ಶಂಕಿತ ನಕಲಿ ವೈದ್ಯನಿಂದ ಬೆದರಿಕೆ!

7

ಶಂಕಿತ ನಕಲಿ ವೈದ್ಯನಿಂದ ಬೆದರಿಕೆ!

Published:
Updated:

ಹಾವೇರಿ:  ಶಂಕಿತ ನಕಲಿ ವೈದ್ಯನ ಕುರಿತು ವಿಚಾರಿಸಲು ಹೋದ ನಗರದ ಶೀಗಿಹಳ್ಳಿ ಶಿವಪ್ಪ ಮೆಮೋರಿಯಲ್ ಆಸ್ಪತ್ರೆಯ ವೈದ್ಯ ಡಾ. ಎಸ್.ಡಿ. ಶೀಗಿಹಳ್ಳಿಗೆ, ಆತನೇ ಮಚ್ಚು ಹಿಡಿದು ಬೆದರಿಸಿದ ಘಟನೆ ನಗರದ ವೈಭವ್ ಲಕ್ಷ್ಮೀ ಪಾರ್ಕ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. 

‘ಇಲ್ಲಿನ ವೈಭವ್‌ ಲಕ್ಷ್ಮೀ ಪಾರ್ಕ್‌ ಬಡಾವಣೆಯಲ್ಲಿ ಡಾ.ಎಸ್.ಆರ್. ಹುಲ್ಲಾಳ (ಬಿಎಎಂಎಸ್) ಎಂಬ ನಾಮಫಲಕ ಹಾಕಿಕೊಂಡಿದ್ದ ಮನೆಯೊಂದರಲ್ಲಿ ನಮ್ಮ ಆಸ್ಪತ್ರೆಯ ಹೆಸರು ಹೊಂದಿದ ಚೀಟಿಯಲ್ಲಿ ವೈದ್ಯಕೀಯ ಶಿಫಾರಸುಗಳನ್ನು ಬರೆದು ಕೊಡಲಾಗುತ್ತಿತ್ತು.  ಈ ಕುರಿತು ದೃಢಪಡಿಸಿಕೊಳ್ಳಲು, ನಮ್ಮ ಆಸ್ಪತ್ರೆ ಸಿಬ್ಬಂದಿಯು ರೋಗಿಯಂತೆ ನಟಿಸಿಕೊಂಡು ಹೋಗಿದ್ದರು. ಆಗ, ಶಂಕಿತ ನಕಲಿ ವೈದ್ಯನು ತಪಾಸಣೆ ನಡೆಸಿ ಚೀಟಿ ನೀಡಿದ್ದಾನೆ. ಆ ಮೂಲಕ ನಮ್ಮ ಆಸ್ಪತ್ರೆ ಹೆಸರನ್ನು ದುರುಪಯೋಗ ಪಡಿಸುವುದು ದೃಢಪಟ್ಟಿತ್ತು. ಇದನ್ನು ವಿಚಾರಿಸಲು ಹೋಗಿದ್ದೆನು. ಆದರೆ, ಆತನು ಏಕಾಏಕಿ ಮಚ್ಚು ಹಿಡಿದು ಬೆದರಿಸಿದ್ದಾನೆ. ಜೊತೆಗೆ ಇತರರು ಇದ್ದ ಕಾರಣ ಅಪಾಯ ಸಂಭವಿಸಿಲ್ಲ’ ಎಂದು ವೈದ್ಯ ಡಾ.ಎಸ್.ಡಿ. ಶೀಗಿಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆತನ ವಿರುದ್ಧ ದೂರು ದಾಖಲಿಸಲಾಗುವುದು ಎಂದರು. ಸ್ಥಳಕ್ಕೆ ಬಂದ ಡಿವೈಎಸ್ಪಿ ಕುಮಾರಪ್ಪ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಪ್ರಭಾಕರ ಕುಂದೂರ ಮನೆ ಪರಿಶೀಲನೆ ನಡೆಸಿದರು.

‘ಈ ಮನೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿನ ಔಷಧಿಗಳು ದೊರೆತಿವೆ. ಎಸ್‌.ಆರ್. ಹುಲ್ಲಾಳ ಅವರ ಪತ್ನಿ ಸಿ.ಎಸ್. ಹುಲ್ಲಾಳ ಆರೋಗ್ಯ ಇಲಾಖೆಯ ಶುಶ್ರೂಷಕಿಯಾಗಿದ್ದು, ಈಚೆಗೆ ನಿವೃತ್ತಿ ಹೊಂದಿದ್ದಾರೆ. ಅವರು ಔಷಧಿಯನ್ನು ಇರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಪರಿಶೀಲಿಸಿ, ದೂರು ದಾಖಲಿಸಿಕೊಳ್ಳಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !