ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ವಿಶಿಷ್ಟ ಹಿನ್ನೆಲೆಯ ಅಡವಿಸ್ವಾಮಿ ಮಠ

ಇಲ್ಲಿದೆ ತುಪ್ಪದ ಬಾವಿ; ತುಪ್ಪವನ್ನು ನೀರಿನಂತೆ ಬಳಸುತ್ತಿದ್ದ ಹಿಂದಿನ ಸ್ವಾಮೀಜಿ!
Published 7 ಏಪ್ರಿಲ್ 2024, 5:52 IST
Last Updated 7 ಏಪ್ರಿಲ್ 2024, 5:52 IST
ಅಕ್ಷರ ಗಾತ್ರ

ಅಕ್ಕಿಆಲೂರು: ಜಾಗತಿಕ ಮಟ್ಟದಲ್ಲಿ ಕನ್ನಡ ನಾಡು ಕಂಗೊಳಿಸುವಂತೆ ಮಾಡಿದವರು ಬಸವಾದಿ ಶಿವಶರಣರು. ಅವರ ಭಕ್ತಿ, ಕಾಯಕ, ದಾಸೋಹ ಹಾಗೂ ಸಮಾನತೆಗಳಂತಹ ಮೌಲಿಕ ತತ್ವಗಳ ಆಧಾರದ ಮೇಲೆ ಸಮಾಜ ಕಟ್ಟಿ ಬೆಳೆಸಿದವರು ಮಠಾಧೀಶರು. ಮಠಗಳ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆ ಅಪಾರವಾದುದು. ಇಂತಹ ವಿಶಿಷ್ಟ ಹಿನ್ನೆಲೆಯ ಮಠಗಳ ಮಾಲಿಕೆಯಲ್ಲಿ ಹಾನಗಲ್ ತಾಲ್ಲೂಕಿನ ಬಾಳೂರಿನ ಅಡವಿಸ್ವಾಮಿ ಮಠ ಪ್ರಮುಖವಾದುದು.

ಬಾಳೂರಿನ ಅಡವಿಸ್ವಾಮಿ ಮಠದಲ್ಲೊಂದು ತುಪ್ಪದ ಬಾವಿ ಇದೆ ಎಂಬ ನಂಬಿಕೆ ಇಲ್ಲಿನ ಭಕ್ತ ಸಮುದಾಯದಲ್ಲಿದೆ. ಶ್ರೀಮಠದ ಹಿಂದಿನ ಸ್ವಾಮೀಜಿ ತುಪ್ಪವನ್ನು ನೀರು ಬಳಸಿದಂತೆ ಬಳಸುತ್ತಿದ್ದರು ಎಂಬ ಪ್ರತೀತಿ ಇದೆ. 

ಬಾಳೂರಿನ ಅಡವಿಸ್ವಾಮಿ ಮಠ ವಂಶ ಪಾರಂಪರೆ ಮಾಲಿಕೆಗೆ ಸೇರಿದ ಮಠವೆನಿಸಿದರೂ ಹಾನಗಲ್ ಲಿಂ.ಕುಮಾರ ಸ್ವಾಮೀಜಿಯ ಸಮಾಜ ಸೇವಾ ಕನಸು ಹೊತ್ತು ನಡೆದ ಜಾಗೃತ ಧಾರ್ಮಿಕ ಶ್ರದ್ಧಾ ಕೇಂದ್ರ ಎಂಬ ಹಿರಿಮೆಗೆ ಪಾತ್ರವಾಗಿದೆ. ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಅಡವಿ ಸ್ವಾಮೀಜಿ ಮಹಾನ್ ತಪಸ್ವಿಗಳು ಹಾಗೂ ವೈರಾಗ್ಯಶೀಲರು. ಜೀರ್ಣಾವಸ್ಥೆಯಿಂದ ಕಾಲಗರ್ಭ ಸೇರುತ್ತಿದ್ದ ಮಠವನ್ನು ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಳಿಸಿದ ಮಹಾ ಮಹಿಮರು.

ಹಾನಗಲ್‌ ಲಿಂ.ಕುಮಾರ ಸ್ವಾಮೀಜಿಯ ನಾಮವನ್ನು ಮಂತ್ರವಾಗಿಸಿಕೊಂಡಿದ್ದ ಅಡವಿ ಸ್ವಾಮೀಜಿ ಅನುದಿನವೂ ಶಿವಯೋಗ ಮತ್ತು ಗುರುಧ್ಯಾನದಲ್ಲಿ ಏಕಾಂತವಾದವರು. ತಮ್ಮ ಶಿವಯೋಗ ದೀಪ್ತಿಯನ್ನು ಲೋಕಕ್ಕೆ ನೀಡಿದವರು. ಮಾತಿಗಿಂತಲೂ ಮೌನಕ್ಕೆ ಪ್ರಾಧಾನ್ಯತೆ ನೀಡಿದವರು. ಅವರ ನಡೆ ಪಾವನ, ನುಡಿ ಪ್ರಸಾದವಾಗಿತ್ತು. ಭಕ್ತ ಸಮೂಹದ ಮೇಲೆ ಅನನ್ಯ ಅನುಕಂಪ ಇರಿಸಿಕೊಂಡಿದ್ದ ಅಡವಿಸ್ವಾಮಿಗಳು ಅಂತಃಕರಣದ ಹೊಳೆಯನ್ನೇ ಹರಿಸಿದವರು. ಬಾಳೂರು ಮಾತ್ರವಲ್ಲದೇ ಸುತ್ತಲಿನ ಅಕ್ಕಿಆಲೂರು, ಡೊಳ್ಳೇಶ್ವರ, ಗುರುರಾಯಪಟ್ಟಣ, ಸವಣೂರು, ಜಂಬಿ, ಗೆಜ್ಜಿಹಳ್ಳಿ, ದ್ಯಾಮನಕೊಪ್ಪ, ಹೀರೂರು ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಸಂಚರಿಸಿ ಅನುಷ್ಠಾನ, ಜಪ-ತಪವನಾಚರಿಸಿದವರು.

ಅಡವಿಸ್ವಾಮಿ ಮಠದ ಪರಂಪರೆ ಬಹು ಪುರಾತನವಾದುದು. ಬಾಳೂರಿನ ಅಡವಿಸ್ವಾಮಿ ಮಠ ಹಾಗೂ ಅಕ್ಕಿಆಲೂರಿನ ವಿರಕ್ತಮಠದ ಸಂಬಂಧ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಇವೆರಡು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಈ ಭಾಗದ ಭಕ್ತರ ಪಾಲಿಗೆ ಎರಡು ಕಣ್ಣುಗಳಿದ್ದಂತೆ. ಬಾಳೂರಿನ ಮಠದಲ್ಲಿ ಈವರೆಗೆ 10 ಜನ ಸ್ವಾಮಿಗಳು ತಪಸ್ವಿಗಳಾಗಿ, ತಮ್ಮ ಪೂಜಾ ವೈಭವದಿಂದ ಪ್ರಸಿದ್ಧರಾಗಿದ್ದಾರೆ. ಬಾಳೂರಿನ ಮಠದಲ್ಲಿ ಮೂವರು ಸ್ವಾಮೀಜಿಗಳ ಗದ್ದುಗೆಗಳಿದ್ದು ಸವಣೂರಿನಲ್ಲಿ 3 ಹಾಗೂ ಜಂಬಿಯಲ್ಲಿ ಒಬ್ಬ ಸ್ವಾಮೀಜಿಯ ಗದ್ದುಗೆ ಕಾಣಬಹುದಾಗಿದೆ.

ಅಡವಿಯಲ್ಲಿ ನೆಲೆಸಿದರೂ ಕೂಡ ಇಲ್ಲಿನ ಸ್ವಾಮಿಗಳು ಭಕ್ತರ ಮನೆ, ಮನ ಬೆಳಗಿದ್ದಾರೆ. ಪೂಜಾನಿಷ್ಠ ಪರಂಪರೆಗೆ ಸೇರಿದ ಶ್ರೀಮಠಕ್ಕೆ ಸದ್ಯಕ್ಕೆ ಸದಾಚಾರ ಸಂಪನ್ನರು, ಸದ್ವಿಚಾರ ಹಾಗೂ ಸಾತ್ವಿಕತೆಯ ಸಾಕಾರ ಮೂರ್ತಿಗಳಾಗಿರುವ ಕುಮಾರ ಸ್ವಾಮೀಜಿ ಮಠದ ಪರಂಪರೆಯ ಉಳಿವಿಗೆ ಭಕ್ತ ಸಮುದಾಯದ ಸಹಕಾರದೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ.

ಹಿರಿಯರು, ಮೌನಯೋಗಿ ಗಳಾಗಿರುವ ಕುಮಾರ ಸ್ವಾಮೀಜಿ ಸರಳತೆಗೆ ಮತ್ತೊಂದು ಹೆಸರು. ಇಂತಹ ಪೂಜ್ಯರ ನೇತೃತ್ವದಲ್ಲಿ ಪವಿತ್ರ ಪರಂಪರೆಯ ರಕ್ಷಣೆಯ ಜೊತೆಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳು ಇಲ್ಲಿ ನಿರಂತರವಾಗಿ ನಡೆದಿವೆ. ನಿರ್ಮಲಚಿತ್ತರು, ಲಿಂಗಮೋಹಿಗಳು, ಭಕ್ತಾನುರಾಗಿಗಳು ಹಾಗೂ ಸೌಜನ್ಯತೆಗೆ ಹೆಸರಾದವರು. ಜೊತೆಗೆ ಮಠಗಳ ಪರಂಪರೆಗೆ ಕೀರ್ತಿ ತಂದವರು. ವಿರಕ್ತ ಪರಂಪರೆಯ ಸಂವಿಧಾನ ಶಿಲ್ಪಿಗಳಾದ ಪರಮತಪಸ್ವಿ ಹಾನಗಲ್ ಲಿಂ.ಕುಮಾರ ಸ್ವಾಮೀಜಿ ಪರಂಪರೆಯ ವಾರಸುದಾರರೆಂಬ ಖ್ಯಾತಿ ಶ್ರೀಗಳದ್ದು.

ಮಠದ ವರ್ಧಂತಿ ಮಹೋತ್ಸವ 11ರಿಂದ

ಬಾಳೂರಿನ ಅಡವಿಸ್ವಾಮಿ ಮಠದ ಜಾತ್ರೆ ಹಾಗೂ ಕುಮಾರ ಸ್ವಾಮೀಜಿ ವರ್ಧಂತಿ ಮಹೋತ್ಸವ, ಸಾಮೂಹಿಕ ವಿವಾಹ, ತುಲಾಭಾರ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಾಡಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಏ. 11 ರಿಂದ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT