ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾರೋಗ್ಯ | ಹಾವೇರಿ: ಕೋವಿಡ್‌ ಮರಣ; ಹಳ್ಳಿಗಳಲ್ಲಿ ತಲ್ಲಣ

ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ: ಲಸಿಕೆ ಸಿಗದೆ ಪರದಾಡುತ್ತಿರುವ ಗ್ರಾಮಸ್ಥರು
Last Updated 6 ಜೂನ್ 2021, 22:30 IST
ಅಕ್ಷರ ಗಾತ್ರ

ಹಾವೇರಿ: ‘ನಮ್ಮೂರಾಗ ಹನ್ನೆರಡು–ಹದಿಮೂರು ಮಂದಿಗೆ ಕೋವಿಡ್‌ ಬಂದಿತ್ತು. ಯಾರ‍್ಗೂ ಸರಿಯಾದ ಚಿಕಿತ್ಸೆ ಸಿಗ್ಲಿಲ್ಲ. ಜಿಲ್ಲಾಸ್ಪತ್ರೆಗೆ ಹೋದವ್ರು ಎಲ್ರೂ ಹೆಣವಾಗಿ ಬಂದವ್ರೆ’ ಎಂದು ಬೇಸರ ವ್ಯಕ್ತಪಡಿಸಿದವರು ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದ ನಿವಾಸಿ ಅಂಕಿತ್‌ ಊದಗಟ್ಟಿ.

‘ನಮ್ಮೂರಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರದ ಕಟ್ಟಡವಿದೆ. ಆದರೆ, ಯಾವ ಪ್ರಯೋಜನವೂ ಇಲ್ಲ. ಕಾಯಿಲೆ ಬಂದರೆ8 ಕಿ.ಮೀ. ದೂರದ ಕಬ್ಬೂರು ಆಸ್ಪತ್ರೆಗೆ ಹೋಗಬೇಕು. ಮೊನ್ನೆ ನಮ್ಮೂರಿನ ವ್ಯಕ್ತಿಯೊಬ್ಬರಿಗೆ ಉಸಿರಾಟದ ಸಮಸ್ಯೆಯಾಯಿತು. ಗಂಟೆಗಟ್ಟಲೆ ಕಾದರೂ ಆಂಬುಲೆನ್ಸ್‌ ಬರಲಿಲ್ಲ. ಕೇಳಿದಷ್ಟು ಬಾಡಿಗೆ ಕೊಟ್ಟು ಖಾಸಗಿ ವಾಹನದಲ್ಲಿ ಕಳುಹಿಸಿಕೊಟ್ಟೆವು’ ಎಂದು ಸಂಗೂರ ಗ್ರಾಮದ ರೈತ ಮುಖಂಡ ಆಸೀಂ ಜಿಗಳೂರು ಸಮಸ್ಯೆ ಬಿಚ್ಚಿಟ್ಟರು.

‘ಎರಡು ದಿನ ಕೋವಿಡ್‌ ಲಸಿಕೆ ಹಾಕಿದ ಆರೋಗ್ಯ ಸಿಬ್ಬಂದಿ, ಮತ್ತೆ ಬರ್ತೀವಿ ಅಂತ ಹೇಳಿ ಹೋದವರು ಎರಡು ತಿಂಗಳು ಕಳೆದರೂ ಬಂದಿಲ್ಲ. ಲಸಿಕೆ ಸಿಗದೆ ಶಿಗ್ಗಾವಿ ತಾಲ್ಲೂಕಿನ ಜೋಂಡಲಗಟ್ಟಿ, ಗೌಳಿದಡ್ಡಿ, ಅರಟಾಳ, ಬಸವನಕೊಪ್ಪ ಗ್ರಾಮಸ್ಥರು ಪರದಾಡುತ್ತಿದ್ದಾರೆ’ ಎಂದು ಲಸಿಕಾ ಅಭಿಯಾನದ ನೈಜತೆಯನ್ನು ಶಿಗ್ಗಾವಿ ತಾಲ್ಲೂಕು ಹೊಸೂರು ನಿವಾಸಿ ವಿನಾಯಕ ಸೊಗಲಿ ಅನಾವರಣಗೊಳಿಸಿದರು.

ಇಂಥ ದೂರು ದುಮ್ಮಾನಗಳು ಸಮಸ್ಯೆಗಳು ಗ್ರಾಮಗಳಿಗೆ ಭೇಟಿ ನೀಡಿದ ‘ಪ್ರಜಾವಾಣಿ’ ತಂಡಕ್ಕೆ ಹೆಜ್ಜೆ ಹೆಜ್ಜೆಗೂ ಕಂಡು ಬಂದವು.

ದವಾಖಾನೆಯಲ್ಲಿ ವೈದ್ಯರೇ ಇಲ್ಲ!

ಜಿಲ್ಲೆಯಲ್ಲಿರುವ 67 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ದೇವರಗುಡ್ಡ, ತುಮ್ಮಿನಕಟ್ಟಿ, ಮಾಕನೂರು, ಮೇಡ್ಲೇರಿ, ಕರ್ಜಗಿ, ಕಡಕೋಳ, ಚಿಕ್ಕೇರೂರು, ಕಾಟೇನಹಳ್ಳಿ ಮುಂತಾದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಇನ್ನು ಕೆಲವು ಕಡೆ ತಾಂತ್ರಿಕ ಸಿಬ್ಬಂದಿ ಕೊರತೆ ಇರುವುದರಿಂದ ‘ಕೋವಿಡ್‌ ಪರೀಕ್ಷೆ’ಗೂ ತೊಡಕಾಗಿದೆ.ವೈದ್ಯಾಧಿಕಾರಿ ಮತ್ತು ತಜ್ಞ ವೈದ್ಯರ 33 ಹುದ್ದೆಗಳು ಖಾಲಿ ಉಳಿದಿವೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ 99 ಹುದ್ದೆಗಳು ಭರ್ತಿಯೇ ಆಗಿಲ್ಲ.

ಆರೋಗ್ಯ ಕೇಂದ್ರಗಳಲ್ಲಿ ಮಾತ್ರೆ ಕೊಟ್ಟು ರೋಗಿಗಳನ್ನು ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗೆ ಸಾಗ ಹಾಕುತ್ತಾರೆ.

‘ನಮ್ಮೂರಿನಲ್ಲಿ ಉದ್ಘಾಟನೆಯಾದ ಐದು ವರ್ಷಗಳ ನಂತರ ‘ಆರೋಗ್ಯ ಮತ್ತು ಕ್ಷೇಮ ಕೇಂದ್ರ’ ಕಾರ್ಯಾರಂಭ ಮಾಡಿದೆ. ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯಿಂದಾಗಿ ಜನರು ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮೀಣ ಜನರ ಆರೋಗ್ಯ ಸೇವೆಗೆ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಹಾವೇರಿ ತಾಲ್ಲೂಕು ಕನಕಾಪುರ ಗ್ರಾಮದ ರೈತ ಮುಖಂಡ ಫಕ್ಕೀರಗೌಡ ಗಾಜೀಗೌಡ್ರ ಅವರ ಒತ್ತಾಯಿಸುತ್ತಾರೆ.

ಮರಣದ ತಲ್ಲಣ:

ಜಿಲ್ಲೆಯಲ್ಲಿಕಳೆದ 15 ದಿನಗಳಲ್ಲಿ 120 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕಳೆದ ವಾರ ಕೋವಿಡ್‌ ಮರಣ ಪ್ರಮಾಣವು ರಾಜ್ಯದಲ್ಲಿ ಶೇ 1.4ರಷ್ಟಿದ್ದರೆ, ಜಿಲ್ಲೆಯಲ್ಲಿ ಶೇ 3.81ರಷ್ಟಿತ್ತು. ರಾಜ್ಯದಲ್ಲೇ ಹಾವೇರಿ ಜಿಲ್ಲೆ ಮರಣ ಪ್ರಮಾಣದಲ್ಲಿ ಮೊದಲ ಸ್ಥಾನಕ್ಕೇರಿ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಈಗ ಮರಣ ಪ್ರಮಾಣ ಶೇ 2.18ಕ್ಕೆ ಇಳಿಕೆಯಾಗಿದೆ.

‘ಬೆಡ್‌ ಸಿಗ್ತಾ ಇಲ್ಲ’

ಜಿಲ್ಲಾಸ್ಪತ್ರೆಯನ್ನು ‘ಕೋವಿಡ್‌ ಆಸ್ಪತ್ರೆ’ಯಾಗಿ ಪರಿವರ್ತಿಸಲಾಗಿದೆ. 330 ಹಾಸಿಗೆಗಳಲ್ಲಿ 194 ಹಾಸಿಗೆಗಳನ್ನು ಕೋವಿಡ್‌ ಪೀಡಿತರಿಗೆ ಮೀಸಲಿಡಲಾಗಿದೆ. 6 ತಾಲ್ಲೂಕು ಆಸ್ಪತ್ರೆಗಳಲ್ಲಿ 387 ಹಾಗೂ 5 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 50 ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಕಾಯ್ದಿರಿಸಲಾಗಿದೆ. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 881 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.

ಆದರೆ, ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳ ಆಮ್ಲಜನಕ ಸಹಿತ ಹಾಸಿಗೆಗಳು ಬಹುತೇಕ ಭರ್ತಿಯಾಗಿ, ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಹುಬ್ಬಳ್ಳಿ, ದಾವಣಗೆರೆ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯ ಎದುರಾಗಿದೆ ಎಂಬ ದೂರುಗಳು ಜನರಿಂದ ಕೇಳಿ ಬಂದವು.

‘ನಮಗೆ 3 ತಿಂಗಳಿಂದ ಗೌರವಧನ ಸಿಕ್ಕಿಲ್ಲ. ಸರಿಯಾಗಿ ಮಾಸ್ಕ್‌, ಸ್ಯಾನಿಟೈಸರ್‌ ಕೊಟ್ಟಿಲ್ಲ. ಗ್ರಾಮಸ್ಥರು ಹೀಗಳೆಯುತ್ತಾರೆ, ಜರೆಯುತ್ತಾರೆ. ಸೋಂಕಿನ ಲಕ್ಷಣಗಳನ್ನು ಮುಚ್ಚಿಟ್ಟು, ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆಶಾ ಕಾರ್ಯಕರ್ತೆಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಹಳ್ಳಿಗಳೇ ಹಾಟ್‌ಸ್ಪಾಟ್‌:

ಕೋವಿಡ್‌ ಎರಡನೇ ಅಲೆಯಲ್ಲಿ, ಸೋಂಕು ಹರಡುವಿಕೆಯಲ್ಲಿ ಹಳ್ಳಿಗಳೇ ಹಾಟ್‌ಸ್ಪಾಟ್‌ಗಳಾಗಿವೆ. ಮೇ ಅಂತ್ಯಕ್ಕೆ ಜಿಲ್ಲೆಯಲ್ಲಿರುವ 699 ಕಂದಾಯ ಗ್ರಾಮಗಳಲ್ಲಿ 419 (ಶೇ 60) ಗ್ರಾಮಗಳಲ್ಲಿ ಕೊರೊನಾ ಸೋಂಕು ಹರಡಿದೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ತಿಳಿಸುತ್ತವೆ. ವಾಸ್ತವದಲ್ಲಿ ಶೇ 80ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊರೊನಾ ಸೋಂಕಿದೆ ಎಂಬುದು ಗ್ರಾಮಸ್ಥರ ವಾದ.

60 ವರ್ಷ ಮೇಲ್ಪಟ್ಟವರು ಮಾತ್ರ ಮಾಸ್ಕ್‌ ಧರಿಸಿ, ಹಳ್ಳಿ ಕಟ್ಟೆ, ದೇವಸ್ಥಾನ, ಮನೆಯ ಜಗುಲಿ ಮುಂತಾದ ಕಡೆ ಕುಳಿತಿದ್ದರು. ಆದರೆ, ಯುವಕರು ಮತ್ತು ಮಧ್ಯ ವಯಸ್ಕರು ಮಾಸ್ಕ್‌ ಧರಿಸದೆ, ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ನಿಂತುಕೊಂಡು ಹರಟೆ ಹೊಡೆಯುತ್ತಾ, ಬೈಕ್‌ಗಳಲ್ಲಿ ತಿರುಗುತ್ತಿದ್ದ ದೃಶ್ಯಗಳು ಕಂಡು ಬಂದವು.

‘ನಮ್ಮ ಮನೀಗೆ ಬರಬ್ಯಾಡ್ರಿ...’

‘ಈಗ ಸಮೀಕ್ಷೆಗೆ ಹೋದರೆ, ನಮ್ಮ ಮನೆಗೆ ಬರಬ್ಯಾಡ್ರಿ ಎಂದು ಗ್ರಾಮಸ್ಥರು ಬೈಯ್ಯುತ್ತಾರೆ. ಕೆಮ್ಮು, ನೆಗಡಿ, ಜ್ವರ ಇದ್ರೂ ಸುಳ್ಳು ಹೇಳುತ್ತಾರೆ. ಸೋಂಕಿನ ಲಕ್ಷಣ ಕಂಡು ಬಂದವರ ಗಂಟಲು ದ್ರವ ಪರೀಕ್ಷೆಗೆ ಹೋದರೆ
ಸಹಕರಿಸುವುದಿಲ್ಲ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ’ ಎಂದು ಶಿಗ್ಗಾವಿ ತಾಲ್ಲೂಕು ಚಂದಾಪುರದ ಆಶಾ ಕಾರ್ಯಕರ್ತೆ ನೇತ್ರಾವತಿ ಚಕ್ರಸಾಲಿ ಸಮಸ್ಯೆ ತೋಡಿಕೊಂಡರು.

ಲಸಿಕೆಯ ಮುಖವನ್ನೇ ನೋಡಿಲ್ಲ...

ಶಿಗ್ಗಾವಿ ತಾಲ್ಲೂಕು ದುಂಡಶಿ ಅರಣ್ಯ ವಲಯದಲ್ಲಿ ಬರುವ ಕುಗ್ರಾಮ ಗೌಳಿದಡ್ಡಿಯಲ್ಲಿ ಹಿಂದೂ ದನಗರ್‌ ಗೌಳಿ ಮರಾಠ ಸಮುದಾಯದ 38 ಕುಟುಂಬಗಳಿದ್ದು, ಸುಮಾರು 190 ಜನಸಂಖ್ಯೆ ಇದೆ. 44 ವರ್ಷ ಮೇಲ್ಪಟ್ಟವರೇ 50ಕ್ಕೂ ಹೆಚ್ಚು ಮಂದಿ ಇದ್ದಾರೆ. ಇವರಲ್ಲಿ ಒಬ್ಬರೂ ಕೋವಿಡ್‌ ಲಸಿಕೆ ಹಾಕಿಸಿಕೊಂಡಿಲ್ಲ.

ಲಸಿಕೆಯ ಬಗ್ಗೆ ಸರಿಯಾದ ಜಾಗೃತಿ ಇಲ್ಲ. ಲಸಿಕೆಗಾಗಿ 12 ಕಿ.ಮೀ. ದೂರದ ದುಂಡಶಿ ಹಾಗೂ 9 ಕಿ.ಮೀ. ದೂರದ ಹೊಸೂರು ಗ್ರಾಮಕ್ಕೆ ಹೋಗಲು ಬಸ್‌ ವ್ಯವಸ್ಥೆ ಇಲ್ಲ. ವಯೋವೃದ್ಧರು ಕಾಡಿನ ದಾರಿಯಲ್ಲಿ ಮಳೆಗಾಲದಲ್ಲಿ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು.

* ಆಸ್ಪತ್ರೆಯಲ್ಲಿ ಉಳ್ಳವರು ಮತ್ತು ಬಡವರ ನಡುವೆ ತಾರತಮ್ಯ ಮಾಡುತ್ತಾರೆ. ಸಂಬಂಧಿಯನ್ನು ದಾಖಲಿಸಿದ್ದಾಗ ಈ ನೋವು ಅನುಭವಿಸಿದ್ದೇನೆ.

– ಪ್ರಕಾಶ ಮಾಗೋಡ, ಕುಂಚೂರು ನಿವಾಸಿ

* ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕವಾದ ಚಿಕಿತ್ಸೆ ಸಿಗದೇ ನಮ್ಮ ಊರಿನಲ್ಲಿ ಹದಿನೈದು ದಿನಗಳಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.

– ಹರಿಹರಗೌಡ ಪಾಟೀಲ, ಮುಷ್ಟೂರ ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT