ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಮನೆಗಳಲ್ಲೂ ‘ಗಣಪ’ ಸಿದ್ಧವಾಗುವ ಕುನ್ನೂರು: ಅಮೆರಿಕದಿಂದಲೂ ಬಂತು ಬೇಡಿಕೆ

Published 14 ಸೆಪ್ಟೆಂಬರ್ 2023, 5:25 IST
Last Updated 14 ಸೆಪ್ಟೆಂಬರ್ 2023, 5:25 IST
ಅಕ್ಷರ ಗಾತ್ರ

ಪುಟ್ಟಪ್ಪ ಲಮಾಣಿ

ತಡಸ (ಕುನ್ನೂರು): ಶಿಗ್ಗಾವಿ ತಾಲ್ಲೂಕಿನ ಕುನ್ನೂರು ಗ್ರಾಮವು ಮಣ್ಣಿನ ಗಣಪತಿ ತಯಾರಿಕೆಗೆ ಪ್ರಸಿದ್ಧವಾಗಿದೆ. ಇಲ್ಲಿನ ಕಲಾವಿದರು ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪ್ರತಿ ಮನೆಯಲ್ಲೂ ಗಣಪತಿಯ ಮೂರ್ತಿ ತಯಾರಿಸುವ ಕಲೆ ರಾರಾಜಿಸುತ್ತಿದೆ.

ರಾಜ್ಯವಷ್ಟೇ ಅಲ್ಲದೇ ರಾಜಸ್ಥಾನ, ಮಹಾರಾಷ್ಟ್ರದಿಂದಲೂ ಮೂರ್ತಿಗಳಿಗೆ ಬೇಡಿಕೆ ಬಂದಿದೆ. ಗ್ರಾಮದವರೇ ಆದ ಅಮೆರಿಕದಲ್ಲಿ ನೆಲೆಸಿರುವ ಎಂಜಿನಿಯರ್‌ ಒಬ್ಬರು ಇಲ್ಲಿಯ ಮೂರ್ತಿಗಳನ್ನು ಅಮೆರಿಕಕ್ಕೂ ಒಯ್ದಿರುವುದು ಇಲ್ಲಿಯ ಕಲಾವಿದರಲ್ಲಿ ಸಂತಸವನ್ನುಂಟು ಮಾಡಿದೆ. ಪಿಒಪಿ ಮೂರ್ತಿಗಳ ಭರಾಟೆಯಲ್ಲೂ ತಮ್ಮದೇ ಆದ ಮಹತ್ವವನ್ನು ಇಲ್ಲಿನ ಮಣ್ಣಿನ ಗಣಪಗಳು ಮೂರ್ತಿಗಳು ಉಳಿಸಿಕೊಂಡಿರುವುದು ವಿಶೇಷವಾಗಿದೆ.

ಗ್ರಾಮದಲ್ಲಿ ಚಿತ್ರಗಾರ ಮನೆತನದಿಂದ ವಿಗ್ರಹ ತಯಾರಿಕೆ ಆರಂಭವಾಯಿತು. ಶಿಶುನಾಳ ಶರೀಫರ ಬಂದು ಈ ಮನೆತನದ ಕಲಾವಿದರಿಂದ ತಮ್ಮ ಚಿಲ್ಮಿ ಮಾಡಿಸಿಕೊಂಡು ಆಶೀರ್ವಾದ ನೀಡಿದ್ದಾರೆ. ಅಂದಿನಿಂದ ಚಿತ್ರಗಾರ ಮನೆತನದ ಗಣಪತಿ ತಯಾರಿಕೆ ಈಗ 50ಕ್ಕೂ ಹೆಚ್ಚು ಮನೆತನಗಳಿಗೆ ಹಬ್ಬಿದೆ.

ಪರಂಪರಾಗತವಾಗಿ ಗಣಪತಿ ವಿಗ್ರಹಗಳ ತಯಾರಿಕೆಯನ್ನು ಸುಣಗಾರ, ಮತ್ತಿಗಟ್ಟಿ, ಮರಸಿದ್ದಣ್ಣವರ, ಶ್ಯಾಡಂಬಿ, ಕರಡಿ, ಉಳ್ಳಾಗಡ್ಡಿ, ಬಾರ್ಕಿ, ಮಾದರ ಹೀಗೆ ಗ್ರಾಮದಲ್ಲಿರುವ ಎಲ್ಲ ಸಮುದಾಯದವರೂ ಗಣಪತಿ ವಿಗ್ರಹವನ್ನು ತಯಾರಿಸುತ್ತಿದ್ದಾರೆ. ಒಟ್ಟು ಕುನ್ನೂರು ಗ್ರಾಮದ ಪ್ರತಿಶತ 50ರಷ್ಟು ಮನೆತನಗಳು ಈ ಕಲೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿರುವುದು ವೈಶಿಷ್ಟ್ಯ.

ಗೊಟಗೋಡಿ ಕೆರೆಯ ಮಣ್ಣು: ವಿಗ್ರಹ ತಯಾರಿಕೆಯಲ್ಲಿ ಗೊಟಗೊಡಿ ಕೆರೆಯ ಮಣ್ಣನ್ನು ಕುನ್ನೂರು ಗ್ರಾಮದ ಕಲಾವಿದರು ಬಳಸುತ್ತಿದ್ದಾರೆ. ₹  150 ರಿಂದ ಆರಂಭವಾಗುವ ವಿಗ್ರಹದ ಬೆಲೆ ₹ 28 ಸಾವಿರದವರೆಗೂ ಇದೆ.

‘ಪಿಒಪಿ ಗಣಪನ ಅಬ್ಬರದಲ್ಲೂ ಮಣ್ಣಿನ ಗಣಪತಿಗಳಿಗೆ ಬೇಡಿಕೆ ಕುಂದಿಲ್ಲ. ಪರಿಸರ ಜಾಗೃತಿಯಿಂದಾಗಿ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ನಮ್ಮ ಕಲೆಯನ್ನು ಹೆಚ್ಚಿನ ಸಂಖ್ಯೆಯ ಜನರು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಚಂದ್ರಶೇಖರ ಚಿತ್ರಗಾರ ಹೇಳಿದರು.

ಚಿತ್ರಗಾರ ಮನೆತನದ ಚಂದ್ರಶೇಖರ ಅವರ ಮನೆಯಲ್ಲಿ ಸಿದ್ಧಗೊಂಡ ಗಣಪತಿ ಮೂರ್ತಿಗಳು
ಚಿತ್ರಗಾರ ಮನೆತನದ ಚಂದ್ರಶೇಖರ ಅವರ ಮನೆಯಲ್ಲಿ ಸಿದ್ಧಗೊಂಡ ಗಣಪತಿ ಮೂರ್ತಿಗಳು
ಮೂರ್ತಿಗಳ ಬುಕಿಂಗ್
ಗ್ರಾಹಕರು ನಮ್ಮ ಗ್ರಾಮಕ್ಕೆ ಬಂದು ತಮ್ಮ ಗಣಪತಿ ಮೂರ್ತಿಗಳಿಗೆ ಬುಕಿಂಗ್ ಮಾಡುತ್ತಾರೆ. ಬೆಳಗಾವಿ ದಾವಣಗೆರೆ ಧಾರವಾಡ ಗದಗ ಕಾರವಾರ ಮುಂತಾದ ಜಿಲ್ಲೆಗಳಿಂದ ಅತಿ ಹೆಚ್ಚು ಬೇಡಿಕೆ ಇದೆ ಎಂದು ಗ್ರಾಮದ ಸುಬ್ಬಣ್ಣ ಮರಸಿದ್ದನ್ನವರ ತಿಳಿಸಿದರು. ಕುನ್ನೂರು ಬ್ರ್ಯಾಂಡ್‌ ಸೃಷ್ಟಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕಲಾವಿದರಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿತ್ತು. ಗಣಪತಿ ದೇವರ ಆಶೀರ್ವಾದದಿಂದ ಮೂರ್ತಿಗಳಿಗೆ ಮತ್ತೆ ಬೇಡಿಕೆ ಬಂದಿದೆ. ಕುನ್ನೂರು ಗಣಪತಿ ಮೂರ್ತಿಗಳ ತಯಾರಿಕೆ ಬ್ರ್ಯಾಂಡ್ ಆಗಿದೆ ಎಂದು ಶಿವಾನಂದ ದೊಡಮನಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT