ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ: ಮನೆ ಹಾನಿ ಸಮೀಕ್ಷೆ ಪೂರ್ಣ

Last Updated 18 ಆಗಸ್ಟ್ 2021, 14:56 IST
ಅಕ್ಷರ ಗಾತ್ರ

ಹಾವೇರಿ: ಪ್ರಸಕ್ತ ಮುಂಗಾರು ಮಳೆ ಹಾಗೂ ನೆರೆ ಹಾವಳಿಗೆ ತುತ್ತಾದ ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಗುರುವಾರ ಸಂಜೆಯೊಳಗಾಗಿ ಹಾನಿಯಾದ ಮನೆಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಕಾರ್ಯ ಪೂರ್ಣಗೊಳಿಸುವಂತೆ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣವರ ಸೂಚನೆ ನೀಡಿದರು.

ಮನೆಹಾನಿ ಸಮೀಕ್ಷೆ ಕುರಿತಂತೆ ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲೂಕಾ ಆಡಳಿತದೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ಜಿಲ್ಲೆಯಲ್ಲಿ ಒಟ್ಟಾರೆ 2,747 ಮನೆಗಳು ಹಾನಿಯಾಗಿದ್ದು, 1,230 ಮನೆಗಳ ಹಾನಿಯನ್ನು ದೃಢೀಕರಿಸಲಾಗಿದೆ. ಅಂದಾಜು ₹2.64 ಕೋಟಿ ಪರಿಹಾರ ಹಣ ಪಾವತಿಸಲಾಗಿದೆ. ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರಕ್ಕಾಗಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಸೂಚನೆ ನೀಡಿದರು.

ಈಗಾಗಲೇ ಎ, ಬಿ, ಬಿ1 ಹಾಗೂ ಸಿ ಕೆಟಗರಿ ಎಂದು ವರ್ಗೀಕರಿಸಲಾಗಿದೆ. ಸರ್ಕಾರ ಈಗಾಗಲೇ ಸ್ಪಷ್ಟಮಾರ್ಗಸೂಚಿಯನ್ನು ಹೊರಡಿಸಿದೆ. ಯಾವ ಪ್ರಮಾಣದಲ್ಲಿ ಮನೆಹಾನಿಯಾಗಿದೆ, ಎಷ್ಟು ಹಣ ಪರಿಹಾರ ಪಾವತಿಸಬೇಕು ಎಂಬುದನ್ನು ನಿರ್ಧರಿಸಿ ಈ ಸಂದರ್ಭದಲ್ಲಿ ಯಾವುದೇ ಲೋಪವಾಗಬಾರದು, ತಪ್ಪು ಅಂದಾಜು ಮಾಡಬಾರದು. ಕಳೆದ ವರ್ಷದ ಮಳೆಹಾನಿ ಸಂದರ್ಭದಲ್ಲಿ ಉಂಟಾದ ಲೋಪಗಳು ಮರುಕಳಿಸಿದರೆ ನಿರ್ದಾಕ್ಷಿಣ್ಯ ಕ್ರಮವಹಿಸಲಾಗುವುದು. ಈ ಕುರಿತಂತೆ ಎಲ್ಲ ತಹಶೀಲ್ದಾರ್‌ಗಳು ಎಚ್ಚರವಹಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ ಗಿರೀಶ ಸ್ವಾದಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿರಕ್ತಿಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಹಾಗೂ ವಿಡಿಯೊ ಸಂವಾದದ ಮೂಲಕ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT