ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | 68,075 ಮಂದಿಗೆ ಉಚಿತ ‘ಆಶಾಕಿರಣ’

ದೃಷ್ಟಿದೋಷವುಳ್ಳವರಿಗೆ ಕನ್ನಡಕ ವಿತರಣೆ: ಕೇಂದ್ರ ಸರ್ಕಾರದ ಸಹಯೋಗ
Published : 17 ಆಗಸ್ಟ್ 2024, 4:25 IST
Last Updated : 17 ಆಗಸ್ಟ್ 2024, 4:25 IST
ಫಾಲೋ ಮಾಡಿ
Comments

ಹಾವೇರಿ: ದೃಷ್ಟಿದೋಷದಿಂದ ಬಳಲುತ್ತಿರುವ ಮಕ್ಕಳು ಹಾಗೂ ವಯಸ್ಕರನ್ನು ತಪಾಸಣೆಗೆ ಒಳಪಡಿಸಿ ಉಚಿತವಾಗಿ ಕನ್ನಡಕ ವಿತರಿಸುವ ‘ಆಶಾಕಿರಣ’ ಯೋಜನೆಗೆ ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾದ ದಿನದಿಂದ ಇದುವರೆಗೂ 68,075 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ.

ಜಿಲ್ಲೆಯ ಮಕ್ಕಳು ಹಾಗೂ ಹಿರಿಯ ನಾಗರಿಕರು ದೃಷ್ಟಿದೋಷದಿಂದ ಬಳಲುತ್ತಿದ್ದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದವು. ಜನರು ತಮ್ಮ ಕಣ್ಣುಗಳ ತಪಾಸಣೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದರು. ಕೆಲವರು ತಪಾಸಣೆ ಮಾಡಿಸಿದರೂ ದುಬಾರಿ ಎಂಬ ಕಾರಣಕ್ಕೆ ಕನ್ನಡಕ ಖರೀದಿಸುತ್ತಿರಲಿಲ್ಲ.

ಜನರ ಕಣ್ಣುಗಳ ತಪಾಸಣೆ ಹಾಗೂ ಅಂಧತ್ವ ನಿವಾರಣೆ ಉದ್ದೇಶದಿಂದ ಕೇಂದ್ರ ಸರ್ಕಾರದ ಸಹಯೋಗದಲ್ಲಿ ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಅಭಿಯಾನದಡಿ 2023ರ ಆಗಸ್ಟ್‌ನಲ್ಲಿ ‘ಆಶಾಕಿರಣ’ ಯೋಜನೆ ಜಾರಿ ಮಾಡಲಾಗಿತ್ತು. ಪ್ರಾಯೋಗಿಕವಾಗಿ ಹಾವೇರಿ, ಕಲಬುರಗಿ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಯೋಜನೆಯ ಜಾರಿ ಜವಾಬ್ದಾರಿಯನ್ನು ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗಕ್ಕೆ ವಹಿಸಲಾಗಿದೆ. ಜಿಲ್ಲೆಯ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಶಿಬಿರ ಹಮ್ಮಿಕೊಳ್ಳುತ್ತಿರುವ ವಿಭಾಗದ ಅಧಿಕಾರಿಗಳು, ದೃಷ್ಟಿದೋಷವುಳ್ಳವರನ್ನು ಗುರುತಿಸುತ್ತಿದ್ದಾರೆ.

ಯೋಜನೆಯಡಿ ನೇತ್ರ ತಪಾಸಣೆ ನಡೆಸುತ್ತಿರುವ ತಜ್ಞರು, ಅಗತ್ಯ ಇರುವವರಿಗೆ ಉಚಿತ ಕನ್ನಡಕ ನೀಡುತ್ತಿದ್ದಾರೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸಹ ಮಾಡುತ್ತಿದ್ದಾರೆ.

ಮನೆಯಲ್ಲಿ ಪ್ರಾಥಮಿಕ ತಪಾಸಣೆ: ಜಿಲ್ಲೆಯಲ್ಲಿರುವ ಹಲವು ಮನೆಗಳಿಗೆ ಭೇಟಿ ನೀಡುತ್ತಿರುವ ಆಶಾ ಕಾರ್ಯಕರ್ತೆಯರು, ಮನೆಯಲ್ಲಿಯೇ ಜನರ ಕಣ್ಣಿನ ಪ್ರಾಥಮಿಕ ತಪಾಸಣೆ ನಡೆಸುತ್ತಿದ್ದಾರೆ. ಯಾವುದಾದರೂ ಸಮಸ್ಯೆಗಳು ಕಂಡುಬಂದರೆ, ಹೆಚ್ಚಿನ ತಪಾಸಣೆಗಾಗಿ ತಜ್ಞರ ಬಳಿ ಕಳುಹಿಸುತ್ತಿದ್ದಾರೆ.

‘ಇಂದಿನ ಮಕ್ಕಳು ಹಾಗೂ ವೃದ್ಧರಲ್ಲಿ ಹೆಚ್ಚಾಗಿ ಕಣ್ಣಿನ ಸಮಸ್ಯೆಗಳು ಕಂಡುಬರುತ್ತಿವೆ. ಹೀಗಾಗಿ, ಮಕ್ಕಳು ಹಾಗೂ ವೃದ್ಧರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ತಪಾಸಣೆ ನಡೆಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇತರೆಡೆ ಶಿಬಿರ ಆಯೋಜಿಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಾಥಮಿಕ ಹಂತದ ಕಣ್ಣಿನ ತಪಾಸಣೆ, ಎರಡನೇ ಹಂತದ ಕಣ್ಣಿನ ಪರೀಕ್ಷೆ ನಂತರವೇ ಕನ್ನಡಕ ವಿತರಿಸಲಾಗುತ್ತಿದೆ. ಅಗತ್ಯವಿರುವವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸಹ ಮಾಡಲಾಗುತ್ತಿದೆ’ ಎಂದರು.

10,739 ಮಕ್ಕಳಿಗೆ ಕನ್ನಡಕ: ‘ಶಾಲೆಗಳಲ್ಲಿ ಮಕ್ಕಳ ನೇತ್ರ ತಪಾಸಣೆಗಾಗಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇದುವರೆಗೂ ಆಯೋಜಿಸಿದ್ದ ಶಿಬಿರದಲ್ಲಿ 10 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ದೃಷ್ಟಿದೋಷ ಕಂಡುಬಂದಿದೆ. ಈ ಪೈಕಿ 10,739 ಮಕ್ಕಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ’ ಎಂದು ಅಧಿಕಾರಿ ಹೇಳಿದರು.

‘18 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ವೃದ್ಧರಲ್ಲೂ ದೃಷ್ಟಿದೋಷ ಕಂಡುಬಂದಿದೆ. ಇಂಥ 57,336 ಮಂದಿಗೆ ಉಚಿತವಾಗಿ ಕನ್ನಡಕ ನೀಡಲಾಗಿದೆ. ಇನ್ನು ಹಲವರಿಗೆ ಕನ್ನಡಕ ವಿತರಣೆ ಬಾಕಿ ಇದೆ’ ಎಂದು ತಿಳಿಸಿದರು.

ಸಚಿವ ಶಿವಾನಂದ ಪಾಟೀಲ
ಸಚಿವ ಶಿವಾನಂದ ಪಾಟೀಲ
ರಾಷ್ಟ್ರೀಯ ಅಂಧತ್ವ ನಿವಾರಣೆಯಂಥ ಮಹತ್ವದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಆಶಾಕಿರಣ ಜಾರಿ ಮಾಡಲಾಗಿದ್ದು ಅಗತ್ಯವಿರುವವರಿಗೆ ಉಚಿತ ಕನ್ನಡಕ ಒದಗಿಸಲಾಗುತ್ತಿದೆ
ಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

‘ಮಕ್ಕಳಿಂದ ಮೊಬೈಲ್ ಬಳಕೆ: ಕಣ್ಣಿಗೆ ಅಪಾಯ’ ‘ಇಂದಿನ ಹಲವು ಮಕ್ಕಳು ಮೊಬೈಲ್ ಹೆಚ್ಚು ಬಳಸುತ್ತಿದ್ದಾರೆ. ಇದರಿಂದಾಗಿ ಅವರ ಕಣ್ಣಿಗೆ ಅಪಾಯ ಉಂಟಾಗುತ್ತಿದೆ. ಮೊಬೈಲ್ ಬಳಕೆಯಿಂದ ದೃಷ್ಟಿದೋಷ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಇಂಥ ಮಕ್ಕಳಿಗೆ ಈಗಾಗಲೇ ಕನ್ನಡಕ ವಿತರಣೆ ಮಾಡಲಾಗಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು. ‘ಪೋಷಕರು ಮಕ್ಕಳಿಗೆ ಹೆಚ್ಚು ಮೊಬೈಲ್ ಕೊಡಬಾರದು. ಅವರ ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಯಾವುದಾದರೂ ಸಮಸ್ಯೆ ಇದ್ದರೆ ತ್ವರಿತವಾಗಿ ತಜ್ಞರಿಗೆ ತೋರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT