ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ತಲೆ ಎತ್ತಲಿದೆ ಗಾಂಧಿಭವನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ: ನಿರ್ಮಿತಿ ಕೇಂದ್ರದಿಂದ ಗುತ್ತಿಗೆ
Last Updated 2 ಅಕ್ಟೋಬರ್ 2018, 13:05 IST
ಅಕ್ಷರ ಗಾತ್ರ

ಹಾವೇರಿ: ಮಹಾತ್ಮ ಗಾಂಧೀಜಿಯೇ ಸ್ವತಃ ಶಂಕುಸ್ಥಾಪನೆ ನೆರವೇರಿಸಿದ್ದ ‘ಮನ್ಸಿಪಲ್ ಧರ್ಮಶಾಲಾ’ ಸ್ಥಳದಲ್ಲಿ ನೂತನ ವಿನ್ಯಾಸದಲ್ಲಿ ‘ಗಾಂಧಿ ಭವನ’ವು ತಲೆ ಎತ್ತಲಿದ್ದು, ರಾಜ್ಯದ 30 ಜಿಲ್ಲೆಗಳ ಪೈಕಿ ಅನನ್ಯವಾಗಿರಲಿದೆ.

ಗಾಂಧಿ ಭವನ
ಗಾಂಧಿ ತತ್ವವನ್ನು ಪಸರಿಸುವ ನಿಟ್ಟಿನಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ‘ಗಾಂಧಿ ಭವನ’ ನಿರ್ಮಿಸಲು 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮಿತಿ ನಿರ್ಧರಿಸಿ, ತಲಾ ₹3 ಕೋಟಿ ಹಂಚಿಕೆ ಮಾಡಿತ್ತು.ಹಾವೇರಿಯಲ್ಲಿ 2017ರ ಅಕ್ಟೋಬರ್ 2ರಂದು ಅಂದಿನ ಸಚಿವ ರುದ್ರಪ್ಪ ಲಮಾಣಿ ಚಾಲನೆ ನೀಡಿದ್ದರು.

ರಾಜ್ಯಮಟ್ಟದಲ್ಲಿ ಏಕರೂಪದ ಕಟ್ಟಡ ನಿರ್ಮಾಣಕ್ಕೆ ಸಮಿತಿ ನಿರ್ಧರಿಸಿತ್ತು. ಇಲ್ಲಿ ಐತಿಹಾಸಿಕ ಸ್ಥಳವನ್ನೇ ಬಳಸಿಕೊಳ್ಳಲು ನಿರ್ಧರಿಸಿದ ಕಾರಣ, ಮತ್ತೆ ಸರ್ಕಾರದ ಒಪ್ಪಿಗೆ ಪಡೆಯಬೇಕಾಯಿತು.

ಹಾವೇರಿಯಲ್ಲಿ ನಿರ್ಮಾಣದ ಗುತ್ತಿಗೆಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು. ಆದರೆ, ರಾಜ್ಯದಲ್ಲಿ ಎಲ್ಲ ಗುತ್ತಿಗೆಯನ್ನು ಕೆಆರ್‌ಡಿಸಿಎಲ್‌ಗೆ ನೀಡಲಾಯಿತು. ಹಾವೇರಿಯಲ್ಲಿ ವಾಪಸ್ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಯಿತು.

‘ಈ ನಡುವೆಯೇ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಹೀಗಾಗಿ ಸ್ವಲ್ಪ ವಿಳಂಬವಾಯಿತು’ ಎನ್ನುತ್ತಾರೆ ವಾರ್ತಾಧಿಕಾರಿ ಡಾ. ರಂಗನಾಥ ಕುಳಗಟ್ಟೆ.

ಈಗಾಗಲೇ ಪ್ರಕ್ರಿಯೆ ಮುಗಿದಿದ್ದು, ಜಿಲ್ಲಾಧಿಕಾರಿ ಹಾಗೂ ಇಲಾಖೆ ನಿರ್ದೇಶಕರು ವಿನ್ಯಾಸಕ್ಕೆ ಒಪ್ಪಿಗೆ ನೀಡಿದ್ದಾರೆ. ಇಲ್ಲಿ ಗ್ಯಾಲರಿ ಹಾಗೂ ಪ್ರದರ್ಶನ ಕೊಠಡಿ, ವಸ್ತು ಸಂಗ್ರಹಾಲಯ, ತರಬೇತಿ ಕೇಂದ್ರ, ಗ್ರಂಥಾಲಯ, ದಾಸ್ತಾನು ಕೊಠಡಿಗಳು ಇರಲಿವೆ. ಅದರೊಂದಿಗೆ ನಿರಂತರ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಸಮಿತಿ ರಚಿಸಲಾಗುವುದು ಎಂದು ಅವರು ವಿವರಿಸಿದರು.

ಧರ್ಮ ಶಾಲಾ
ಸ್ವಾತಂತ್ರ್ಯ ಬಳಿಕ ಆ ಕಟ್ಟಡದ ಮೂಲ ಉದ್ದೇಶ ನನೆಗುದಿಗೆ ಬಿತ್ತು. ಆರ್‌ಟಿಒ ಮತ್ತಿತರ ಸರ್ಕಾರಿ ಕಚೇರಿಗೆ, ಗೋದಾಮಿಗೆ ಬಳಕೆಯಾಯಿತು. ಕೆಲವು ಪ್ರಭಾವಿಗಳು ನಗರಸಭೆಯನ್ನು ಬಳಸಿಕೊಂಡು ಜಾಗ ಪರಭಾರೆ ಮಾಡಲು ಪ್ರಯತ್ನಿಸಿದ್ದರು. ಪಾಳುಕೊಂಪೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT