ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಿ: ಸಂಸದ ಶಿವಕುಮಾರ ಉದಾಸಿ ಸೂಚನೆ

ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ
Last Updated 18 ಆಗಸ್ಟ್ 2021, 14:50 IST
ಅಕ್ಷರ ಗಾತ್ರ

ಹಾನಗಲ್: ‘ಕೋವಿಡ್‌ ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಕ್ಕಳ ಆರೋಗ್ಯಕ್ಕೆ ಆದ್ಯತೆ ಕೊಟ್ಟು ಆರೋಗ್ಯ ತಪಾಸಣೆ ಆರಂಭಿಸಬೇಕು’ ಎಂದು ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.

ಇಲ್ಲಿನ ಸಾಮರ್ಥ್ಯಸೌಧದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.

ಕೋವಿಡ್‌ ಮೊದಲ ಲಸಿಕೆ ಪಡೆದವರು ಎರಡನೇ ಡೋಸ್‌ಗಾಗಿ ಬರುತ್ತಿಲ್ಲ. ಅಕ್ಕಿಆಲೂರ ಮತ್ತು ಹಾನಗಲ್ ಕೇಂದ್ರದಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಲಭ್ಯವಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಲಿಂಗರಾಜ್‌ ಹೇಳಿದರು.

‘ವಾತ್ಸಲ್ಯ’ ಯೋಜನೆಯಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ನವೋದಯ, ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳ ತಪಾಸಣೆ ನಡೆಸಬೇಕಾಗಿದೆ ಎಂದು ಶಿಕ್ಷಣ ಸಂಯೋಜಕ ಬಿ.ಎಂ.ಬೇವಿನಮರದ ಹೇಳಿದರು.

ತಹಶೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್‌ ಮಾಹಿತಿ ನೀಡಿ, ‘ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ನಿವಾರಣಾ ಸಮಿತಿ ರಚಿಸಲಾಗಿದೆ. ನದಿ ತೀರದ ಗ್ರಾಮಗಳ ಮೇಲೆ ನೀಗಾ ವಹಿಸಲಾಗಿದೆ. ಜಾನುವಾರು ರಕ್ಷಣೆ ಮತ್ತು ಮನೆ ಹಾನಿ ಸಮೀಕ್ಷೆ ತಂಡ ರಚಿಸಲಾಗಿದೆ’ ಎಂದರು.

ಬೆಳೆ ಹಾನಿ, ರಸ್ತೆ, ಸೇತುವೆ, ಕೆರೆಗಳು ಮತ್ತು ವಿವಿಧ ಸರ್ಕಾರಿ ಕಟ್ಟಡಗಳು ನೆರೆಗೆ ಹಾನಿಗೊಂಡಿವೆ. ಅಂದಾಜು ಒಟ್ಟು ₹ 115 ಕೋಟಿ ಹಾನಿಯಾಗಿದೆ. ತಾಲ್ಲೂಕಿಗೆ ಪರಿಹಾರದ ಅನುದಾನ ಲಭ್ಯವಾಗಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಶಿವಕುಮಾರ ಉದಾಸಿ ಹೇಳಿದರು.

ಅಡಿಕೆ ತೋಟಗಳಲ್ಲಿ ಬಸಿಗಾಲುವೆ ನಿರ್ಮಾಣಕ್ಕೆ ನರೇಗಾ ಅಡಿಯಲ್ಲಿ ಅವಕಾಶವಿದೆ. ಈ ಬಗ್ಗೆ ಪರಿಶೀಲನೆ ಕೈಗೊಂಡು ಬಸಿಗಾಲುವೆ ಕಾಮಗಾರಿಮಾಡಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಅವರಿಗೆ ಸಲಹೆ ನೀಡಿದರು.

ಶುದ್ಧ ಕುಡಿವ ನೀರಿನ ಘಟಕಗಳು ಬಹುತೇಕ ಕಡೆಗಳಲ್ಲಿ ದುರಸ್ತಿ ಹಂತದಲ್ಲಿವೆ. ಇದಕ್ಕೆ ಸಂಬಂಧಿತ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡಿಲ್ಲ ಏಕೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಎಇಇ ಮಧನಕುಮಾರ ಶಿಂಧೆ ಅವರ ಮೇಲೆ ಸಂಸದ ಉದಾಸಿ ಹರಿಹಾಯ್ದರು.

ನರೇಗಾ ಅಡಿಯಲ್ಲಿ ನಿಗದಿತ ಗುರಿಗಿಂತ ಶೇ 50ರಷ್ಟು ಕಡಿಮೆ ಸಾಧನೆ ಮಾಡಿದ ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 14 ಗ್ರಾಮ ಪಂಚಾಯ್ತಿಗಳು ಈ ಪಟ್ಟಿಯಲ್ಲಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT