ಸೋಮವಾರ, ಜನವರಿ 24, 2022
23 °C
ಹಿರೇಕೆರೂರು: ಕೃಷಿ ಸಚಿವರಿಂದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ

ಹಾವೇರಿಯಲ್ಲಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ ದರ್ಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರೇಕೆರೂರು: ‘ರೈತರು ಭೂಮಿತಾಯಿಯನ್ನು ನಂಬಿ ದುಡಿಯುತ್ತಾರೆ, ಪ್ರೀತಿಯಿಂದ ಬೆಳೆ ಬೆಳೆಯುತ್ತಾರೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು. ರೈತರು ಮತ್ತು ಸೈನಿಕರು ಈ ದೇಶದ ಬೆನ್ನೆಲುಬು’ ಎಂದು ಕೃಷಿ ಇಲಾಖೆ ರಾಯಭಾರಿ ಮತ್ತು ನಟ ದರ್ಶನ್‌ ತೂಗುದೀಪ ಅಭಿಪ್ರಾಯಪಟ್ಟರು. 

ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಜನ್ಮದಿನದ ಅಂಗವಾಗಿ ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಭಿಮಾನಿಗಳು ಪ್ರೀತಿ, ಪ್ರೋತ್ಸಾಹ ನೀಡಿ ಕಲಾವಿದರನ್ನು ಬೆಳೆಸುತ್ತಾರೆ. ಎಲ್ಲ ಕಲಾವಿದರ ಮೇಲೆ ನಿಮ್ಮ ಅಭಿಮಾನ ಮತ್ತು ಪ್ರೀತಿ ಸದಾ ಇರಲಿ ಎಂದು ಮನವಿ ಮಾಡಿದರು. ಬಿ.ಸಿ.ಪಾಟೀಲ ಅವರು ಪೊಲೀಸ್‌, ನಟ, ನಿರ್ಮಾಪಕ, ಶಾಸಕ, ಸಚಿವ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದು ಸುಲಭದ ಕೆಲಸವಲ್ಲ. ಯಾವುದೇ ಕೆಲಸವಾಗಲಿ ಗುರಿಯಿಟ್ಟು ಮಾಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಹೇಳಿದರು. 

ಚಿನ್ನಮುಳಗುಂದ ಹಾಗೂ ಎತ್ತಿನಹಳ್ಳಿ (ಎಂ.ಕೆ) ಗ್ರಾಮದಲ್ಲಿ ಭಾನುವಾರ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಟ ದರ್ಶನ್ ಅವರನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಮಾರ್ಗ ಮಧ್ಯದಲ್ಲಿ ಬರುವ ಹಳ್ಳಿಗಳಲ್ಲಿ ದರ್ಶನ್ ಅವರನ್ನು ನೋಡಲು ಸಾಕಷ್ಟು ಜನ ನೆರೆದಿದ್ದರು. ಪಟಾಕಿ ಸಿಡಿಸಿ, ‘ಡಿ ಬಾಸ್’ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. 

ಚಿನ್ನಮುಳಗುಂದ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ, ನಟ ದರ್ಶನ್ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಹಿಳೆಯರು ಕುಂಭ ಹೊತ್ತು ಸಾಗಿದರು. ಎತ್ತಿನಹಳ್ಳಿ ಗ್ರಾಮದ ಮುಖ್ಯ ಬೀದಿಯಲ್ಲಿ ಗೋವಿನಜೋಳದ ತೆನೆಗಳಿಂದ ಅಲಂಕರಿಸಿದ ಎತ್ತಿನ ಬಂಡಿ ಗಮನಸೆಳೆಯಿತು. 

ರೈತರಿಗೆ ಆತ್ಮಸ್ಥೈರ್ಯ

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ನನ್ನ ಜನ್ಮ ದಿನವನ್ನು ರೈತರೊಂದಿಗೆ ಆಚರಿಸಬೇಕೆಂಬ ಉದ್ದೇಶದಿಂದ ಕಳೆದ ವರ್ಷ ಮಂಡ್ಯ ಜಿಲ್ಲೆಯ ಮಡುವಿನಕೋಣೆ ಎಂಬ ಹಳ್ಳಿಯಲ್ಲಿ ಆಚರಿಸಿಕೊಂಡಿದ್ದೆ. ಈ ಬಾರಿ ನಮ್ಮ ತಾಲ್ಲೂಕಿನ ರೈತರೊಂದಿಗೆ ಕಾರ್ಯಕ್ರಮ ಮಾಡಿ ರೈತರ ಸಮಸ್ಯೆ ಆಲಿಸಬೇಕು. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಜತೆಗೆ ರೈತರಲ್ಲಿ ಆತ್ಮಸ್ಥೈರ್ಯ ತುಂಬಬೇಕು’ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಿಶ್ರಬೆಳೆ ಪದ್ಧತಿ ಅನುಸರಿಸಿ

ರೈತರು ಒಂದೇ ಬೆಳೆಗೆ ಸೀಮಿತವಾಗದೇ ಮಿಶ್ರಬೆಳೆ ಪದ್ಧತಿಯನ್ನು ರೂಢಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ತರಕಾರಿ, ಹೂವು ಹಣ್ಣು ಬೆಳೆಯಲು ಮುಂದಾಗುವ ಮೂಲಕ ಆರ್ಥಿಕವಾಗಿ ಮತ್ತಷ್ಟು ಸದೃಢರಾಗಬೇಕು. ಸಮಗ್ರ ಕೃಷಿಯೊಂದಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆಯಂತಹ ಉಪಕಸುಬುಗಳನ್ನು ಕೈಗೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸೃಷ್ಟಿ ಪಾಟೀಲ, ದೊಡ್ಡಗೌಡ ಪಾಟೀಲ, ಗುರುಶಾಂತ ಯತ್ತಿನಹಳ್ಳಿ, ರೈತರು, ಅಭಿಮಾನಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು