ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ದೂರು ಹಿಂಪಡೆಯಲು ಹಣದ ಆಮಿಷ

ಅತ್ಯಾಚಾರ ಪ್ರಕರಣ: ಆರೋಪಿಗಳ ಕಡೆಯವರ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ
Published 13 ಜನವರಿ 2024, 20:28 IST
Last Updated 13 ಜನವರಿ 2024, 20:28 IST
ಅಕ್ಷರ ಗಾತ್ರ

ಹಾವೇರಿ: ‘ಅತ್ಯಾಚಾರದ ಬಗ್ಗೆ ಪೊಲೀಸರಿಗೆ ಕೊಟ್ಟ ದೂರು ಹಿಂಪಡೆಯುವಂತೆ ಅಕ್ಕಿಆಲೂರಿನ ಆರೋಪಿಗಳ ಕಡೆಯವರು ಲಕ್ಷಾಂತರ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದ್ದರು. ಮಾನ ಮರ್ಯಾದೆ ಹೋದ ಬಳಿಕ ದುಡ್ಡು ತೆಗೆದುಕೊಂಡು ನಾನೇನು ಮಾಡಲಿ ಎಂದು ನಿರಾಕರಿಸಿದೆ’ ಎಂದು ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಹೇಳಿದರು. 

ನಗರದ ಸ್ವಧಾರಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶನಿವಾರ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ನ್ಯಾಯಾಧೀಶರ ಮುಂದೆ ಕೊಟ್ಟ ‘164’ ಹೇಳಿಕೆಯಲ್ಲಿ ಘಟನೆಯನ್ನು ಎಳೆಎಳೆಯಾಗಿ ವಿವರಿಸಿದ್ದೇನೆ. ಸತ್ಯಾಂಶವನ್ನು ಬಿಚ್ಚಿಟ್ಟೆದ್ದೇನೆ’ ಎಂದರು.

₹25 ಸಾವಿರ ಪರಿಹಾರ: ಮಾಜಿ ಸಚಿವ ಬಿ.ಸಿ. ಪಾಟೀಲ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು ಸಾಂತ್ವನ ಕೇಂದ್ರದಲ್ಲಿದ್ದ ಸಂತ್ರಸ್ತೆಯನ್ನು ಭೇಟಿಯಾಗಿ, ಸಾಂತ್ವನ ಹೇಳಿದರು. ‘ಯಾರಿಂದಾದರೂ ಬೆದರಿಕೆ ಕರೆ ಬರುತ್ತಿವೆಯೇ?’ ಎಂದು ಬಿ.ಸಿ.ಪಾಟೀಲ ಅವರು ಕೇಳಿದಾಗ ಸಂತ್ರಸ್ತೆ ಇಲ್ಲ ಎಂದರು. ‘ನಿಮ್ಮೊಂದಿಗೆ ನಾವಿದ್ದೇವೆ. ಯಾರಿಗೂ ಹೆದರಬೇಡಿ’ ಎಂದು ಧೈರ್ಯ ತುಂಬಿ, ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ₹25 ಸಾವಿರ ಪರಿಹಾರ ನೀಡಿದರು. 

ಐಜಿಪಿ ಭೇಟಿ:

ದಾವಣಗೆರೆ ಪೂರ್ವ ವಲಯದ ಐಜಿಪಿ ಕೆ.ತ್ಯಾಗರಾಜನ್‌ ಅವರು ಹಾನಗಲ್‌ ಪೊಲೀಸ್‌ ಠಾಣೆ ಮತ್ತು ಹಲ್ಲೆ, ಅತ್ಯಾಚಾರ ನಡೆದ ಘಟನಾ ಸ್ಥಳಗಳಿಗೆ ಶನಿವಾರ ಭೇಟಿ ನೀಡಿ, ಸ್ಥಳೀಯ ಪೊಲೀಸರಿಂದ ವಿವರ ಪಡೆದರು. ‘ತನಿಖೆ ಚುರುಕುಗೊಳಿಸಿ, ಉಳಿದ ಆರೋಪಿಗಳನ್ನು ಬಂಧಿಸಬೇಕು’ ಎಂದು ಸೂಚನೆ ನೀಡಿದರು.

ಮೊಬೈಲ್‌ ಸ್ವಿಚ್ಡ್‌ ಆಫ್‌!:

ಘಟನೆಗೆ ಸಂಬಂಧಿಸಿದಂತೆ ಒಟ್ಟು ಏಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ಅಪಘಾತದಲ್ಲಿ ಕಾಲಿನ ಮೂಳೆ ಮುರಿದುಕೊಂಡು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಉಳಿದ ಮೂವರು ಆರೋಪಿಗಳ ಬಂಧನಕ್ಕೆ 3 ವಿಶೇಷ ತಂಡಗಳನ್ನು ರಚಿಸಲಾಗಿದೆ.

‘ಒಬ್ಬ ಡಿವೈಎಸ್‌ಪಿ, ಇಬ್ಬರು ಇನ್‌ಸ್ಪೆಕ್ಟರ್‌, ಮೂವರು ಸಬ್‌ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ತಂಡವು, ಆರೋಪಿಗಳ ಜಾಡು ಹಿಡಿದು ಖಾನಾಪುರ, ಬೆಳಗಾವಿ, ಬಾಗಲಕೋಟೆ ಮುಂತಾದ ಸ್ಥಳಗಳಿಗೆ ಹೋಗಿದೆ. ಆದರೆ ಶುಕ್ರವಾರ ಸಂಜೆಯಿಂದ ಆರೋಪಿಗಳು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡ ಕಾರಣ ಪತ್ತೆಗೆ ತೊಡಕಾಗಿದೆ. ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್‌ ಸಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೊಂದು ವಿಡಿಯೊ ಗಮನಕ್ಕೆ ಬಂದಿದೆ. ಅದರ ಸಂತ್ರಸ್ತರು ದೂರು ಕೊಡಲು ಮುಂದೆ ಬಂದಿಲ್ಲ. ದೂರು ಕೊಟ್ಟ ಬಳಿಕ ಎಫ್‌.ಐ.ಆರ್‌ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ

–ಅಂಶುಕುಮಾರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾವೇರಿ

ಅತ್ಯಾಚಾರದಂತಹ ಹೀನ ಕೃತ್ಯ ನಡಸಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಬೇರೆ ಯಾವ ಹೆಣ್ಣು ಮಕ್ಕಳಿಗೂ ನನ್ನ ಪರಿಸ್ಥಿತಿ ಬರಬಾರದು.

–ಸಂತ್ರೆಸ್ತೆ

ಘಟನಾ ಸ್ಥಳದಲ್ಲಿ ಸಂತ್ರಸ್ತೆಯ ಒಳಉಡುಪು ಪತ್ತೆ!

ಹಾನಗಲ್‌ ಪಟ್ಟಣದಿಂದ 8 ಕಿ.ಮೀ. ದೂರದ ಶಿರಗೋಡ ಗ್ರಾಮದ ಸಮೀಪದ ಕಾಡಿನಲ್ಲಿ ಜನವರಿ 8ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರದ ಘಟನಾ ಸ್ಥಳದಲ್ಲಿ ಸಂತ್ರಸ್ತೆಯ ಒಳ ಉಡುಪು ಮತ್ತು ಕೂದಲು ಸಿಕ್ಕಿದ್ದು ಪ್ರಕರಣಕ್ಕೆ ಮಹತ್ವದ ಸಾಕ್ಷ್ಯ ದೊರೆತಂತಾಗಿದೆ.  ದಾವಣಗೆರೆಯ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ಅಧಿಕಾರಿಗಳು ಮತ್ತು ಪೊಲೀಸರು ನಡೆಸಿದ ಸ್ಥಳ ಮಹಜರು ವೇಳೆ ಸಾಕ್ಷ್ಯಗಳು ಸಿಕ್ಕಿವೆ. ಆರೋಪಿಗಳನ್ನು ಹೋಟೆಲ್‌ ಕೊಠಡಿ ಮತ್ತು ಕೃತ್ಯ ಎಸಗಿದ್ದ ಸ್ಥಳಗಳಿಗೆ ಕರೆದೊಯ್ದು ಪೊಲೀಸರು ಮಾಹಿತಿ ಕಲೆ ಹಾಕಿದರು.

‘ವಿಡಿಯೊ ವೈರಲ್‌

ಎಫ್‌ಐಆರ್‌ ದಾಖಲಿಸದ ಪೊಲೀಸರು’ ‘ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ ಮುಸ್ಲಿಂ ಯುವತಿಯರಿಗೆ ಯುವಕರ ಗುಂಪು ಕಿರುಕುಳ ನೀಡುತ್ತಿರುವ ಮೂರು–ನಾಲ್ಕು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಪೊಲೀಸರು ಸ್ವಯಂ ದೂರು ದಾಖಲಿಸದೇ ಕರ್ತವ್ಯಲೋಪ ಎಸಗಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಘಟಕದ ಅಧ್ಯಕ್ಷ ಕಲ್ಯಾಣಕುಮಾರ್‌ ಶೆಟ್ಟರ್‌ ದೂರಿದರು.  ‘ಕಾಡು ಪ್ರದೇಶದ ಹಾದಿಯಲ್ಲಿ ಮುಸ್ಲಿಂ ಯುವತಿಯ ಮೇಲೆ ಹಲ್ಲೆ ನಡೆಸುತ್ತಿರುವ ಹಾಗೂ ಕಾರಿನಲ್ಲಿ ಮುಸ್ಲಿಂ ಯುವತಿಯನ್ನು ಕೂರಿಸಿಕೊಂಡು ಸುತ್ತ ಕೂತ ಯುವಕರ ಗುಂಪು ಯುವತಿಯ ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೊಗಳು ಜಾಲತಾಣದಲ್ಲಿ ನಾಲ್ಕೈದು ದಿನಗಳಿಂದ ಹರಿದಾಡುತ್ತಿವೆ. ಬಂಧಿತ ಆರೋಪಿಗಳ ಮೊಬೈಲ್‌ ಪರಿಶೀಲಿಸಿದರೆ ಅವರು ನಡೆಸಿರುವ ದುಷ್ಕೃತ್ಯ ಮತ್ತು ಅವರಿಗಿರುವ ಸಮಾಜಘಾತುಕ ಸಂಘಟನೆಗಳ ಜೊತೆಗಿನ ನಂಟು ಬಯಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT