ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ವಿತರಣೆಗೆ ತುರ್ತು ಕ್ರಮವಹಿಸಿ: ಬಸವರಾಜ ಬೊಮ್ಮಾಯಿ

ಮಳೆ ಹಾನಿ ನಿರ್ವಹಣೆ: ಜಿಲ್ಲಾಡಳಿತದೊಂದಿಗೆ ವಿಡಿಯೊ ಸಂವಾದ
Last Updated 6 ಆಗಸ್ಟ್ 2020, 13:17 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗುವ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರತಿ ತಾಲ್ಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಬೇಕು. ಮಳೆಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ ತತ್‌ಕ್ಷಣ ಪರಿಹಾರ ವಿತರಣೆಗೆ ತುರ್ತು ಕ್ರಮ ವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಬೆಂಗಳೂರು ವಿಕಾಸಸೌಧದಿಂದ ಹಾವೇರಿ ಜಿಲ್ಲಾಡಳಿತದೊಂದಿಗೆ ಗುರುವಾರ ವಿಡಿಯೊ ಸಂವಾದ ನಡೆಸಿ ಮಳೆಹಾನಿ ವಿವರ, ಕೋವಿಡ್ ನಿಯಂತ್ರಣ ಮತ್ತು ಪರಿಹಾರ ಕಾರ್ಯಗಳು, ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಸಮಾಲೋಚನೆ ನಡೆಸಿದರು.

ಕಾಳಜಿ ಕೇಂದ್ರ:ವರದಾ ನದಿ ಪಾತ್ರದಲ್ಲಿ ಮುಳುಗಡೆ ಭೀತಿ ಎದುರಿಸುವ ಹಳ್ಳಿಗಳಿಗೆ ಖುದ್ದಾಗಿ ಅಧಿಕಾರಿಗಳು ಭೇಟಿ ನೀಡಬೇಕು. ಪ್ರವಾಹಕ್ಕೆ ಒಳಗಾಗುವ ಹಳ್ಳಿಗಳಲ್ಲಿ ಮಾರ್ಕಿಂಗ್ ಮಾಡಬೇಕು. ನೀರು ನುಗ್ಗುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕುರಿತಂತೆ ಕಾಳಜಿ ಕೇಂದ್ರ ತೆರೆಯಲು ಸ್ಥಳಗಳನ್ನು ಗುರುತಿಸಿಕೊಳ್ಳಬೇಕು. ಮಳೆಯಿಂದ ತೊಂದರೆಗೊಳಗಾಗುವ ನದಿ, ಹಳ್ಳ ಹಾಗೂ ಕೆರೆ ದಡಗಳ ಗ್ರಾಮಗಳ ಜನರಿಗೆ ಎಲ್ಲ ಮುನ್ನೆಚ್ಚರಿಕೆ ನೀಡಬೇಕು ಎಂದರು.

ಕಾಲುವೆ ಒಡೆಯದಂತೆ ಕ್ರಮವಹಿಸಿ:ವರದಾ ನದಿ ಪಾತ್ರದ ಶಿಗ್ಗಾವಿ, ಸವಣೂರ , ಹಾನಗಲ್, ಹಾವೇರಿ ಭಾಗದ ಗ್ರಾಮಗಳಲ್ಲಿ ಕಳೆದ ನೆರೆಯ ಸಂದರ್ಭದ ಅನುಭವದ ಆಧಾರದ ಮೇಲೆ ಆ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಹಾನಗಲ್ ತಾಲ್ಲೂಕಿನ ಧರ್ಮಾ ಹಾಗೂ ವರದಾ ನದಿಗಳ ಕಾಲುವೆ ಒಡೆಯದಂತೆ ಕ್ರಮವಹಿಸಬೇಕು. ಈ ಕುರಿತಂತೆ ಇಂದಿನಿಂದಲೇ ಕೆರೆಗಳ ದಂಡೆಗಳ ಭದ್ರತೆ ಕುರಿತಂತೆ ಅಧಿಕಾರಿಗಳ ತಂಡ ನೇಮಿಸಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ತಹಶೀಲ್ದಾರ್‌ಗೆ ಅಧಿಕಾರ:ಮಳೆಯಿಂದ ಹಾನಿಯಾದ ಮನೆಗಳಿಗೆ ತಕ್ಷಣವೇ ಪರಿಹಾರವನ್ನು ಒದಗಿಸಬೇಕು. ಪರಿಹಾರ ವಿತರಣೆಯ ಅಧಿಕಾರವನ್ನು ಆಯಾ ತಾಲ್ಲೂಕು ತಹಶೀಲ್ದಾರ್‌ಗಳಿಗೆ ಅಧಿಕಾರ ವಿಕೇಂದ್ರೀಕರಣಗೊಳಿಸಿ ಆದೇಶ ಹೊರಡಿಸಬೇಕು.

ಅನುದಾನ ಬೇಡಿಕೆ:ಮಳೆಹಾನಿ ಸೇರಿದಂತೆ ಜಿಲ್ಲೆಯ ವಿಪತ್ತು ನಿರ್ವಹಣೆಗೆ ಬೇಕಾದ ಅನುದಾನ ಕುರಿತಂತೆ ತಕ್ಷಣವೇ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ. ಅಗತ್ಯ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಸೂಚನೆ ನೀಡಿದರು.

ಯೂರಿಯಾ ಸಮಸ್ಯೆ ಬಗೆಹರಿಸಿ:ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಯೂರಿಯಾ ಗೊಬ್ಬರದ ಕೊರತ ಉಂಟಾಗಿದೆ. ಕೆಲ ತಾಲ್ಲೂಕು ಹಾಗೂ ಹೋಬಳಿಗಳಿಗೆ ಹೆಚ್ಚು ಯೂರಿಯಾ ಪೂರೈಕೆಯಾದರೆ ಕೆಲವೆಡೆ ಕಡಿಮೆ ಪೂರೈಕೆಯಾಗಿದೆ. ಯೂರಿಯಾ ಕೊರತೆಯನ್ನು ತಕ್ಷಣವೇ ಪರಿಹರಿಸಬೇಕು. ಜಿಲ್ಲಾಧಿಕಾರಿ ವೈಯಕ್ತಿಕ ಗಮನಹರಿಸಿ ಸಮಸ್ಯೆ ನಿವಾರಿಸಬೇಕು. ಗೊಬ್ಬರದ ಪೂರೈಕೆಗೆ ಸಮಂಬಂಧಿಸಿದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ನಿವಾರಿಸುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT