ಶುಕ್ರವಾರ, ಜನವರಿ 28, 2022
25 °C
ಗತ ವೈಭವ ಮರುಸ್ಥಾಪನೆ ನಿರೀಕ್ಷೆಯಲ್ಲಿ ಲೋಕ ಪರಮೇಶ್ವರಿ ದೇವಸ್ಥಾನ

ಹಾನಗಲ್: ಸಾಂಕ್ರಾಮಿಕ ರೋಗಕ್ಕೆ ನಶಿಸಿದ ದೇವಿಕೊಪ್ಪ

ಮಾರುತಿ ಪೇಟಕರ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಹಾನಗಲ್ ತಾಲ್ಲೂಕಿನಲ್ಲಿ ದೇವಿಕೊಪ್ಪ ಎಂಬ ಗ್ರಾಮವಿತ್ತು. ಮಲೆನಾಡ ಭಾಗದ ಈ ಗ್ರಾಮಕ್ಕೆ ಅಂದು ಪ್ಲೇಗ್‌ ಎಂಬ ಮಹಾಮಾರಿ ದಾಳಿ ಇಟ್ಟ ಪರಿಣಾಮ ದೇವಿಕೊಪ್ಪ ಕ್ರಮೇಣ ಅಸ್ತಿತ್ವವನ್ನೇ ಕಳೆದುಕೊಂಡಿತು.

ಶಿರಸಿ–ಹರಿಹರ ರಸ್ತೆಯಲ್ಲಿ ಹಿರೇಕಾಂಶಿ ಗ್ರಾಮ ಸಿಗುತ್ತದೆ. ಈ ಗ್ರಾಮದಿಂದ ಸುಮಾರು 3 ಕಿ.ಮೀ ಅಂತರದಲ್ಲಿತ್ತು ದೇವಿಕೊಪ್ಪ. ಈಗ ದೇವಿಕೊಪ್ಪದಲ್ಲಿ ಜನವಸತಿ ಇಲ್ಲ. ಆದರೆ, ನೂರಾರು ವರ್ಷಗಳ ಹಿಂದೆ ಇದು ಗ್ರಾಮವಾಗಿತ್ತು ಎಂಬುದಕ್ಕೆ ಪುರಾವೆ ಸಿಗುತ್ತವೆ.

ಒಂದು ಗ್ರಾಮದಲ್ಲಿ ಇರಬೇಕಾದ ದೇವಸ್ಥಾನಗಳ ಅಳಿದುಳಿದ ಕಟ್ಟಡ, ಕಲ್ಯಾಣಿ, ಅಲ್ಲಲ್ಲಿ ಮನೆ ನಿರ್ಮಾಣಗೊಂಡಿದ್ದ ಪಳೆಯುಳಿಕೆಗಳು ಗೋಚರಿಸುತ್ತವೆ. ಗ್ರಾಮದೇವತೆ ಲೋಕ ಪರಮೇಶ್ವರಿ ಗರ್ಭಗುಡಿ ಇಲ್ಲಿದೆ. ಹನುಮಂತ, ಬಸವೇಶ್ವರ, ಈಶ್ವರ ಲಿಂಗು ಮೂರ್ತಿಗಳನ್ನು ಒಂದೆಡೆ ಸಂಗ್ರಹಿಸಿಡಲಾಗಿದೆ.

ಈ ಗ್ರಾಮದಲ್ಲಿ ನೂರಾರು ಕುಟುಂಬಗಳು ಸಮೃದ್ಧಿಯಿಂದ ವಾಸಿಸುತ್ತಿದ್ದ ಸಮಯದಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಗ್ರಾಮಸ್ಥರು ಬೇರೆಡೆ ಸ್ಥಳಾಂತರಗೊಂಡ ಪರಿಣಾಮವಾಗಿ ಇಂದು ದೇವಿಕೊಪ್ಪ ತನ್ನ ಗತವೈಭವ ಸಾರುವ ಸ್ಮಾರಕವಾಗಿ ಕಾಣುತ್ತದೆ. ಗ್ರಾಮವಿದ್ದ ಸ್ಥಳದಲ್ಲಿ ಆಗಾಗ್ಗೆ ಪುರಾತನ ಗೃಹ ಸಾಮಗ್ರಿಗಳು ಸಿಗುತ್ತವೆ.

‘ಹಾನಗಲ್‌ ತಾಲ್ಲೂಕು ಕೇಂದ್ರದಿಂದ ದೇವಿಕೊಪ್ಪ ಕ್ಷೇತ್ರ 18 ಕಿ.ಮೀ ಅಂತರದಲ್ಲಿದೆ. ಇಂದಿಗೂ ಕಂದಾಯ ದಾಖಲೆಗಳಲ್ಲಿ ದೇವಿಕೊಪ್ಪ ಹೆಸರು ಇದೆ. ದೇವಿಕೊಪ್ಪ ಗ್ರಾಮದ ಎಲ್ಲ ಕುಟುಂಬಗಳು ತಮಗಿಷ್ಟದ ಸ್ಥಳಗಳಿಗೆ ವಲಸೆ ಹೋದರು. ಸಮೀಪದ ಹಿರೇಕಾಂಶಿ ಗ್ರಾಮದಲ್ಲಿ ನಮ್ಮ ಕುಟುಂಬ ನೆಲೆ ನಿಂತಿತ್ತು. ಇಂದಿಗೂ ನಮ್ಮ ಕುಟುಂಬದವರು ಹಬ್ಬದ ಸಮಯದಲ್ಲಿ ದೇವಿಕೊಪ್ಪ ಪ್ರದೇಶದಲ್ಲಿ ಧಾರ್ಮಿಕ ವಿಧಿಗಳನ್ನು ಆಚರಿಸುತ್ತೇವೆ’ ಎಂದು ಹಿರೇಕಾಂಶಿ ಗ್ರಾ.ಪಂ.ಸದಸ್ಯ ಸಂಕನಗೌಡ ದೇವಿಕೊಪ್ಪ ಹೇಳುತ್ತಾರೆ.

ಅಧಿದೇವತೆ:

ನಶಿಸಿಹೋದ ದೇವಿಕೊಪ್ಪದ ಅಧಿದೇವತೆ ಲೋಕ ಪರಮೇಶ್ವರಿ ದೇವಸ್ಥಾನ ಇಂದಿಗೂ ಅಸ್ತಿತ್ವದಲ್ಲಿದೆ. ಕ್ರಿ.ಶ 5ರಿಂದ 6ನೇ ಶತಮಾನದಲ್ಲಿ ಅಂದಿನ ಕದಂಬರ ಕಾಲದಲ್ಲಿ ಲೋಕ ಪರಮೇಶ್ವರಿ ದೇವಸ್ಥಾನ ನಿರ್ಮಾಣವಾಗಿತ್ತು ಎಂಬುದು ಇತಿಹಾಸ ತಜ್ಞರ ಅಭಿಮತ.

ಈಗ ದೇವಸ್ಥಾನದ ಗರ್ಭ ಮಂದಿರ ಮಾತ್ರ ಇದೆ. ದೇವಿಯ ಸುಂದರ ಮೂರ್ತಿ 8 ಅಡಿ ಎತ್ತರವಿದೆ. ದೇವಸ್ಥಾನದ ಎದುರು ಭಾಗದಲ್ಲಿನ ರಾಷ್ಟ್ರಕೂಟರ ಕಾಲದ ಶಾಸನಗಳ ವಿವರಣೆಯನ್ನು ಹನುಮಾಕ್ಷಿ ಗೂಗಿ ಅವರು ಕರ್ನಾಟಕ ಇತಿಹಾಸ ಅಕಾಡೆಮಿ ಸಂಪುಟದಲ್ಲಿ ದಾಖಲಿಸಿದ್ದಾರೆ.

ಲೋಕ ಪರಮೇಶ್ವರಿ ದೇವಿ ಪವಾಡಗಳ ಮೂಲಕ ಜಾಗೃತ ದೈವವಾಗಿ ಅಂದು ಪ್ರಸಿದ್ಧಳಾಗಿದ್ದಳು. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಳು. ಈ ಕಾರಣಕ್ಕಾಗಿ ಈ ಗ್ರಾಮಕ್ಕೆ ದೇವಿಕೊಪ್ಪ ಎಂಬ ಹೆಸರು ಬಂದಿತ್ತು. ಈಗ ದೇವಿಕೊಪ್ಪ ನಶಿಸಿದೆ. ಆದರೆ ದೇವಿಯ ಮಹಿಮೆಗೆ ಕುಂದು ಬಂದಿಲ್ಲ. ಇಂದಿಗೂ ನಮ್ಮ ಗ್ರಾಮದ ಅಧಿದೇವತೆ ಲೋಕ ಪರಮೇಶ್ವರಿ ಎಂದು ಹಿರೇಕಾಂಶಿ ಗ್ರಾಮದ ವಕೀಲ ರಮೇಶ ತಳವಾರ ತಿಳಿಸುತ್ತಾರೆ.

****

‌ಕೈಗೆ ಬಂದ ಬೆಳೆಯ ಮೊದಲ ನೈವೇದ್ಯ ಲೋಕ ಪರಮೇಶ್ವರಿಗೆ ಸಮರ್ಪಣೆಯಾಗುತ್ತದೆ. ದಸರಾದಲ್ಲಿ 9 ದಿನ ವಿಶೇಷ ಪೂಜೆ ನಡೆಯುತ್ತದೆ
– ಚನ್ನಬಸಪ್ಪ ಧರಣೆಪ್ಪನವರ, ಹಿರೇಕಾಂಶಿ ಗ್ರಾಮದ ರೈತ|

*****

ಲೋಕ ಪರಮೇಶ್ವರಿ ದೇವಸ್ಥಾನದ ಗತ ವೈಭವ ಮರುಸ್ಥಾಪನೆಗೆ ಸಂಸದ ಶಿವಕುಮಾರ ಉದಾಸಿ, ಶಾಸಕ ಮಾನೆ ಅವರು ಆದ್ಯತೆ ನೀಡಬೇಕು
– ಸಂಕನಗೌಡ ದೇವಿಕೊಪ್ಪ, ಗ್ರಾ.ಪಂ. ಸದಸ್ಯ ಹಿರೇಕಾಂಶಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು