ಸೋಮವಾರ, ಮಾರ್ಚ್ 8, 2021
26 °C
ಲಾಕ್‌ಡೌನ್‌: ನಷ್ಟಕ್ಕೀಡಾದ ಹೂ ಬೆಳೆಗಾರರಿಗೆ ₹25 ಸಾವಿರ ಪರಿಹಾರ– ಸಿ.ಎಂ.ಘೋಷಣೆ

ಹಾವೇರಿ | ಪುಷ್ಪ ಬೆಳೆಗಾರರಿಗೆ ಸರ್ಕಾರದ ನೆರವು: ರೈತರ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಲಾಕ್‌ಡೌನ್‌ನಿಂದ‌ ಸಂಕಷ್ಟದಲ್ಲಿರುವವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿಶೇಷ ಪ್ಯಾಕೇಜ್‌ ಘೋಷಣೆಯನ್ನು ಬುಧವಾರ ಮಾಡಿದ್ದಾರೆ. 

ಹೂ ಬೆಳೆದು ನಷ್ಟಕ್ಕೀಡಾದ ರೈತರಿಗೆ ಗರಿಷ್ಠ ಒಂದು ಹೆಕ್ಟೇರ್‌ಗೆ ಮಿತಿಗೊಳಪಟ್ಟು ₹ 25 ಸಾವಿರ ಪರಿಹಾರ ಮತ್ತು ರಾಜ್ಯದ 7 ಲಕ್ಷ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ₹5 ಸಾವಿರ ಸಹಾಯಧನ ನೀಡುವುದಾಗಿ ಹೇಳಿದ್ದಾರೆ. 

ಹೂ ಬೆಳೆಗಾರರ ಸಂಕಷ್ಟ ಕುರಿತು ಏ.10ರಂದು ‘ಬೆಳೆಗಾರರ ಕೈ ಹಿಡಿಯದ ಪುಷ್ಪ ಕೃಷಿ’ ವಿಶೇಷ ವರದಿ ಮತ್ತು ಏ.12ರಂದು ಆಟೊ ಚಾಲಕರ ಸಂಕಷ್ಟ ಕುರಿತು ಏ.12ರಂದು ‘ಕೊರೊನಾ ಕಾಟ: ಕಂಗಾಲಾದ ಆಟೊ ರಾಜ’ ವಿಶೇಷ ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು. 

ಇದನ್ನೂ ಓದಿ: ರೈತರ ಕೈಹಿಡಿಯದ ‘ಪುಷ್ಪ ಕೃಷಿ’!

‘ಲಾಕ್‌ಡೌನ್‌ನಿಂದ ಮಾರುಕಟ್ಟೆ ಬಂದ್‌ ಇದ್ದ ಕಾರಣ ಬೆಳೆದಿದ್ದ ಹೂ ಗಿಡಗಳನ್ನು ಟ್ರಾಕ್ಟರ್‌ ಮೂಲಕ ನಾಶಪಡಿಸಿದ್ದೆ. ನನ್ನಂತೆಯೇ ಗಣಜೂರ ಸುತ್ತಮುತ್ತಲಿನ ರೈತರು ಹೂಗಳನ್ನು ಬಿಡಿಸಿ, ಉತ್ತಮ ದರವಿಲ್ಲದ ಕಾರಣ ಬದುವಿನಲ್ಲೇ ಸುರಿದಿದ್ದರು. ಮಾಧ್ಯಮ ವರದಿಯಿಂದ ಸರ್ಕಾರ ಎಚ್ಚೆತ್ತುಕೊಂಡು, ಪುಷ್ಪ ಬೆಳೆಗಾರರ ನೆರವಿಗೆ ಧಾವಿಸಿರುವುದು ಸ್ವಾಗತಾರ್ಹ. ಬಿತ್ತನೆ ಬೀಜ, ರಸಗೊಬ್ಬರ, ಕೂಲಿಕಾರ್ಮಿಕರಿಗೆ ಭರಿಸಿದ ವೆಚ್ಚವಾದರೂ ಪರಿಹಾರದಿಂದ ಸಿಗುತ್ತದೆ ಎಂಬುದೇ ಸಮಾಧಾನ’ ಎಂದು ಗಣಜೂರು ರೈತ ಷಣ್ಮುಖ ಶಿವಪುತ್ರಪ್ಪ ಅಣಜಿ ತಿಳಿಸಿದ್ದಾರೆ.  

‘ಲಾಕ್‌ಡೌನ್‌ನಿಂದ ಜೀವನ ನಿರ್ವಹಣೆಗೂ ಕಷ್ಟಪಡುತ್ತಿದ್ದ ಆಟೊ ರೈತರ ಸಂಕಷ್ಟದ ಬಗ್ಗೆ ಬೆಳಕು ಚೆಲ್ಲಿದ ‘ಪ್ರಜಾವಾಣಿ‘ ಬಳಗಕ್ಕೆ ಧನ್ಯವಾದಗಳು. ರಾಜ್ಯ ಸರ್ಕಾರ ₹ 5 ಸಾವಿರ ಪರಿಹಾರ ಘೋಷಣೆ ಮಾಡಿರುವುದು  ಖುಷಿ ತಂದಿದೆ. ಹಾವೇರಿ ತಾಲ್ಲೂಕು ಆಟೊ ಮಾಲೀಕರ ಮತ್ತು ಚಾಲಕರ ಸಂಘದಿಂದ ಸರ್ಕಾರ ಮತ್ತು ‘ಪ್ರಜಾವಾಣಿ’ಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ’ ಎಂದು ಸಂಘದ ಕಾರ್ಯದರ್ಶಿ ಲಿಂಗರಾಜ ಉಪ್ಪಾರ ಹೇಳಿದರು. 

‘ಜಿಲ್ಲೆಯ ಪುಷ್ಪ ಬೆಳೆ ಹಾನಿಯ ಅಂದಾಜು ವಿಸ್ತೀರ್ಣವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದಿಂದ ಆದೇಶ ಬಂದ ಕೂಡಲೇ ಪ್ರತಿ ರೈತವಾರು ಪುಷ್ಪಬೆಳೆ ಕ್ಷೇತ್ರವನ್ನು ಸರ್ವೆ ಮಾಡಿ, ಅವರ ಖಾತೆಗೆ ನಷ್ಟದ ಮೊತ್ತವನ್ನು ಜಮಾ ಮಾಡಲಾಗುವುದು’ ಎಂದು ತೋಟಗಾರಿಕೆ ಉಪನಿರ್ದೇಶಕ ಪ್ರದೀಪ ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು