ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ಅಂತ್ಯಸಂಸ್ಕಾರಕ್ಕೆ ವಿರೋಧ ಸಲ್ಲ

ಜಿ.ಪಂ. ಸಾಮಾನ್ಯ ಸಭೆ: ಜನರಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಲು ಸದಸ್ಯರ ಒಕ್ಕೊರಲ ಮನವಿ
Last Updated 30 ಜುಲೈ 2020, 15:30 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ದೇಹದಿಂದ ಬೇರೊಬ್ಬರಿಗೆ ಸೋಂಕು ಹರಡುವುದಿಲ್ಲ. ತಪ್ಪು ಕಲ್ಪನೆಯಿಂದ ಅಂತ್ಯಸಂಸ್ಕಾರಕ್ಕೆ ಜನರು ಅಡ್ಡಿ ಮಾಡುವುದು ಬೇಡ. ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ವೈದ್ಯಕೀಯ ಸಿಬ್ಬಂದಿಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ರಮೇಶ ದೇಸಾಯಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ದೇಸಾಯಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಕೊರೊನಾ ಸೋಂಕಿನಿಂದ ಮೃತರಾದವರ ಶವ ಸಂಸ್ಕಾರಕ್ಕೆ ಅಲ್ಲಲ್ಲಿ ಗ್ರಾಮಸ್ಥರು ಅಡ್ಡಿಪಡಿಸುತ್ತಿರುವ ಕುರಿತಂತೆ ವಿವಿಧ ಸದಸ್ಯರ ಪ್ರಶ್ನೆಗಳಿಗೆ ಸಿಇಒ ಸ್ಪಷ್ಟನೆ ನೀಡಿದರು. ನಂತರಡಿಎಚ್‌ಒ ರಾಜೇಂದ್ರ ದೊಡ್ಡಮನಿ ಅವರಿಂದಲೂ ಸ್ಪಷ್ಟ ಮಾಹಿತಿ ಕೊಡಿಸಿದರು.

ಸಭೆಯ ಆರಂಭದಲ್ಲೇ ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ, ಎಸ್‌.ಕೆ.ಕರಿಯಣ್ಣನವರ ಮುಂತಾದ ಸದಸ್ಯರು, ‘ಕೋವಿಡ್‌ ಸಂಬಂಧ ಜಿಲ್ಲೆಗೆ ಬಂದ ಅನುದಾನವೆಷ್ಟು? ಎಷ್ಟು ಖರ್ಚಾಗಿದೆ? ಅಂತ್ಯಸಂಸ್ಕಾರದ ಬಗ್ಗೆ ತಪ್ಪು ತಿಳಿವಳಿಕೆ ಬಗ್ಗೆ ಆರೋಗ್ಯ ಇಲಾಖೆ ಏಕೆ ಜಾಗೃತಿ ಮೂಡಿಸುತ್ತಿಲ್ಲ? ಎಂದು ಸಾಲು–ಸಾಲು ಪ್ರಶ್ನೆಗಳನ್ನು ಎತ್ತಿದರು.

ಕೊರೊನಾ ಸೋಂಕಿನಿಂದ ಮೃತರಾದ ವ್ಯಕ್ತಿಯ ದೇಹದಲ್ಲಿ ನಾಲ್ಕು ಗಂಟೆಯವರೆಗೆ ಮಾತ್ರ ವೈರಾಣು ಜೀವಂತವಾಗಿರುತ್ತದೆ. ಅದು ಪರಾವಲಂಬಿಯಾದ ಕಾರಣ ನಂತರ ನಾಶವಾಗುತ್ತದೆ. ಸೋಂಕಿನಿಂದ ಸತ್ತ ವ್ಯಕ್ತಿಯ ಶವವನ್ನು ನಾಲ್ಕೈದು ತಾಸು ಆಸ್ಪತ್ರೆಯಲ್ಲೇ ಇರಿಸಿ, ಸೋಂಕು ನಿವಾರಕ ಔಷಧಿ ಸಿಂಪಡಿಸಿ, ಕೋವಿಡ್‌ ನಿಯಮಾವಳಿ ಪ್ರಕಾರ, ಕುಟುಂಬದವರ ಒಪ್ಪಿಗೆ ಪಡೆದು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಡಿಎಚ್‌ಒ ಮಾಹಿತಿ ನೀಡಿದರು.

ಪ್ರತ್ಯೇಕ ಜಾಗ:ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಮಾತನಾಡಿ, ಕೆಲವು ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಬರುವುದಿಲ್ಲ. ಕೆಲವು ಗ್ರಾಮಸ್ಥರು ಜಿಲ್ಲಾಡಳಿತ ನಿಗದಿಪಡಿಸಿದ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ವಿರೋಧ ವ್ಯಕ್ತಪಡಿಸುತ್ತಾರೆ. ಇದುಒಳ್ಳೆಯ ಕ್ರಮ ಅಲ್ಲ. ಕೋವಿಡ್‌ನಿಂದ ಮೃತರಾದವರ ಸಂಸ್ಕಾರಕ್ಕಾಗಿ ತಾಲ್ಲೂಕುವಾರು ಸರ್ಕಾರಿ ಜಾಗವನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.

₹6 ಕೋಟಿ ಅನುದಾನ:ಕೋವಿಡ್ ನಿರ್ವಹಣೆಗೆ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಜಿಲ್ಲೆಗೆ ₹5.95 ಕೋಟಿ ಬಿಡುಗಡೆಯಾಗಿದೆ. ಈವರೆಗೆ ₹3.87 ಕೋಟಿ ಖರ್ಚಾಗಿದೆ. ₹2 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ರಾಣೆಬೆನ್ನೂರಿನಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್‍ಗಳಿಗಾಗಿ ವೆಚ್ಚ ಮಾಡಲಾಗಿದೆ. 7 ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರತಿ ಕೇಂದ್ರದಲ್ಲಿ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಡೆಡಿಕೆಟೆಡ್ ಕೋವಿಡ್ ಹೆಲ್ತ್‌ ಸೆಂಟರ್‌ಗಳನ್ನು ಆರಂಭಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರಿಗೆ ಒಂದು ದಿನಕ್ಕೆ ₹250 ಊಟಕ್ಕಾಗಿ ಖರ್ಚು ಮಾಡಲಾಗುತ್ತದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ₹5 ಲಕ್ಷ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ₹2 ಲಕ್ಷ ಹಾಗೂ ಔಷಧಿಗಾಗಿ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಶಾಸಕರಾದ ನೆಹರು ಓಲೇಕಾರ, ಜಿ.ಪಂ. ಉಪಾಧ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ ಸೇರಿದಂತೆ ವಿವಿಧ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT