ಹಾವೇರಿ: ಇಲ್ಲಿಯ ಬಸವೇಶ್ವರನಗರ ‘ಸಿ’ ಬ್ಲಾಕ್‌ನ ಮನೆಯೊಂದರಲ್ಲಿ ಕೇದಾರನಾಥ ಮಾದರಿಯನ್ನು ನಿರ್ಮಿಸಿ ‘ಶಿವ’ ಅವತಾರಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.
3ನೇ ಕ್ರಾಸ್‌ನಲ್ಲಿರುವ ಹಲಗಣ್ಣನವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಕುಟುಂಬದ ಸದಸ್ಯರು, ಪ್ರತಿ ವರ್ಷವೂ ವಿಶೇಷ ವಿಷಯ ಆಧರಿಸಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಈ ವರ್ಷ ಜನರಿಗೆ ಕೇದಾರನಾಥ ದರ್ಶನ ಮಾಡಿಸುತ್ತಿದ್ದಾರೆ.
ಸೀರೆ, ಮಕ್ಕಳ ಆಟಿಕೆಗಳು, ಸಿಮೆಂಟ್, ಮರಳು ಹಾಗೂ ಇತರೆ ವಸ್ತುಗಳನ್ನು ಬಳಸಿಕೊಂಡು ಕೇದಾರನಾಥ ಮಾದರಿಯನ್ನು ನಿರ್ಮಿಸಲಾಗಿದೆ. ಮೆಟ್ಟಿಲುಗಳ ಸಮೇತ ದೇವಸ್ಥಾನ, ಗುಡ್ಡದ ಮೇಲೆ ಬೀಳುವ ಮಂಜು, ನಡೆದುಕೊಂಡು ಹೋಗುವ ಭಕ್ತರು, ಕುದುರೆಯಲ್ಲಿ ಸಾಗುವ ಭಕ್ತರು, ವಿಶ್ರಾಂತಿ ಪಡೆಯುತ್ತಿರುವ ಭಕ್ತರು, ಜಪ ಮಾಡುತ್ತಿರುವ ಭಕ್ತರು, ದೇವಸ್ಥಾನ ಎದುರಿನ ಕೆರೆಯ ಸೇತುವೆ, ಹೆಲಿಕಾಪ್ಟರ್... ಹೀಗೆ ಪ್ರತಿಯೊಂದು ಸನ್ನಿವೇಶವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
‘ಕೇದಾರನಾಥ’ ಮಾದರಿಯಲ್ಲಿ ಕುಳಿತಿರುವ ಶಿವ ಅವತಾರಿ ಗಣಪತಿ ಮೂರ್ತಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮನೆಗೆ ಬಂದು ಹೋಗುತ್ತಿದ್ದಾರೆ. ಕೇದಾರನಾಥ ದರ್ಶನ ಮಾಡಿಕೊಂಡು, ಕುಟುಂಬದವರ ಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
‘ಮನೆಯಲ್ಲಿ ಪ್ರತಿ ವರ್ಷವೂ ಗಣಪತಿ ಮೂರ್ತಿ ಕೂರಿಸಿ ಪೂಜಿಸುತ್ತೇವೆ. ನಮ್ಮ ಆಚರಣೆ ಅರ್ಥಪೂರ್ಣವಾಗಿರಬೇಕೆಂಬ ಕಾರಣಕ್ಕೆ ವಿವಿಧ ವಿಷಯ ಇಟ್ಟುಕೊಂಡು ಮೂರ್ತಿ ಕೂರಿಸುತ್ತಿದ್ದೇವೆ. ಕಳೆದ ವರ್ಷ ಶ್ರೀಕೃಷ್ಣ ಲೀಲೆಗಳ ರೂಪಕದಲ್ಲಿ ಗಣಪತಿ ಕೂರಿಸಲಾಗಿತ್ತು. ಈ ವರ್ಷ ಕೇದಾರನಾಥ ಮಾದರಿ ಸಿದ್ಧಪಡಿಸಲಾಗಿದೆ’ ಎಂದು ದೀಪಾ ಉಳವೆಪ್ಪ ಹಲಗಣ್ಣನವರ ತಿಳಿಸಿದರು.
‘ಸೀರೆಗಳು, ಮಕ್ಕಳ ಆಟಿಕೆಗಳು ಹಾಗೂ ಇತರೆ ವಸ್ತುಗಳನ್ನು ಬಳಸಿ ಮಾದರಿ ಸಿದ್ಧಪಡಿಸಲಾಗಿದೆ. ಕೇದಾರನಾಥ ದೇವಸ್ಥಾನದವರೆಗಿನ 23 ಕಿ.ಮೀ ಯಾತ್ರೆಯಲ್ಲಿ ಕಂಡುಬರುವ ಎಲ್ಲ ಸನ್ನಿವೇಶಗಳನ್ನು ಮಾದರಿಯಲ್ಲಿ ತೋರಿಸಲಾಗಿದೆ’ ಎಂದರು.
ಐದು ದಿನದ ಮೂರ್ತಿಗಳ ವಿಸರ್ಜನೆ
ಗಣೇಶ ಹಬ್ಬದ ಆಚರಣೆ ಬುಧವಾರ ಐದನೇ ದಿನ ಪೂರೈಸಲಿದ್ದು ಹಾವೇರಿ ಹಾಗೂ ಜಿಲ್ಲೆಯ ಹಲವೆಡೆ ಕೂರಿಸಿರುವ ಕೆಲ ಮೂರ್ತಿಗಳ ವಿಸರ್ಜನೆ ವಿಜೃಂಭಣೆಯಿಂದ ನಡೆಯಲಿದೆ. ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶನಿವಾರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮೂರನೇ ದಿನದಂದು ಕೆಲವರು ಮೂರ್ತಿಗಳ ವಿಸರ್ಜನೆ ಮಾಡಿ ಮುಗಿಸಿದ್ದಾರೆ. ಐದನೇ ದಿನವೂ ಮೂರ್ತಿ ವಿರ್ಜನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಐದನೇ ದಿನದಂದು ಮೂರ್ತಿ ವಿಸರ್ಜನೆ ಮಾಡುವವರು ಮಂಗಳವಾರ ಅನ್ನಸಂತರ್ಪಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು. ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಸಾರ್ವಜನಿಕ ಗಣಪತಿ ಮೂರ್ತಿ ಮೆರವಣಿಗೆ ಹಾಗೂ ವಿಸರ್ಜನೆ ನಡೆಯುವ ಸ್ಥಳಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.