ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯಗಳಲ್ಲಿ ಸಂತರ ದರ್ಶನ

17 ಸಾವಿರ ಕೆಂಪು ಗುಲಾಬಿಗಳಲ್ಲಿ ಅರಳಿದ ನಂದಿ: 12 ಸಾವಿರ ಹೂಗಳಲ್ಲಿ ನಳನಳಿಸಿದ ಆನೆ
Last Updated 3 ಜನವರಿ 2020, 15:40 IST
ಅಕ್ಷರ ಗಾತ್ರ

ಹಾವೇರಿ:ಹೂವಿನಲ್ಲಿ ಅರಳಿದ ನಂದಿ, ಆನೆ, ಇವುಗಳ ನಡುವೆ ಸಿರಿಧಾನ್ಯಗಳಲ್ಲಿ ತಯಾರಿಸಲಾದ ಸಿದ್ಧಗಂಗಾಮಠದ ಶಿವಕುಮಾರ ಸ್ವಾಮೀಜಿ, ಬಸವಣ್ಣ, ಲಿಂ. ಶಿವಲಿಂಗ ಹಾಗೂ ಶಿವಬಸವ ಸ್ವಾಮಿಜಿಯ ಪ್ರತಿಮೆಗಳು, ಹಣ್ಣಿನಲ್ಲಿ ಉಡುಪಿ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಭಾವಚಿತ್ರ, ರಂಗೋಲಿಯಲ್ಲಿ ಕುಮಾರೇಶ್ವರ ಹಾಗೂ ಪೇಜಾವರ ಸ್ವಾಮೀಜಿಗಳು.

ನಗರದ ಹುಕ್ಕೇರಿಮಠದ ಜಾತ್ರೆ ಅಂಗವಾಗಿ ಶುಕ್ರವಾರ ಆರಂಭಗೊಂಡ ಫಲಪುಷ್ಟ, ತೋಟಗಾರಿಕಾ ಬೆಳೆಗಳ ಪ್ರದರ್ಶನದಲ್ಲಿ ಕಂಡು ಬಂದ ಚಿತ್ರಣಗಳು.

ಕಲ್ಲಂಗಡಿ ಹಣ್ಣು ಮತ್ತು ತರಕಾರಿಗಳಲ್ಲಿ ಸಂತರು, ರಾಜಕುಮಾರ್‌, ಅಂಬೇಡ್ಕರ್‌, ಭಗತ್‌ ಸಿಂಗ್ ಮಾತ್ರವಲ್ಲ ಮೊಸಳೆ, ನವಿಲು, ಪ್ರಾಣಿ, ಶಿವಲಿಂಗ, ಮನೆಯನ್ನೂ ತಯಾರಿಸಲಾಗಿತ್ತು.

ಈ ಪ್ರದರ್ಶನದಲ್ಲಿ 17 ಸಾವಿರ ಕೆಂಪು ಗುಲಾಬಿ ಹೂಗಳಿಂದ ನಂದಿ, 12 ಸಾವಿರ ಬಿಳಿ ಹೂಗಳಿಂದ ಆನೆ, ವಿವಿಧ ಪುಷ್ಪಗಳಿಂದ ಗಂಡಭೇರುಂಡ, ಬಾತುಕೋಳಿ, ನವಿಲು ತಯಾರಿಸಲಾಗಿತ್ತು. ಸಾರ್ವಜನಿಕರು ಅವುಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಸಿರಿ ಧಾನ್ಯಗಳಿಂದ ತುಮಕೂರು ಸಿದ್ಧಗಂಗಾಮಠದ ಶಿವಕುಮಾರ ಸ್ವಾಮೀಜಿ, ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮೀಜಿ ಹಾಗೂ ಶಿವಲಿಂಗ ಸ್ವಾಮೀಜಿ ಭಾವಚಿತ್ರ, ಜಗದ್ಗುರು ಬಸವಣ್ಣ, ಭುವನೇಶ್ವರಿ ದೇವಿ, ವೀರಯೋಧ ಸ್ಮಾರಕ ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳ ಚಿತ್ರಗಳನ್ನು ಸಿರಿ ಧಾನ್ಯಗಳಲ್ಲಿ, ರಂಗೋಲಿಯಲ್ಲಿ ಬಿಡಿಸಲಾಗಿತ್ತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ರೈತರು ಬೆಳೆದ ಸಾವಯವ ತರಕಾರಿ ಬೆಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ದೊಡ್ಡ ಗಾತ್ರದ ಲಖ್ನೊ ಪೇರಲ, ಸ್ಥಳೀಯ ರೈತರು ಬೆಳೆದ ಚಿಕ್ಕು, ಡೊಣ್ಣಮೆಣಸು, ಮೆಣಸಿನಕಾಯಿ, ಟೊಮೆಟೊ, ಸೇವಂತಿಗೆ, ಚೆಂಡು, ಮಲ್ಲಿಗೆ, ಸುಗಂಧರಾಜ ಹೂಗಳನ್ನು ಪ್ರದರ್ಶನದ ಜತೆಗೆ ಅವುಗಳ ಮಾಹಿತಿಯನ್ನೂ ಸಹ ಹಾಕಲಾಗಿತ್ತು.

ಬೋನ್ಸಾಯ್‌ (ಕುಬ್ಜ ಗಿಡ)ಗಳ ಆಕರ್ಷಣೆ

ಕುಬ್ಜಗಿಡಗಳಾದ 18 ವರ್ಷ ಹಳೆಯದಾದ ಆಲದಮರ, 12 ವರ್ಷದ ಅರಳಿಮರ, ಬಿದಿರು, ಸಿಹಿನಿಂಬೆ, ಹುಣಸೆಮರ, ನೆಲ್ಲಿಕಾಯಿ, ಪಿಕಸ್‌ ಮೈಕೋ ಕಾರ್ಪಾ ಸೇರಿದಂತೆ 60 ವಿವಿಧ ತಳಿಯ ಕುಬ್ಜಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಗಮನ ಸೆಳೆದ ಭುವನೇಶ್ವರಿ ದೇವಿ

ಸಿರಿಧಾನ್ಯಗಳಲ್ಲಿ ತಯಾರಿಸಲಾದ ಭುವನೇಶ್ವರಿ ದೇವಿಯ ಪ್ರತಿಮೆ ಆಕರ್ಷಣೆ ಕೇಂದ್ರ ಬಿಂದುವಾಗಿತ್ತು. ಸಾರ್ವಜನಿಕರು ನಾಡದೇವಿಯೊಂದಿಗೆ ಸೆಲ್ಫಿ ಹಾಗೂ ಫೋಟೊ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು.

ವಿದ್ಯುತ್‌ ಅಲಂಕಾರ

ಫಲಪುಷ್ಪ ಪ್ರದರ್ಶನದಲ್ಲಿ ಆಕರ್ಷಕವಾಗಿ ಕಾಣುವಂತೆ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಕೆಂಪು ನೀಲಿ, ಹಳದಿ ಬಣ್ಣದ ಲೈಟ್‌ಗಳು ಫಲ–ಪುಷ್ಪ ಪ್ರದರ್ಶಕ್ಕೆ ಮೆರುಗು ನೀಡಿತು.

ಹುಕ್ಕೇರಿಮಠದಲ್ಲಿ ಫಲಪುಷ್ಪ ಪ್ರದರ್ಶನ ಎಲ್ಲರ ಕೇಂದ್ರ ಬಿಂದುವಾಗಿದೆ. ಹಿಂದಿನ ವರ್ಷವೂ ಸಹ ಹಾವೇರಿಯಲ್ಲಿ ಇಂತಹ ಪ್ರದರ್ಶನವಾಗಿತ್ತು. ಇಂತಹ ಪ್ರದರ್ಶನ ಮತ್ತೆ ಮರುಕಳಿಸಿರುವುದು ಖುಷಿ ತಂದಿದೆ ಎಂದು ಅಶ್ವಿನಿ ದೊಡ್ಡಗೌಡ್ರ ಹಾಗೂ ಸುಭಾಷ್‌ ಹುಲ್ಲಾಳದ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT