ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಒಂದೂವರೆ ತಿಂಗಳಲ್ಲಿ 183 ಅಗ್ನಿ ಅವಘಡ!

ವರ್ಷದಿಂದ ವರ್ಷಕ್ಕೆ ಅಗ್ನಿಕರೆಗಳ ಹೆಚ್ಚಳ: ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ
Published 24 ಫೆಬ್ರುವರಿ 2024, 4:36 IST
Last Updated 24 ಫೆಬ್ರುವರಿ 2024, 4:36 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಭೀಕರ ಬರಗಾಲ ಮತ್ತು ಸುಡು ಬೇಸಿಗೆಯಿದ್ದು, ಉಷ್ಣಾಂಶ 37 ಡಿಗ್ರಿಗೆ ಕಾಲಿಟ್ಟಿದೆ. ಒಂದೂವರೆ ತಿಂಗಳಲ್ಲಿ ಬರೋಬ್ಬರಿ 183 ಅಗ್ನಿ ಅವಘಡಗಳು ಸಂಭವಿಸಿದ್ದು, ಜನರಲ್ಲಿ ತಳಮಳ ಸೃಷ್ಟಿಸಿವೆ.

ಈ ವರ್ಷದಲ್ಲಿ ಜನವರಿ 1ರಿಂದ ಫೆಬ್ರುವರಿ 19ರವರೆಗೆ ಸವಣೂರು–16, ಹಾನಗಲ್‌–31, ಹಾವೇರಿ–34, ಶಿಗ್ಗಾವಿ–37, ರಾಣೆಬೆನ್ನೂರು–18, ಹಿರೇಕೆರೂರು–25 ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ 22 ಅಗ್ನಿ ಅವಘಡಗಳು ಸಂಭವಿಸಿವೆ. 

ಈ 183 ಬೆಂಕಿ ದುರಂತದಲ್ಲಿ ಅಂದಾಜು ₹4 ಕೋಟಿ ಮೌಲ್ಯದ ಸಾಮಗ್ರಿಗಳು ನಷ್ಟವಾಗಿದ್ದು, ಸುಮಾರು ₹10 ಕೋಟಿ ಮೌಲ್ಯದ ವಸ್ತುಗಳನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. 

ಬ್ಯಾಡಗಿ ಪಟ್ಟಣದ ಬಸವೇಶ್ವರ ನಗರದ ಮೆಣಸಿನಕಾಯಿ ವರ್ತಕರ ಮನೆಯಲ್ಲಿ ಬೆಂಕಿ ಅವಘಡ, ಬ್ಯಾಡಗಿ ತಾಲ್ಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ಮೇವು ನಾಶ, ಕಲ್ಲೇದೇವರು ಗ್ರಾಮದಲ್ಲಿ 5 ಎಕರೆ ಪ್ರದೇಶದ ಕಬ್ಬು ಬೆಳೆ ನಾಶ, ಸವಣೂರು ತಾಲ್ಲೂಕಿನ ಕಾರಡಗಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿದ್ದ ಮೇವು ನಾಶ ಸೇರಿದಂತೆ ಹಲವು ಬೆಂಕಿ ಅವಘಡಗಳು ಜಿಲ್ಲೆಯಲ್ಲಿ ನಡೆದಿವೆ.

ಅಗ್ನಿಕರೆಗಳ ಹೆಚ್ಚಳ

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅಗ್ನಿ ಅವಘಡಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. 2021ರಲ್ಲಿ 452, 2022ರಲ್ಲಿ 657 ಹಾಗೂ 2023ರಲ್ಲಿ ಬರೋಬ್ಬರಿ 1,394 ಅಗ್ನಿ ಅವಘಡಗಳು ಸಂಭವಿಸಿವೆ. ಅದೇ ರೀತಿ ರಕ್ಷಣಾ ಕರೆಗಳು ಕ್ರಮವಾಗಿ 51, 52 ಹಾಗೂ 70 ದಾಖಲಾಗಿವೆ. 

ರಣ ಬಿಸಿಲಿಗೆ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ, ಉಷ್ಣಾಂಶ ಅಧಿಕವಾಗಿದೆ. ಇದರ ಪರಿಣಾಮ, ಕಣದಲ್ಲಿ ಒಟ್ಟಿರುವ ಬಣವೆ, ಹೊಲದಲ್ಲಿನ ಬೆಳೆಗಳು ಆಕಸ್ಮಿಕ ಬೆಂಕಿಗೆ ತುತ್ತಾಗುತ್ತಿವೆ. ಜಾನುವಾರುಗಳಿಗೆ ಕೂಡಿಟ್ಟ ಮೇವು ಮತ್ತು ಬೆಳೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸುಟ್ಟು ಕರಕಲಾಗುತ್ತಿವೆ. ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಗಾಯದ ಮೇಲೆ ಬರೆ ಬಿದ್ದಂತಾಗುತ್ತಿದೆ.

ರಟ್ಟೀಹಳ್ಳಿಗೆ ಹೊಸ ಠಾಣೆ

‘ಜಿಲ್ಲೆಯಲ್ಲಿ 7 ಅಗ್ನಿಶಾಮಕ ಠಾಣೆಗಳಿದ್ದು, ನೂತನ ತಾಲ್ಲೂಕು ರಟ್ಟೀಹಳ್ಳಿಯಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಿಸಲಾಗಿದೆ. ಸಂಪರ್ಕ ರಸ್ತೆ ನಿರ್ಮಾಣ ಬಾಕಿ ಇದ್ದು, ಗುತ್ತಿಗೆದಾರರಿಂದ ಶೀಘ್ರದಲ್ಲೇ ಇಲಾಖೆಗೆ ಹಸ್ತಾಂತರವಾಗಿ, ಕಾರ್ಯಾರಂಭಗೊಳ್ಳಲಿದೆ. ಗುತ್ತಲದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಅಲ್ಲಿ 1.20 ಎಕರೆ ಜಾಗವಿದ್ದು, ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಅನುದಾನ ಮಂಜೂರಾತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೇಕರ ತಿಳಿಸಿದರು. 

42 ಹುದ್ದೆಗಳು ಖಾಲಿ!

ಜಿಲ್ಲಾ ಅಗ್ನಿಶಾಮಕ ಇಲಾಖೆಯ ವ್ಯಾಪ್ತಿಯಲ್ಲಿರುವ 7 ಠಾಣೆಗಳಲ್ಲಿ ಒಟ್ಟು 181 ಹುದ್ದೆಗಳು ಮಂಜೂರಾಗಿದ್ದು 42 ಹುದ್ದೆಗಳು ಖಾಲಿ ಇವೆ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚಾಗುತ್ತಿರುವ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಲಭ್ಯವಿರುವ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.  ಅಗ್ನಿಶಾಮಕ ಠಾಣಾಧಿಕಾರಿ–4 ಸಹ ಅಗ್ನಿಶಾಮಕ ಠಾಣಾಧಿಕಾರಿ–1 ಪ್ರಮುಖ ಅಗ್ನಿಶಾಮಕರು–9 ಅಗ್ನಿಶಾಮಕ ಚಾಲಕರು–5 ಚಾಲಕ ತಂತ್ರಜ್ಞ–1 ಹಾಗೂ ಅಗ್ನಿಶಾಮಕರು–22 ಹುದ್ದೆಗಳು ಖಾಲಿ ಇವೆ.

ವಾಹನಗಳ ಕೊರತೆ: ಕಾರ್ಯಾಚರಣೆಗೆ ಸವಾಲು

ಹಾವೇರಿ ಜಿಲ್ಲೆಯಲ್ಲಿ ಪ್ರಸ್ತುತ 12 ಜಲವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ. 15 ವರ್ಷ ಮೇಲ್ಪಟ್ಟ ವಾಹನಗಳು ಎಂಬ ಕಾರಣದಿಂದ ರಾಣೆಬೆನ್ನೂರಿನ 2 ಮತ್ತು ಹಿರೇಕೆರೂರಿನ 1 ಸೇರಿದಂತೆ ಒಟ್ಟು 3 ಜಲವಾಹನಗಳ ಸಂಚಾರವನ್ನು ಈಚೆಗೆ ಸ್ಥಗಿತಗೊಳಿಸಲಾಗಿದೆ. ಏಪ್ರಿಲ್‌ ವೇಳೆಗೆ ಮತ್ತೆರಡು ಜಲ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಉಳಿದ 10 ಜಲವಾಹನಗಳಿಂದ 8 ತಾಲ್ಲೂಕುಗಳಲ್ಲಿ ಸಂಭವಿಸುವ ಅಗ್ನಿ ಅವಘಢಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಹೀಗಾಗಿ ಹೊಸ ವಾಹನಗಳ ಅಗತ್ಯ ಇದೆ ಎನ್ನುತ್ತಾರೆ ಇಲಾಖೆ ಸಿಬ್ಬಂದಿ. 

ಅಗ್ನಿ ಅವಘಡವಾದಾಗ ಕೂಡಲೇ ಸಹಾಯವಾಣಿ 101ಕ್ಕೆ ಆಥವಾ ಹತ್ತಿರದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ. ಸರಿಯಾದ ವಿಳಾಸ ಹೆಸರು ಮತ್ತು ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು.
ವಿನಾಯಕ ಹಟ್ಟೇಕರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT