿಡಿಒ ಡಿ.ಪಿ.ಪೂಜಾರ ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ತಹಶೀಲ್ದಾರ್ ಪ್ರಕಾಶ ಕುದರಿ, ‘ಇವರಿಗೆ ಬರಬೇಕಾದ ಪರಿಹಾರ ಹಣ ಶಿಗ್ಗಾವಿ ಪಟ್ಟಣದ ವ್ಯಕ್ತಿಯೊಬ್ಬರ ಖಾತೆಗೆ ಜಮೆಯಾಗಿದೆ. ಮರಳಿ ತುಂಬುವಂತೆ ತಿಳಿಸಲಾಗಿದೆ. ವಿಳಂಬವಾದಲ್ಲಿ ಪುರಸಭೆಯಿಂದ ಆಸ್ತಿ ಮೇಲೆ ಬೋಜಾ ಅಳವಡಿಸಲಾಗುವುದು. ಆದಷ್ಟು ಬೇಗನೆ ಪರಿಹಾರ ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT