ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ | ಕುಡಿಯುವ ನೀರು ಕಲುಷಿತ: ಗ್ರಾಮಸ್ಥರ ಆಕ್ರೋಶ

ಎಂ.ವಿ. ಗಾಡದ
Published 16 ಮೇ 2024, 6:35 IST
Last Updated 16 ಮೇ 2024, 6:35 IST
ಅಕ್ಷರ ಗಾತ್ರ

ಶಿಗ್ಗಾವಿ: ಇಲ್ಲಿನ ಐತಿಹಾಸಿಕ ನಾಗನೂರ ಕೆರೆಯಿಂದ ಪಟ್ಟಣದ ಜನತೆಗೆ ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಬೇಸಿಗೆಯಿಂದಾಗಿ ನೀರು ಖಾಲಿಯಾದ ಪರಿಣಾಮ ಅಲ್ಲಲ್ಲಿ ತಗ್ಗು ದಿಣ್ಣೆಗಳಲ್ಲಿರುವ ನೀರು ಕಲುಷಿತಗೊಂಡಿದೆ.

ಈವರೆಗೆ ಕೆರೆಯಿಂದ 4–5 ದಿನಗಳಿಗೊಮ್ಮೆ ನೀರು ಸರಬರಾಜ ಮಾಡಲಾಗುತ್ತಿತ್ತು. ಆದರೆ ಈಗ ಕೆರೆ ನೀರು ಕಲುಷಿತವಾಗಿ ಕುಡಿಯಲು ಬಾರದಂತಾಗಿದೆ. ಅದೇ ನೀರನ್ನು ಪೂರೈಸುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

‘ನೀರು ಹಸಿರು ಬಣ್ಣಕ್ಕೆ ತಿರುಗಿ, ವಾಸನೆ ಬರುತ್ತದೆ. ನೀರು ನೋಡಿದರೆ ವಾಂತಿ ಬರುತ್ತದೆ. ಅಂತಹ ನೀರನ್ನು ಕುಡಿಯುವುದು ಹೇಗೆ. ಅನಾರೋಗ್ಯ ಕಾಡುವ ಭಯವಿದೆ’ ಎಂದು ಮುಖಂಡ ರಾದ ವಿ.ಕೆ.ಪೂಜಾರ, ಶಿದ್ರಮಗೌಡ ಮೇಳ್ಳಾಗಟ್ಟಿ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶೇ 80ರಷ್ಟು ಜನ ನಳದ ನೀರನ್ನೇ ಅವಲಂಬಿಸಿದ್ದಾರೆ. ಈ ಸತ್ಯಾಂಶವನ್ನು ಅಧಿಕಾರಿಗಳು ಗಮನಿಸಬೇಕು. ದನಕರುಗಳಿಗೆ ಇಂತಹ ನೀರು ಕುಡಿಸುವುದು ಹೇಗೆ, ಅವುಗಳಿಗೆ ನೀರು ಕುಡಿಸಲು ಎಲ್ಲಿಗೆ ಹೋಗಬೇಕು. ಮನುಷ್ಯರು ಎಲ್ಲಿಗಾದರೂ ಹೋಗಿ ಕುಡಿದು ಬರಬಹುದು’ ಎಂದು ರೈತ ಶೇಕಪ್ಪ ನವಲಗುಂದ ಅಳಲು ತೋಡಿಕೊಂಡರು.

‘ಪಟ್ಟಣದಲ್ಲಿ ಶುದ್ಧ ನೀರಿನ ಘಟಕಗಳು ಬೆರಳೆಣಿಕೆಯಲ್ಲಿವೆ. ಅವುಗಳಿಂದಲೂ ಸರಿಯಾದ ಸಮಯಕ್ಕೆ ನೀರು ವಿತರಿಸುತ್ತಿಲ್ಲ. ಕೆಲವು ಘಟಕಗಳು ಶಾಶ್ವತವಾಗಿ ಸ್ಥಗಿತಗೊಂಡಿದ್ದು, ಈವರೆಗೆ ದುರಸ್ತಿ ಕೈಗೊಂಡಿಲ್ಲ. ನಿತ್ಯ ಕುಡಿಯಲು ಶುದ್ಧ ನೀರಿಗಾಗಿ ಪರದಾಡುವಂತಾಗಿದೆ. ತಕ್ಷಣ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು’ ಎಂದು ಶಂಭು ಯಲಿಗಾರ ಪುರಸಭೆ ಅಧಿಕಾರಿಗಳಿಗೆ ಮತ್ತು ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ.

‘ಪಟ್ಟಣದಲ್ಲಿ 50 ಸಾವಿರಕ್ಕೂ ಅಧಿಕ ಜನ ವಾಸವಾಗಿದ್ದಾರೆ. ಅಷ್ಟೊಂದು ಜನರಿಗೆ ಕೇವಲ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೆ ಸಾಲದು. ಕನಿಷ್ಠ ಇನ್ನೂ ಆರು ಶುದ್ಧ ನೀರಿನ ಘಟಕಗಳನ್ನು ತೆರೆಯಬೇಕು. ಹೆಚ್ಚಿನ ಕೊಳವೆ ಬಾವಿಗಳನ್ನು ತೆರೆಯಬೇಕು. ಕೆರೆಗೆ ನೀರು ಇಲ್ಲದಿರುವಾಗಿ ಕೊಳವೆ ಬಾವಿ ನೀರು ಬಳಕೆಗೆ ಸುಲಭವಾಗುತ್ತದೆ. ನೀರಡಿಕೆಯಾದಾಗ ಬಾವಿ ತೆಗೆಯುವ ಚಿಂತನೆ ಬಿಟ್ಟು ಪೂರ್ವ ಯೋಜಿತ ಯೋಜನೆಗಳನ್ನು ಹಾಕಬೇಕು’ ಎಂದು ಮುಖಂಡ ಈರಣ್ಣ ನವಲಗುಂದ ಆಗ್ರಹಿಸಿದ್ದಾರೆ.

‘ಸಮಸ್ಯೆ ಶೀಘ್ರ ಪರಿಹಾರ’

‘ವರದಾ ನದಿಯಿಂದ ನೀರು ಸರಬರಾಜು ಆಗುತ್ತಿಲ್ಲ. ಹೀಗಾಗಿ ನಾಗನೂರ ಕೆರೆಯ ತಗ್ಗು, ದಿಣ್ಣೆಯಲ್ಲಿನ ನೀರು ಸರಬರಾಜು ಮಾಡಲಾಗುತ್ತಿದೆ. ಆ ನೀರು ಕುಡಿಯಲು ಯೋಗ್ಯವಾಗಿದೆ, ಯಾವುದೇ ತೊಂದರೆಯಿಲ್ಲ. ಆದರೂ ಹಸಿರು ಬಣ್ಣಕ್ಕೆ ತಿರುಗಿರುವುದರಿಂದ ನೀರನ್ನು ಕುದಿಸಿ ಆರಿಸಿ ಸೋಸಿ ಕುಡಿಯಬೇಕೆಂದು ಈಗಾಗಲೇ ಜನರಿಗೆ ತಿಳಿಸಲಾಗಿದೆ. ಸಾರ್ವಜನಿಕರ ವಿರೋಧ ವ್ಯಕ್ತವಾಗಿರುವುದರಿಂದ ಎರಡು ದಿನಗಳಿಂದ ನಾಗನೂರ ಕೆರೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಪಟ್ಟಣದಲ್ಲಿರುವ ಏಳು ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ಕಾರಣಕ್ಕೆ 11–12 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಶೀಘ್ರವೇ ಶುದ್ಧ ನೀರಿನ ಘಟಕಗಳನ್ನು ಸರಿಮಾಡಿಸುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಜಿ.ಕಾಂಬಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT