ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾನಗಲ್: ಬಿತ್ತನೆ ಬೀಜದ ಪ್ಯಾಕೇಟ್‌ಗೂ ಬಂತು ಕ್ಯೂಆರ್‌ ಕೋಡ್‌

Published 27 ಮೇ 2024, 5:28 IST
Last Updated 27 ಮೇ 2024, 5:28 IST
ಅಕ್ಷರ ಗಾತ್ರ

ಹಾನಗಲ್: ಬಿತ್ತನೆ ಬೀಜಗಳ ನಕಲಿ ಹಾವಳಿ ತಡೆಯುವ ನಿಟ್ಟಿನಲ್ಲಿ ಮುಂಗಾರು ಪೂರ್ವದಿಂದಲೇ ಕೃಷಿ ಇಲಾಖೆ ಬಿತ್ತನೆ ಬೀಜಗಳ ಪ್ಯಾಕೇಟ್‌ ಮೇಲೆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಕಡ್ಡಾಯಗೊಳಿಸಿದೆ. ರೈತರಿಗೆ ಪ್ರಮಾಣೀಕೃತ ಬೀಜಗಳ ವಿತರಣೆ ಮತ್ತು ಅಕ್ರಮ ದಾಸ್ತಾನು ತಡೆಗಟ್ಟುವ ಉದ್ದೇಶ ಹೊಂದಲಾಗಿದೆ.

ಕೃಷಿ ಇಲಾಖೆ ಬಿತ್ತನೆ ಬೀಜಗಳನ್ನು ಸಂಗ್ರಹಿಸಿಕೊಂಡು ತಾಲ್ಲೂಕಿನ 9 ಕೇಂದ್ರಗಳ ಮೂಲಕ ವಿತರಣೆ ಆರಂಭಿಸಿದೆ. ಸಹಾಯಧನದ ವಿತರಣಾ ಕೇಂದ್ರಗಳಿಗೆ ರೈತರು ಆಗಮಿಸಿ ಬೀಜ ಖರೀದಿಯಲ್ಲಿ ತೊಡಗಿದ್ದಾರೆ. ಬೀಜ ವಿತರಣೆ ಮತ್ತು ಖರೀದಿ ಹಣ ಸಂದಾಯಕ್ಕೆ ಇಲಾಖೆ ಅಳವಡಿಸಿಕೊಂಡಿರುವ ಡಿಜಿಟಲ್ ವ್ಯವಸ್ಥೆಗೆ ಈಗ ರೈತರೂ ಒಗ್ಗಿಕೊಳ್ಳಬೇಕಾಗಿದೆ. ಬೀಜ ವಿತರಣೆ ಸಮಯದಲ್ಲಿ ಪ್ರತಿ ಪ್ಯಾಕೆಟ್‌ ಮೇಲೆ ಬಾರ್‌ಕೋಡ್‌ ಸ್ಕ್ಯಾನ್‌ ಆದ ಬಳಿಕವೇ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬೀಜ ವಿತರಣಾ ಕೇಂದ್ರಗಳಲ್ಲಿ ರೈತರು ಖರೀದಿಸುವ ಬೀಜಗಳ ಪ್ರತಿ ಪ್ಯಾಕೇಟ್‌ ಸ್ಕ್ಯಾನ್‌ ಮಾಡಿದ ನಂತರ ಸೀಡ್‌ ಎಂಐಎಸ್‌ ತಂತ್ರಾಂಶದಲ್ಲಿ ಕ್ಯೂಆರ್‌ ಕೋಡ್‌ ವಿವರ ಮತ್ತು ಇನ್ನುಳಿದ ವಿವರಗಳು ದಾಖಲಾಗುತ್ತವೆ.

‘ಬಿತ್ತನೆ ಬೀಜಗಳನ್ನು ವಿತರಣಾ ಕೇಂದ್ರದಲ್ಲಿ ದಾಸ್ತಾನು ಮಾಡುವ ಮುನ್ನ ಬೀಜದ ಪ್ಯಾಕೇಟ್‌ಗಳ ಮೇಲೆ ಕ್ಯೂಆರ್‌ ಕೋಡ್‌ ನಮೂದಿಸಿರುವುದನ್ನು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಖರೀದಿ ಸಮಯದಲ್ಲಿ ಪ್ರತಿ ಪ್ಯಾಕೇಟ್‌ ಸ್ಕ್ಯಾನ್‌ ಮಾಡಿ ತಂತ್ರಾಂಶದಲ್ಲಿ ವಿವರಗಳನ್ನು ನಮೂದು ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಯಾವುದೇ ಕಾರಣಕ್ಕೂ ಕ್ಯೂಆರ್‌ ಕೋಡ್ ದಾಖಲಿಸದಂತೆ ಬೀಜ ವಿತರಣೆ ಮಾಡುವಂತಿಲ್ಲ’ ಎಂದು ಇಲ್ಲಿನ ಎಪಿಎಂಸಿ ಪ್ರಾಂಗಣದ ಬೀಜ ವಿತರಣೆ ಕೇಂದ್ರದ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದ್ದಾರೆ.

‘ಕ್ಯೂಆರ್‌ ಕೋಡ್‌ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ ಬೀಳಲಿದ್ದು, ಬಿತ್ತನೆ ಬೀಜಗಳ ಖರೀದಿಯಲ್ಲಿ ಸ್ಕ್ಯಾನರ್‌ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವಷ್ಟೆ ಖರೀದಿ ರಸೀತಿ ಬರುತ್ತದೆ. ಪ್ರತಿ ಪ್ಯಾಕೇಟ್‌ನ ವಿವರ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ರಿಯಾಯ್ತಿ ದರದ ಬೀಜಗಳ ಹೆಚ್ಚುವರಿ ಖರೀದಿಗೆ ಕೋಡ್‌ ಸ್ಕ್ಯಾನರ್‌ ಆಸ್ಪದ ನೀಡುವುದಿಲ್ಲ. ತಂತ್ರಾಂಶ ಲಾಕ್‌ ಆಗುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಮೋಹನಕುಮಾರ ಹೇಳುತ್ತಾರೆ.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ‘ಹೊಸ ವ್ಯವಸ್ಥೆಗಳಿಗೆ ರೈತರು ಹೊಂದಿಕೊಳ್ಳುವುದು ಅನಿವಾರ್ಯವಾಗಿದ್ದು, ಕಳಪೆ ಗುಣಮಟ್ಟದ ಬೀಜವನ್ನು ಬಿತ್ತಿ ಕೈಸುಟ್ಟುಕೊಳ್ಳುವುದಕ್ಕಿಂತ, ಕೃಷಿ ಇಲಾಖೆ ಸ್ಕ್ಯಾನ್‌ ಮಾಡಿ ವಿತರಿಸುವ ಪ್ರಮಾಣೀಕೃತ ಬೀಜಗಳ ಬಿತ್ತನೆ ಉತ್ತಮ’ ಎಂದು ಹೇಳಿದ್ದಾರೆ.

‘ಕೃಷಿ ಅಧಿಕಾರಿಗಳು ನಮ್ಮಿಂದ ಜಮೀನಿನ ಯಾವುದೇ ದಾಖಲೆಗಳನ್ನು ಪಡೆದುಕೊಳ್ಳದೇ, ಆನ್‌ಲೈನ್‌ ಮೂಲಕ ನಮ್ಮ ಎಫ್ಐಡಿಯಲ್ಲಿರುವ ಜಮೀನು ಆಧಾರದ ಮೇಲೆ ಬಿತ್ತನೆ ಬೀಜ ವಿತರಿಸುತ್ತಿರುವುದು ಸ್ವಾಗತಾರ್ಹ. ಇದರಿಂದ ಅನಾವಶ್ಯ ಕಂಪ್ಯೂಟರ್‌ ಕೇಂದ್ರಗಳ ಮುಂದೆ ಉತಾರ ಪಡೆದುಕೊಳ್ಳಲು ಸರತಿಯಲ್ಲಿ ನಿಲ್ಲುವುದು ತಪ್ಪಿದೆ’ ಎಂದು ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ರೈತ ಹನುಮಂತ ಬೆಳ್ಳನಕೆರೆ ಅಭಿಪ್ರಾಯಪಟ್ಟಿದ್ದಾರೆ.

ಹಾನಗಲ್ ಎಪಿಎಂಸಿ ಪ್ರಾಂಗಣದ ಸಹಾಯಧನದ ಬಿತ್ತನೆ ನೀಜ ವಿತರಣೆ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ
ಹಾನಗಲ್ ಎಪಿಎಂಸಿ ಪ್ರಾಂಗಣದ ಸಹಾಯಧನದ ಬಿತ್ತನೆ ನೀಜ ವಿತರಣೆ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ
ಕ್ಯೂಆರ್‌ ಕೋಡ ಅಳವಡಿಕೆಯಿಂದ ನಾವು ಖರೀಸಿದ ಬಿತ್ತನೆ ಬೀಜದ ಸಂಪೂರ್ಣ ವಿವರ ದಾಖಲಾಗುವ ಕಾರಣ ರೈತರು ಮೋಸ ಹೋಗುವುದು ತಪ್ಪಿದಂತಾಗಿದೆ
ಬಸವರಾಜ ಪೂಜಾರ ಸಮ್ಮಸಗಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT