ಚಿನ್ನಮುಳಗುಂದ (ಹಂಸಬಾವಿ): ‘ಗರ್ಭಿಣಿಯರು ಬೆಳೆಯುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಸರ್ಕಾರದಿಂದ ನೀಡುವ ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು. ಉತ್ತಮ ದಿನಚರಿ ಹೊಂದಬೇಕು’ ಎಂದು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಶ್ರೀನಿವಾಸ ಆಲದರ್ತಿ ಹೇಳಿದರು.
ಸಮೀಪದ ಚಿನ್ನಮುಳಗುಂದ ಗ್ರಾಮದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಅಪೌಷ್ಟಿಕ ಆಹಾರ ಸೇವನೆಯಿಂದ ಹುಟ್ಟುವ ಮಗುವಿನ ಬೆಳವಣಿಗೆ ಕುಂಠಿತವಾಗುವುದಲ್ಲದೇ, ರಕ್ತಹೀನತೆಯೂ ಕಂಡು ಬರುತ್ತದೆ. ಹೀಗಾಗಿ ಆಗಾಗ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿ ಸೂಕ್ತ ಸಲಹೆ ಪಡೆದುಕೊಳ್ಳಬೇಕು’ ಎಂದರು.
ಸಿಡಿಪಿಒ ಜಯಶ್ರೀ ಪಾಟೀಲ ಮಾತನಾಡಿ, ‘ಬಾಣಂತಿಯರು ಸೇವಿಸುವ ಆಹಾರ ಪೌಷ್ಟಿಕವಾಗಿರಬೇಕು. ಸರ್ಕಾರ ಗರ್ಭಿಣಿಯರಿಗೆ, ಬಾಣಂತಿಯರ ಆರೋಗ್ಯದ ದೃಷ್ಠಿಯಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಪ್ರಯೋಜನ ಪಡೆಯಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಸಂಜೀವಯ್ಯ ಕಬ್ಬಣಿಕಂತಿಮಠ, ಮುತ್ತಪ್ಪ ಜಲಾಟಿ, ಪಿಡಿಒ ನಾಗರಾಜ ಬಣಕಾರ ಮಾತನಾಡಿದರು.
ಹಂಸಬಾವಿ ಮೇಲ್ವಿಚಾರಕಿ ಚನ್ನಮ್ಮಹಿತ್ಲರ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಗೀತಾ ಬಾಳಿಕಾಯಿ, ಶೋಭಾ ಬಿ.ಎಸ್, ಕುಸುಮಾ ಪಾಟೀಲ ಇದ್ದರು.