ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಬಿಲ್‌ ಪಾವತಿಗೆ ಆಗ್ರಹ: ಸಕ್ಕರೆ ಲಾರಿಗಳನ್ನು ತಡೆದು ಬೆಳೆಗಾರರ ಆಕ್ರೋಶ

Published 8 ಫೆಬ್ರುವರಿ 2024, 5:38 IST
Last Updated 8 ಫೆಬ್ರುವರಿ 2024, 5:38 IST
ಅಕ್ಷರ ಗಾತ್ರ

ಹಾವೇರಿ: ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘದಿಂದ ಬುಧವಾರ ತಾಲ್ಲೂಕಿನ ಸಂಗೂರ ಸಕ್ಕರೆ ಕಾರ್ಖಾನೆ ಗೇಟ್‍ಗೆ ಬೀಗ ಜಡಿದು ಪ್ರತಿಭಟಿಸಿದರು.

ತಾಲ್ಲೂಕಿನ ಸಂಗೂರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು ಸಕ್ಕರೆ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು, ಬಾಕಿ ಬಿಲ್ ಪಾವತಿಸುವ ತನಕ ಕಾರ್ಖಾನೆಯಿಂದ ಲಾರಿಗಳನ್ನು ಹೊರಗಡೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಕಬ್ಬು ಸಾಗಿಸಿ ಎರಡು ತಿಂಗಳು ಕಳೆದರೂ ಕಾರ್ಖಾನೆ ಮಾಲೀಕರು ಕಬ್ಬು ಪೂರೈಸಿ ರೈತರಿಗೆ ಹಣ ಪಾವತಿ ಮಾಡದೇ ಸತಾಯಿಸುತ್ತಿದ್ದಾರೆ. ಜಿ.ಎಂ ಶುಗರ್ಸ್ ಒಡೆತನದಲ್ಲಿ ನಡೆಯುತ್ತಿರುವ ಈ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರಿಗೆ ನೀಡಬೇಕಾದ ₹50 ಕೋಟಿಗೂ ಹೆಚ್ಚಿನ ಹಣ ಬಾಕಿ ಇಟ್ಟುಕೊಂಡಿದೆ ಎಂದು ದೂರಿದರು. 

ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಬರಗಾಲ ಎದುರಾಗಿದ್ದು ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಪೂರೈಸಿದ ಕಬ್ಬಿಗೆ ಕಾರ್ಖಾನೆ ಮಾಲೀಕರು ನಿಗದಿತ ಅವಧಿ ಒಳಗಾಗಿ ಹಣ ಪಾವತಿ ಮಾಡದೇ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದಾರೆ. ಕೂಡಲೇ ರೈತರಿಗೆ ಬಾಕಿ ಹಣ ಪಾವತಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಕಾರ್ಖಾನೆಯ ಮಾಲೀಕರು ಆಗಮಿಸಬೇಕು ಎಂದು ರೈತರು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದು, ಹಣ ಹಾಕದಿದ್ದರೆ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ಪ್ರಮುಖರಾದ ನಾಗರಾಜ ಕೋಡಿಬಸನಗೌಡ್ರ, ಸಿದ್ದರಾಮಗೌಡ ಕರೇಗೌಡ್ರ, ಗುರುನಂಜಪ್ಪ ಚಂದ್ರಗಿರಿ, ಖಾಜಾಮೈನುದ್ದೀನ್ ಬಂಕಾಪೂರ, ಶ್ರೀಕಾಂತ ನರೇಗಲ್ಲ, ಮಾಲತೇಶ ಆಲದಕಟ್ಟಿ, ರೇವಣಪ್ಪ ಪರಪ್ಪನವರ ಇತರರು ಇದ್ದರು.

ಕಬ್ಬು ಬೆಳೆಗಾರರಿಗೆ ಕಡಿಮೆ ದರ: ಆಕ್ರೋಶ

‘ಪ್ರಸಕ್ತ ವರ್ಷ ಒಂದು ಟನ್ ಕಬ್ಬಿಗೆ ₹3050 ದರ ನಿಗದಿ ಮಾಡಿದ್ದು ಅದರಲ್ಲಿ ಅವರು ₹3024 ಮಾತ್ರ ರೈತರಿಗೆ ಪಾವತಿ ಮಾಡುತ್ತಿದ್ದಾರೆ. ಇನ್ನುಳಿದ ₹26 ಹಾಕಿರುವುದಿಲ್ಲ. ಕಬ್ಬು ಪೂರೈಸಿ ಎರಡು ತಿಂಗಳು ಕಳೆದರೂ ರೈತರಿಗೆ ಹಣ ಹಾಕಿಲ್ಲ’ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಅಸಮಾಧಾನ ವ್ಯಕ್ತಪಡಿಸಿದರು.  ಈಗಾಗಲೇ 3.60 ಲಕ್ಷ ಟನ್ ಕಬ್ಬು ಅರೆದಿದ್ದು ಈವರೆಗೆ ಸುಮಾರು 80 ಸಾವಿರ ಟನ್ ಕಬ್ಬಿಗೆ ಮಾತ್ರ ಹಣ ಹಾಕಿದ್ದಾರೆ. ಡಿ.13ರವರೆಗೆ ಮಾತ್ರ ಬಿಲ್ ಪಾವತಿಸಿದ್ದು ನಂತರ ಯಾವುದೇ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಸಿಲ್ಲ ಎಂದು ದೂರಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT