ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹2 ಸಾವಿರ ಬರ ಪರಿಹಾರ ನೀಡಿದ್ದಕ್ಕೆ ಕಿಡಿ; ಸಿಎಂಗೆ ₹2,100 ಚೆಕ್ ಕಳುಹಿಸಿದ ರೈತರು

ಶಾಸಕರ ಸಂಧಾನಕ್ಕೆ ಒಪ್ಪದ ರೈತರು 
Published 25 ಜನವರಿ 2024, 22:24 IST
Last Updated 25 ಜನವರಿ 2024, 22:24 IST
ಅಕ್ಷರ ಗಾತ್ರ

ಹಾವೇರಿ: ಬರ ಪರಿಹಾರವಾಗಿ ಸರ್ಕಾರ ₹2 ಸಾವಿರ ಪರಿಹಾರ ನೀಡಿದ್ದಕ್ಕೆ ತಿರುಗೇಟು ನೀಡಿರುವ ಜಿಲ್ಲೆಯ ರೈತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ₹2,100 ಮೊತ್ತದ 70ಕ್ಕೂ ಹೆಚ್ಚು ಚೆಕ್‌ಗಳನ್ನು ಬರೆದು ಗುರುವಾರ ಪೋಸ್ಟ್ ಮಾಡಿದ್ದಾರೆ.

ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಜ.23ರಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ನೂರಾರು ರೈತರು, ಎಕರೆಗೆ ₹25 ಸಾವಿರ ಬರ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ. 

ಬೆಳೆನಷ್ಟ ಪರಿಹಾರ ನೀಡದಿದ್ದರೆ ಜ.26ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣಕ್ಕೆ ಅವಕಾಶ ಕೊಡುವುದಿಲ್ಲ, ರೈತರೇ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಸವಾಲು ಹಾಕಿದರು.

ರೈತರೊಂದಿಗೆ ಸಂಧಾನ: ಇದರಿಂದ ಎಚ್ಚೆತ್ತ ಜಿಲ್ಲೆಯ ಶಾಸಕರು ರೈತರೊಂದಿಗೆ ಸಂಧಾನ ಸಭೆ ನಡೆಸಿದರು. ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ.ಬಣಕಾರ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿದರು. ಆದರೆ, ರೈತರು ಸಂಧಾನಕ್ಕೆ ಮಣಿಯಲಿಲ್ಲ.

ಜಿಲ್ಲಾಧಿಕಾರಿ ಅವರು ಧ್ವಜಾರೋಹಣ ನೆರವೇರಿಸಲಿ, ಇಲ್ಲವೇ ಜಿಲ್ಲೆಯ ಶಾಸಕರು ಧ್ವಜಾರೋಹಣ ಮಾಡಿದರೆ ಆಕ್ಷೇಪವಿಲ್ಲ. ಆದರೆ, ರೈತರ ಬಗ್ಗೆ ಕಾಳಜಿಯಿಲ್ಲದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಧ್ವಜಾರೋಹಣ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು.

ಸಚಿವರ ಭರವಸೆ: ಧರಣಿ ಅಂತ್ಯ

ಮುಖ್ಯಮಂತ್ರಿ ಬಳಿ ರೈತರ ನಿಯೋಗ ಕರೆದೊಯ್ದು ಬರ ಪರಿಹಾರ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ನೀಡಿದ ಭರವಸೆ ಮೇರೆಗೆ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ರೈತರು ಗುರುವಾರ ರಾತ್ರಿ ಅಂತ್ಯಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT