ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪಂದಿರ ದಿನ’ದ ವಿಶೇಷ; ಅಪ್ಪನಿಗೊಂದು ನುಡಿನಮನ

Last Updated 15 ಜೂನ್ 2019, 19:30 IST
ಅಕ್ಷರ ಗಾತ್ರ

ಅಪ್ಪನ ಕಂಡ್ರೆ ಈಗ್ಲೂ ಹೆದ್ರುತೀನಿ

ನನ್ನ ಅಪ್ಪ ಕಲ್ಲಪ್ಪ. ಅವರನ್ನು ಕಂಡ್ರೆ ಒಂದ್ ಥರಾ ಭಯ, ಒಂದ್ ಥರಾ ಗೌರವ. ಬಾಲ್ಯದಲ್ಲಂತೂ ಅವರು ಒಂದು ರಸ್ತೆಯಲ್ಲಿ ಬರುತ್ತಿದ್ದರೆ, ನಾನು ಇನ್ನೊಂದು ರಸ್ತೆಯಲ್ಲಿ ಓಡಾಡ್ತಿದ್ದೆ. ಅವರಿಗೀಗ 70 ವರ್ಷ. ಮಗ ಪೊಲೀಸ್ ಅಧಿಕಾರಿಯಾದರೂ ಸೊರಬ ತಾಲ್ಲೂಕು ಮುಟಗುಪ್ಪೆಯಲ್ಲಿ (ಸ್ವಂತ ಊರು) ವ್ಯವಸಾಯ ಮಾಡ್ತಾರೆ. ಈಗಲೂ ಅವರ ನಡತೆಯೇ ನನಗೆ ಮಾರ್ಗದರ್ಶನ. ಅವರಿಂದ ಸ್ವಾಭಿಮಾನದ ಪಾಠ ಕಲಿತುಕೊಂಡೆ.

ಒಂದನೇ ತರಗತಿಯಲ್ಲಿದ್ದಾಗ ಶಾಲೆಗೆ ಹೋಗ್ಲಿಲ್ಲ ಅನ್ನೋ ಕಾರಣಕ್ಕೆ ಅಪ್ಪ ಪೆಟ್ಟು ಕೊಟ್ಟಿದ್ದನ್ನು ಬಿಟ್ರೆ, ಮತ್ತೆಂದೂ ನನ್ನ ಮೇಲೆ ಕೈ ಮಾಡ್ಲಿಲ್ಲ.‌ ಹೀಗೆ ಮಾಡು, ಹಾಗೆ ಮಾಡು ಅಂತ ಸಿದ್ಧಾಂತಗಳನ್ನೂ ಹೇರಲಿಲ್ಲ. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಬಿಟ್ಟರು. ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತ್ಕೊಂಡ್ರು.

ಈಗ ನಾನು ಪೊಲೀಸ್ ಅಧಿಕಾರಿಯಾಗಿರಬಹುದು. ಸಿಬ್ಬಂದಿ ನನಗೆ ಸೆಲ್ಯೂಟ್ ಮಾಡಬಹುದು. ಆದರೆ, ನನ್ನ ಸೆಲ್ಯೂಟ್ ನನ್ನ ಅಪ್ಪನಿಗೆ. ಅವರನ್ನು ಕಂಡರೆ ಈಗಲೂ ಹೆದರ್ತೀನಿ. ಅಪ್ಪ ಕೂಗು ಹಾಕಿದರೆ ಬೆವರ್ತೀನಿ. ಬಾಲ್ಯದಿಂದಲೂ ನನಗೆ ತಾಯಿ ಜತೆ ಒಡನಾಟ ಹೆಚ್ಚು. ಅಮ್ಮ ಎಂದರೆ ಪ್ರೀತಿ. ಅಪ್ಪ ಎಂದರೆ ಕಾಳಜಿ ಎಂಬ ಮಾತು ಎಷ್ಟೊಂದು ಸತ್ಯ ಎನಿಸುತ್ತದೆ.

ಕೆ.ಪರಶುರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾವೇರಿ

**

ನನ್ನ ಬದುಕಿನ ರಿಯಲ್ ಹೀರೊ

ತಂದೆ ಬಿ.ಸಿ.ಪಾಟೀಲ. ಹಿರೇಕೆರೂರ ಕ್ಷೇತ್ರದ ಶಾಸಕ. ಅವರು ನನಗೆ ಅತ್ಮೀಯ ಸ್ನೇಹಿತ. ಅಪ್ಪ ನನ್ನನ್ನು ಎಂದೂ ಹಿಡಿದಿಟ್ಟಿಲ್ಲ. ನಾನು ಏನೇ ನಿರ್ಧಾರ ತೆಗೆದುಕೊಂಡರೂ, ಜತೆಗೆ ನಿಂತುಕೊಂಡರು. ಅದೇ ಕಾರಣದಿಂದ ನಾನು ಸಿನಿಮಾ ಕ್ಷೇತ್ರ ಪ್ರವೇಶಿಸಿದೆ. ಬಿಸಿನೆಸ್ ಪ್ರಾರಂಭಿಸಿದೆ. ಸಂಸ್ಥೆ ಕಟ್ಟಿದೆ. ರಾಜಕೀಯ ರಂಗದಲ್ಲೂ ಗುರುತಿಸಿಕೊಂಡೆ.

ಅಪ್ಪನಿಂದ ನಾನೆಂದು ಪೆಟ್ಟು ತಿಂದಿಲ್ಲ. ಬೈಸ್ಕೊಂಡಿದ್ದೂ ತುಂಬ ಕಡಿಮೆ. 25 ವರ್ಷ ಪೊಲೀಸ್ ಇಲಾಖೆಯಲ್ಲಿದ್ರು. ಆ ನಂತರ ಸಿನಿಮಾ. ಕೊನೆಗೆ ರಾಜಕೀಯ. ಹೀಗಾಗಿ, ಅವರು ಮನೆಯಲ್ಲಿ ಇರುವುದಕ್ಕಿಂತ ಹೊರಗಿದ್ದಿದ್ದೇ ಜಾಸ್ತಿ. ಅಪ್ಪ ಈ ಬಾರಿ ಚುನಾವಣೆಯಲ್ಲಿ ಗೆದ್ದಾಗ ತುಂಬ ಸಂತಸವಾಯಿತು. ಖುಷಿಯಲ್ಲಿ ಕಣ್ಣೀರು ಬರುತ್ತಿತ್ತು. ನನ್ನ ಜೀವನದಲ್ಲಿ ಮರೆಯಲಾಗದ ದಿನವದು.

ಚಿಕ್ಕವಳಿದ್ದಾಗ ನಾನು ಹಾಗೂ ಅಪ್ಪ ‘ಕಳ್ಳ–ಪೊಲೀಸ್’ ಆಟವಾಡುತ್ತಿದ್ದೆವು. ಅವರ ಜೀಪ್ ಸೈರನ್ ಸದ್ದು ಕೇಳುತ್ತಿದ್ದಂತೆಯೇ ನಾನು ಮನೆಯಲ್ಲಿ ಅವಿತುಬಿಡುತ್ತಿದ್ದೆ. ಅವರು ಹುಡುಕುತ್ತಿದ್ದರು. ಪೊಲೀಸ್ ಅಧಿಕಾರಿಯಾಗಿ, ರಾಜಕಾರಣಿಯಾಗಿ, ನಟರಾಗಿ, ಒಳ್ಳೆಯ ಅಪ್ಪನಾಗಿ ಅವರು ಯಾವಾಗಲೂ ನನ್ನ ಬದುಕಿನಲ್ಲಿ ರಿಯಲ್ ಹೀರೋನೆ. ಐ ಲವ್‌ ಯೂ ಅಪ್ಪಾ...

ಸೃಷ್ಟಿ, ನಟಿ

**

ಪ್ರತಿ ಹೆಜ್ಜೆಯಲ್ಲೂ ಅಪ್ಪನ ಚಿಂತನೆ

ನನ್ನಪ್ಪ ಚನ್ನಬಸಪ್ಪ ಗುಡ್ಡಪ್ಪ ಓಲೇಕಾರ. ಬ್ರಿಟೀಷ್ ಆಡಳಿತದಲ್ಲಿ ಕೆಲಸ ಮಾಡಿರುವ ಅವರು ಶಿಸ್ತಿನ ಸಿಪಾಯಿ. ನಾನು ಚೆನ್ನಾಗಿ ಓದಬೇಕು ಎಂಬುದಷ್ಟೇ ಅವರ ಮಹದಾಸೆಯಾಗಿತ್ತು. ಅವರಿಗೆ ನಾನೆಂದರೆ ವಿಪರೀತ ಪ್ರೀತಿ. ಎತ್ತರ ಮಟ್ಟದಲ್ಲಿ ಮಗನನ್ನು ಕಾಣಬೇಕೆಂದು ಬಹಳ ಕಷ್ಟಪಟ್ಟರು. ಇದ್ದಷ್ಟು ದಿನದಲ್ಲಿ ಯಾವುದೇ ಹಂತದಲ್ಲೂ ಕೋಪ ಮಾಡಿಕೊಳ್ಳದೆ ಬದುಕಿದ್ದ ಜೀವ ಅದು.

ಮಗ ಶಾಲೆಗೆ ಹೋಗ್ತಾನೋ, ಇಲ್ವೊ ಅಂತ ನಿಗಾ ಇಡುತ್ತಿದ್ದರು. ಅವರ ಒತ್ತಾಸೆ ಹಾಗೂ ಒತ್ತಡದಿಂದ ತುಂಬ ಚೆನ್ನಾಗಿ ಓದಿ ಎಂ.ಎ ಮುಗಿಸಿದ್ದೆ. ಅವರು ಇದ್ದಾಗಲೇ ಎರಡು ಕಾಲೇಜುಗಳಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಅವರನ್ನು ಕಂಡರೆ ನನಗೆ ಭಯ ಏನಿರಲಿಲ್ಲ. ಮನಸ್ಸಿನ ತುಂಬ ಪೂರ್ತಿ ಭಕ್ತಿ–ಗೌರವ ತುಂಬಿತ್ತು.

ಜವಾಬ್ದಾರಿ, ಶಿಸ್ತು, ನಿಷ್ಠೆಯ ಗುಣಗಳು ನನಗೆ ಅವರಿಂದಲೇ ಬಂದಿದ್ದು. ಈಗ ಏನೇ ನಿರ್ಧಾರ ತೆಗೆದುಕೊಂಡರೂ, ಅದರಲ್ಲಿ ಅವರ ಚಿಂತನೆಗಳೇ ಇರುತ್ತವೆ. ಅವರ ಜತೆ ನಿಂತು ಒಂದೂ ಫೋಟೊ ತೆಗೆಸಿಕೊಂಡಿಲ್ಲ ಎಂಬ ಕೊರಗು ಈಗಲೂ ಕಾಡುತ್ತದೆ. ಚನ್ನಬಸಪ್ಪನಿಗೆ ಚನ್ನಬಸಪ್ಪನೇ ಸಾಟಿ.

ನೆಹರು ಓಲೇಕಾರ, ಹಾವೇರಿ ಶಾಸಕ

**

‘ರಾಜ್ಯವೇ ಕೊಂಡಾಡುವಂತೆ ಮಾಡಿದ’

ಅಪ್ಪ ಹುಸೇನ್ ಸಾಬ್ ನದಾಫ್. ಅವನೇನನ್ನ ಆಸ್ತಿ. ನನ್ನ ಕನಸು. ಕೂಲಿ–ನಾಲಿ ಮಾಡಿ, ಹೊಲದಲ್ಲಿ ಬೆವರು ಹರಿಸಿ ನನ್ನನ್ನು ಇಡೀ ರಾಜ್ಯವೇ ಕೊಂಡಾಡುವಂತೆ ಮಾಡಿದ್ದಾನೆ. ಎಲ್ಲರ ಯಶಸ್ಸಿಗೂ ಸೂತ್ರಧಾರ ಅಪ್ಪನೇ ಆಗಿರುತ್ತಾನೆ.‌ ಆದರೆ, ಮಕ್ಕಳಿಗೆ ಕಾಣುವುದು ಅಮ್ಮನ ಪ್ರೀತಿಯಷ್ಟೇ.‌

ನಾವು ನಾಲ್ಕು ಜನ ಮಕ್ಕಳು. ನಾನೇ ದೊಡ್ಡವಳು. ಮನೆಯಲ್ಲಿ ಬಡತನ ಬಿಟ್ಟರೆ, ಪ್ರೀತಿಗೆ ಎಂದೂ ಕೊರತೆ ಇಲ್ಲ. ಅಪ್ಪ ಪಡುತ್ತಿರುವ ಕಷ್ಟವನ್ನು ತಿಳಿಯುವಷ್ಟು ಜ್ಞಾನವಂತೂ ಬೆಳೆದಿದೆ. ನಾನು ‘ಸರಿಗಮಪ’ ರಿಯಾಲಿಟಿ ಶೋಗೆ ಆಯ್ಕೆಯಾದಾಗ ಅವನ ಖುಷಿಗೆ ಮಿತಿಯೇ ಇರಲಿಲ್ಲ. ಶಾಲೆಯಲ್ಲಿ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಮಗಳನ್ನು ಇನ್ನು ಇಡೀ ರಾಜ್ಯವೇ ನೋಡುತ್ತದೆ ಎಂದು ಗೊತ್ತಾಗುತ್ತಿದ್ದಂತೆಯೇ ಊರಿಗೆಲ್ಲ ಸಿಹಿ ಹಂಚಿ ಸಂಭ್ರಮಿಸಿದ್ದ.

ನಾನು ಸ್ವಲ್ಪ ಮುನಿಸಿಕೊಂಡರೂ, ಅಪ್ಪನ ಆರೋಗ್ಯ ಕೆಡುತ್ತಿತ್ತು. ಈಗಲೂ ಆತ ತನ್ನ ಕಷ್ಟಗಳು ಮಕ್ಕಳಿಗೆ ಗೊತ್ತಾಗದಂತೆ ಮುಚ್ಚಿಡುತ್ತಾನೆ. ಅವನ ಸಹನೆ, ಪ್ರೀತಿಯೇ ನನಗೆ ಸ್ಪೂರ್ತಿ. ಅವರು ಇದ್ದಾರೆ ಅನ್ನೋ ಧೈರ್ಯದಲ್ಲೇ ನಾನು ಯಾರ ಎದುರೂ ಸೋಲಲ್ಲ. ಅವನೇ ನನ್ನ ದೇವರು. ‘ನಾನು ನೋಡಿದ ಮೊದಲ ವೀರ... ಬಾಳು ಕಲಿಸಿದ ಸಲಹೆಗಾರ... ಬೆರಗು ಮುಡಿಸೋ ಜಾದೂಗಾರ... ಅಪ್ಪಾ...’ ನನ್ನ ನೆಚ್ಚಿನ ಹಾಡು.

**

ಅಪ್ಪ ನನ್ನೊಳಗಿನ ಭಾವ

ತಂದೆ ಯಾವತ್ತೂ ಕಠಿಣ ಅನ್ನಿಸ್ತಾನೆ. ಆದರೆ, ಅವನಲ್ಲಿ ಒಳ್ಳೆಯ ಹೃದಯ ಇರತ್ತೆ ಎಂಬುದು ಎಷ್ಟೋ ಮಕ್ಕಳಿಗೆ ಗೊತ್ತಿರಲ್ಲ. ನನ್ನಪ್ಪ ನೀಲಕಂಠ ರಾವ್ ಕುಲಕರ್ಣಿ ಕೂಡ ತುಂಬ ಸಿಡುಕರಾಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿದ್ದರು. ನನ್ನ ಮೇಲೆ ಅಪಾರ ಕಾಳಜಿ ಇತ್ತು. ಜೊತೆಗೆ ವಾಕಿಂಗ್ ಕರೆದುಕೊಂಡು ಹೋಗ್ತಿದ್ರು. ಅವರ ನಗೆ ನೋಡಿದಾಗ ಆತ್ಮವಿಶ್ವಾಸ ಹೆಚ್ಚುತ್ತಿತ್ತು. ಹೀಗಾಗಿ, ಅಪ್ಪನ ಮೇಲೆ ಈಗಲೂ ವಿಶೇಷ ಛಾಯೆ ಉಳಿದುಕೊಂಡಿದೆ.

ಅವರಿಗೆ ಯಾವುದೇ ಚಟಗಳು ಇರಲಿಲ್ಲ. ಆದರೂ, ಕ್ಯಾನ್ಸರ್ ಬಂದಿತ್ತು. ಅದು ನನಗೆ ಬಹಳ ನೋವಾಯ್ತು. ನಾವು ಆಗ ಹುಬ್ಬಳ್ಳಿಯಲ್ಲಿದ್ದೆವು. 1970ರ ನ.1ರಂದು ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಶಾಲು ಹೊದಿಸಿ ಸನ್ಮಾನ ಮಾಡಿದ್ದರು. ಅದೇ ವರ್ಷದ ಡಿ.20ರಂದು ಅಪ್ಪ ತೀರಿಕೊಂಡಾಗ ಆ ಶಾಲನ್ನು ಅವರ ದೇಹದ ಮೇಲೆ ಹೊದಿಸಿದ್ದೆ.

ನಾನೂ ಈಗಲೂ ನೋವಿನಲ್ಲಿದ್ರೆ, ತಲ್ಲಣಗೊಂಡಿದ್ರೆ ಅಪ್ಪ ಕನಸಿನಲ್ಲಿ ಬರ್ತಾನೆ. ‘ಯಾಕೋ ಮಲಗಿಲ್ಲ’ ಅಂತಾ ಕೇಳ್ತಾನೆ. ‘ವಿಷಾದ ಯೋಗ’ ಎಂಬ ಕವನ ಸಂಕಲನದಲ್ಲಿ ‘ಅಪ್ಪ ಸತ್ತ ರಾತ್ರಿ’ ಎಂಬ ಕವನವಿದೆ. ಆ ದಿನ ರಾತ್ರಿ ಅಪ್ಪನ ಹೆಣವನ್ನು ಹೊತ್ತುಕೊಂಡಾಗ ಇನ್ಮೇಲೆ ನನ್ನ ಹೆಗಲ ಮೇಲೆ ಜವಾಬ್ದಾರಿಗಳು ಬಂದವು ಎನಿಸಿತ್ತು. ಆ ಸಾಲುಗಳನ್ನೇ ಅದರಲ್ಲಿ ಗೀಚಿದ್ದೆ. ಅಪ್ಪ ಎಂದೆಂದಿಗೂ ನನ್ನೊಳಗಿನ ಭಾವ..

ಸತೀಶ್ ಕುಲಕರ್ಣಿ, ಸಾಹಿತಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT