ಹಾವೇರಿ: ಜಿಲ್ಲೆಯಾದ್ಯಂತ ಪೂರ್ವ ಮುಂಗಾರಿನಲ್ಲಿ ಅಬ್ಬರಿಸಿದ್ದ ಮಳೆ ಕೆಲದಿನಗಳಿಂದ ಬಿಡುವು ನೀಡಿದೆ. ರೈತರು ಬಿತ್ತನೆ ಕೆಲಸದಲ್ಲಿ ನಿರತರಾಗಿದ್ದು, ಕೃಷಿ ಕೆಲಸಕ್ಕೆ ಅಗತ್ಯವಾಗಿರುವ ಎತ್ತುಗಳಿಗೆ ಬೇಡಿಕೆ ಬಂದಿದೆ. ಹೀಗಾಗಿ, ಜಿಲ್ಲೆಯಾದ್ಯಂತ ಜಾನುವಾರುಗಳ ಸಂತೆಯಲ್ಲಿ ಎತ್ತುಗಳ ಖರೀದಿ–ಮಾರಾಟ ಜೋರಾಗಿದೆ.

ಕೃಷಿ ಭೂಮಿ ಮಳೆಯಿಂದ ಹಸಿಯಾಗಿದ್ದು, ರೈತರು ಜಮೀನು ಹದಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಕೆಲದಿನಗಳಿಂದ ಮಳೆ ಪೂರ್ಣ ಪ್ರಮಾಣದಲ್ಲಿ ಬಿಡುವು ನೀಡಿರುವುದರಿಂದ, ಬೀಜ ಬಿತ್ತನೆಯೂ ಆರಂಭವಾಗಿದೆ.

ಬಯಲು ಸೀಮೆಯಲ್ಲಿ ಸೋಯಾಬಿನ್, ಗೋವಿನಜೋಳ, ತೊಗರಿ ಹಾಗೂ ಇತರೆ ಬೀಜಗಳ ಬಿತ್ತನೆ ಮಾಡಲಾಗುತ್ತಿದೆ. ಅರೆ ಮಲೆನಾಡು ಪ್ರದೇಶದಲ್ಲಿ ಭತ್ತದ ಬಿತ್ತನೆ ಶುರುವಾಗಿದೆ. ಆಧುನಿಕ ಯಂತ್ರೋಪಕರಣಗಳು ಲಭ್ಯವಿರುವ ಇಂದಿನ ಕಾಲದಲ್ಲಿಯೂ ಜಿಲ್ಲೆಯ ಹಲವರು, ಬಿತ್ತನೆಗೆ ಎತ್ತುಗಳನ್ನು ಬಳಸುತ್ತಿದ್ದಾರೆ. ಹೀಗಾಗಿ, ಬಿತ್ತನೆ ಸಮಯದಲ್ಲಿ ಜೋಡಿ ಎತ್ತುಗಳಿಗೆ ಬೇಡಿಕೆ ಬರುತ್ತಿದೆ.

ಹಾವೇರಿಯ ಹಾನಗಲ್ ರಸ್ತೆಯಲ್ಲಿರುವ ಎಂಪಿಎಂಸಿಯಲ್ಲಿ ಪ್ರತಿ ಗುರುವಾರ ಜಾನುವಾರು ಸಂತೆ ನಡೆಯುತ್ತದೆ. ರಾಣೆಬೆನ್ನೂರು, ಅಕ್ಕಿಆಲೂರು ಸೇರಿದಂತೆ ಹಲವು ಕಡೆಗಳಲ್ಲಿಯೂ ಸಂತೆ ಇರುತ್ತದೆ. ಮೇ ಕೊನೆಯ ವಾರದಿಂದಲೇ ಪ್ರತಿ ಸಂತೆಯಲ್ಲೂ ಎತ್ತುಗಳ ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ.

ಭೂಮಿ ಹದಗೊಳಿಸಲು, ಬೀಜ ಬಿತ್ತನೆ ಮಾಡಲು ಹಾಗೂ ಬಿತ್ತನೆ ಬಳಿಕ ಜಮೀನು ಸಮ ಮಾಡಲು ಎತ್ತುಗಳನ್ನು ಬಳಸುತ್ತಿದ್ದಾರೆ. ಟ್ರ್ಯಾಕ್ಟರ್ನಿಂದ ಬೀಜ ಬಿತ್ತನೆ ಮಾಡಿದರೆ, ಸಾಲುಗಳಲ್ಲಿ ವ್ಯತ್ಯಾಸವಾಗುವುದಾಗಿ ರೈತರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಹಲವು ರೈತರು, ಎತ್ತುಗಳ ಮೊರೆ ಹೋಗುತ್ತಿದ್ದಾರೆ.

ಮಳೆಯಿಂದಾಗಿ ಕೃಷಿ ಭೂಮಿ ಹೆಚ್ಚು ಹಸಿಯಾಗಿದ್ದರೆ, ಟ್ರ್ಯಾಕ್ಟರ್ ಓಡಾಟ ಸಾಧ್ಯವಿಲ್ಲ. ಇಂಥ ಭೂಮಿಯಲ್ಲಿ ಬಿತ್ತನೆಗೆ ಎತ್ತುಗಳ ಅಗತ್ಯತೆ ಹೆಚ್ಚಿರುವುದಾಗಿ ರೈತರು ಹೇಳುತ್ತಿದ್ದಾರೆ.

ಬಿತ್ತನೆ ದಿನ ಶುರುವಾಗುತ್ತಿದ್ದಂತೆ ಎತ್ತುಗಳ ಮಾಲೀಕರಿಗೂ ಬೇಡಿಕೆ ಬರುತ್ತದೆ. ಎತ್ತುಗಳು ಇಲ್ಲದವರು, ಬಾಡಿಗೆ ಆಧಾರದಲ್ಲಿ ಮಾಲೀಕರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಎತ್ತುಗಳ ಬಿತ್ತನೆ ಹಾಗೂ ಇತರೆ ಕೆಲಸಕ್ಕೆ ದಿನಕ್ಕೆ ₹ 800ರಿಂದ ₹1,200 ವರೆಗೂ ಬಾಡಿಗೆ ಪಡೆಯಲಾಗುತ್ತಿದೆ. ಕಡಿಮೆ ಜಮೀನು ಹೊಂದಿರುವವರು, ಬಾಡಿಗೆ ಆಧಾರದಲ್ಲಿ ಬಿತ್ತನೆ ಕೆಲಸ ಮಾಡಿಸುತ್ತಿದ್ದಾರೆ . ಹೆಚ್ಚು ಜಮೀನು ಇರುವವರು ಸ್ವಂತ ಎತ್ತುಗಳನ್ನು ಖರೀದಿಸಿ, ಬಿತ್ತನೆ ಮಾಡುತ್ತಿದ್ದಾರೆ.

ಎತ್ತುಗಳ ದರವೂ ಹೆಚ್ಚಳ: ಬಿತ್ತನೆ ಇಲ್ಲದ ಸಮಯದಲ್ಲಿ ಎತ್ತುಗಳ ಬೆಲೆ ಕಡಿಮೆ ಇರುತ್ತದೆ. ಮುಂಗಾರು ಆರಂಭದ ದಿನಗಳಲ್ಲಿ ಬಿತ್ತನೆ ಶುರುವಾಗಿರುವುದರಿಂದ ಎತ್ತುಗಳ ದರವೂ ಹೆಚ್ಚಾಗಿದೆ.

ಮಾರುಕಟ್ಟೆಗೆ ಭೇಟಿ ನೀಡುವ ರೈತರು, ಜೋಡಿ ಎತ್ತುಗಳನ್ನು ಖರೀದಿಸುತ್ತಿದ್ದಾರೆ. ಸದ್ಯದ ಮಾರುಕಟ್ಟೆಯಲ್ಲಿ ಜೋಡಿ ಎತ್ತುಗಳಿಗೆ ₹ 1 ಲಕ್ಷದಿಂದ ₹ 2.80 ಲಕ್ಷದ ವರೆಗೂ ಬೆಲೆ ನಿಗದಿಪಡಿಸಲಾಗಿದೆ. ಜೊತೆಗೆ, ಎತ್ತುಗಳನ್ನು ಎಲ್ಲ ರೀತಿಯ ಪರೀಕ್ಷೆ ನಡೆಸಿಯೇ ರೈತರು ಖರೀದಿಸುತ್ತಿದ್ದಾರೆ.

ಹಳೇ ಎತ್ತುಗಳನ್ನು ಕೊಟ್ಟು ಹೊಸ ಎತ್ತುಗಳನ್ನು ಖರೀದಿಸುವ ರೈತರು ಇದ್ದಾರೆ. ಪ್ರತಿ ಬಾರಿಯ ಸಂತೆಗೂ ತಮ್ಮ ಹಳೇ ಎತ್ತುಗಳನ್ನು ತರುವ ಅವರು, ನಿಗದಿತ ಬೆಲೆಗೆ ಮಾರುತ್ತಿದ್ದಾರೆ. ನಂತರ, ತಮ್ಮಿಷ್ಟದ ಎತ್ತುಗಳನ್ನು ನಿಗದಿತ ಬೆಲೆ ಕೊಟ್ಟು ಖರೀದಿಸಿ ತಮ್ಮೂರಿಗೆ ಕೊಂಡೊಯ್ಯುತ್ತಿದ್ದಾರೆ. ಖರೀದಿ–ಮಾರಾಟ ಹೆಚ್ಚಿರುವುದರಿಂದ, ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬರುತ್ತಿದೆ.

ಗುತ್ತಲದ ರೈತ ರಾಮಣ್ಣ, ‘5 ಎಕರೆ ಜಮೀನಿದ್ದು, ಎತ್ತುಗಳ ಮೂಲಕವೇ ಪ್ರತಿ ವರ್ಷ ಬಿತ್ತನೆ ಮಾಡುತ್ತೇನೆ. ಕೆಲ ತಿಂಗಳ ಹಿಂದೆಯಷ್ಟೇ ಎತ್ತುಗಳನ್ನು ಮಾರಿದ್ದೆ. ಈಗ ಬಿತ್ತನೆಗೆ ಎತ್ತುಗಳು ಬೇಕಿರುವುದರಿಂದ ಖರೀದಿಸಲು ಹಾವೇರಿ ಸಂತೆಗೆ ಬಂದಿದ್ದೇನೆ’ ಎಂದರು.

ದಲ್ಲಾಳಿಗಳ ಕಾರುಬಾರು

ಜಾನುವಾರು ಮಾರುಕಟ್ಟೆಯಲ್ಲಿ ರೈತರಿಗಿಂತ ದಲ್ಲಾಳಿಗಳ ಕಾರುಬಾರು ಹೆಚ್ಚಿದೆ. ಇಬ್ಬರು ವ್ಯಕ್ತಿಗಳು ಪರಸ್ಪರ ತಮ್ಮ ಬಲಗೈ ಹಿಡಿದುಕೊಂಡು ಮೇಲೊಂದು ಬಟ್ಟೆ ಮುಚ್ಚಿಕೊಂಡು ಜಾನುವಾರು ವ್ಯವಹಾರ ಮಾಡುತ್ತಾರೆ. ಈ ರೀತಿ ವ್ಯವಹಾರ ಮಾಡುವವರಲ್ಲಿ ಬಹುತೇಕರು ದಲ್ಲಾಳಿಗಳಾಗಿದ್ದಾರೆ. ತಮ್ಮಿಷ್ಟದ ಎತ್ತುಗಳನ್ನು ಪಡೆಯಲು ಹಲವು ರೈತರು ದಲ್ಲಾಳಿಗಳ ಮೊರೆ ಹೋಗುತ್ತಿದ್ದಾರೆ. ಜೊತೆಗೆ ದಲ್ಲಾಳಿಗಳೇ ಎತ್ತುಗಳನ್ನು ಖರೀದಿಸಿ ಹಳ್ಳಿ ಹಳ್ಳಿಗೆ ಕೊಂಡೊಯ್ದು ಮಾರುತ್ತಿದ್ದಾರೆ. ಹಾವೇರಿ ಮಾರುಕಟ್ಟೆಯಲ್ಲಿಯೇ ಪ್ರತಿ ಸಂತೆಯಲ್ಲೂ ದಲ್ಲಾಳಿಗಳು ಕಾಣಸಿಗುತ್ತಾರೆ. ಖರೀದಿದಾರರು ಹಾಗೂ ಮಾರಾಟಗಾರರು ಇಬ್ಬರ ಕಡೆಯಿಂದಲೂ ದಲ್ಲಾಳಿಗಳು ಕಮಿಷನ್ ಪಡೆದುಕೊಳ್ಳುತ್ತಾರೆ. ‘ಎತ್ತುಗಳ ಪರೀಕ್ಷೆ ಮಾಡುವುದರಲ್ಲಿ ದಲ್ಲಾಳಿಗಳು ಪರಿಣಿತರು. ಹೀಗಾಗಿ ಅವರ ಸಹಾಯ ಪಡೆದು ವ್ಯವಹಾರ ಮಾಡುತ್ತಿದ್ದೇವೆ’ ಎಂದು ರೈತ ಶಿವಣ್ಣ ಮಜ್ಜಣ್ಣನವರ ಹೇಳಿದರು. ದಲ್ಲಾಳಿ ಭೀಮಪ್ಪ ‘10 ವರ್ಷದಿಂದ ಈ ಕೆಲಸ ಮಾಡುತ್ತಿದ್ದೇನೆ. ಇದರಿಂದ ಬಂದ ಹಣದಲ್ಲಿ ಜೀವನ ನಡೆಯುತ್ತಿದೆ. ಬಿತ್ತನೆ ಸಮಯದಲ್ಲಿ ಎತ್ತುಗಳಿಗೆ ಬೇಡಿಕೆ ಜಾಸ್ತಿ. ಮಾರುಕಟ್ಟೆಯಲ್ಲಿ ಎತ್ತುಗಳ ವ್ಯಾಪಾರವೂ ಹೆಚ್ಚಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.