ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ₹ 12.48 ಕೋಟಿ ಸೈಬರ್ ವಂಚನೆ: ದೂರುದಾರರ ಕೈ ಸೇರಿದ ₹ 42.52 ಲಕ್ಷ

* 2022ರಿಂದ 2024ರ ಅಕ್ಟೋಬರ್‌ವರೆಗೆ 305 ಪ್ರಕರಣ ದಾಖಲು * ದೂರುದಾರರ ಕೈ ಸೇರಿದ ₹ 42.52 ಲಕ್ಷ
Published : 15 ಸೆಪ್ಟೆಂಬರ್ 2024, 4:37 IST
Last Updated : 15 ಸೆಪ್ಟೆಂಬರ್ 2024, 4:37 IST
ಫಾಲೋ ಮಾಡಿ
Comments

ಹಾವೇರಿ: ಜಿಲ್ಲೆಯಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಕ್ರಮೇಣ ಹೆಚ್ಚಳವಾಗುತ್ತಿವೆ. 2022ರ ಜನವರಿಯಿಂದ 2024ರ ಆಗಸ್ಟ್‌ವರೆಗೆ ₹ 12.48 ಕೋಟಿ ವಂಚನೆಯಾಗಿದ್ದು, ಈ ಸಂಬಂಧ 305 ಪ್ರಕರಣಗಳು ದಾಖಲಾಗಿವೆ.

ಹೂಡಿಕೆ, ಉದ್ಯೋಗ, ಸಾಲ ಸೇರಿದಂತೆ ವಿವಿಧ ಆಮಿಷವೊಡ್ಡಿ ಜನರನ್ನು ವಂಚಿಸಲಾಗುತ್ತಿದೆ. ‘ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಿ’, ‘ಮನೆಯಿಂದಲೇ ಕೆಲಸ ಮಾಡಿ ಸಾವಿರ ಸಾವಿರ ದುಡಿಯಿರಿ’ ಸೇರಿದಂತೆ ಮೊಬೈಲ್‌ಗೆ ಬರುವ ವಿವಿಧ ಸಂದೇಶಗಳನ್ನು ನಂಬುತ್ತಿರುವ ಜನರು, ಸೈಬರ್ ವಂಚನೆ ಜಾಲಕ್ಕೆ ಸಿಲುಕುತ್ತಿದ್ದಾರೆ.

ಸೈಬರ್ ವಂಚನೆ ಪ್ರಕರಣಗಳ ತನಿಖೆಗೆಂದು ಜಿಲ್ಲೆಯಲ್ಲಿ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆ ತೆರೆಯಲಾಗಿದೆ. ಸೆನ್ ಠಾಣೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

‘ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಲಿಂಕ್ಡ್‌–ಇನ್, ವಾಟ್ಸ್‌ಆ್ಯಪ್‌ ಹಾಗೂ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಸಂಪರ್ಕಿಸುತ್ತಿರುವ ವಂಚಕರು, ವಿವಿಧ ಆಮಿಷವೊಡ್ಡಿ ಹಣ ದೋಚುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನರು ಜಾಗೃತಿಯಾದರೆ ಮಾತ್ರ, ಇಂಥ ವಂಚನೆ ಪ್ರಕರಣಗಳು ತಡೆಗಟ್ಟಬಹುದು’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೈಬರ್ ವಂಚನೆ ಸಂಬಂಧ ಹಾವೇರಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2022ರ ಜನವರಿಯಿಂದ 2024ರ ಆಗಸ್ಟ್‌ವರೆಗೆ 305 ಪ್ರಕರಣಗಳು ವರದಿಯಾಗಿವೆ. ಒಟ್ಟು ₹ 12.48 ಕೋಟಿ ಹಣ ವಂಚನೆಯಾಗಿದೆ’ ಎಂದು ಹೇಳಿದರು.

‘305 ಪ್ರಕರಣ ಪೈಕಿ 262 ಪ್ರಕರಣಗಳಲ್ಲಿ ಅನುಮಾನಾಸ್ಪದ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ₹ 12.48 ಕೋಟಿ ಪೈಕಿ ₹ 1.84 ಕೋಟಿ ಹಣದ ವಹಿವಾಟು ಸ್ಥಗಿತಗೊಳಿಸಲಾಗಿದೆ. ₹ 4.25 ಲಕ್ಷ ಹಣವನ್ನು ದೂರುದಾರರಿಗೆ ವಾಪಸು ಕೊಡಿಸಲಾಗಿದೆ’ ಎಂದು ತಿಳಿಸಿದರು.

ವೈದ್ಯರು ಸೇರಿ ಹಲವರಿಗೆ ವಂಚನೆ: ‘ವೈದ್ಯರು, ಉದ್ಯಮಿಗಳು, ವ್ಯಾಪಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಜನರನ್ನು ಗುರಿಯಾಗಿಸಿಕೊಂಡು ವಂಚಕರು ಕೃತ್ಯ ಎಸಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಹಣ ಕಳೆದುಕೊಳ್ಳುತ್ತಿದ್ದಾರೆ. ದೂರು ನೀಡುವವರ ಪೈಕಿ ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕುಂಬಾರಿಕೆ ಕೆಲಸ ಮಾಡುವ ವ್ಯಕ್ತಿಯೊಬ್ಬರು, ಹೆಚ್ಚು ಲಾಭದ ಆಸೆಗೆ ಬಿದ್ದು ವಾಟ್ಸ್‌ಆ್ಯಪ್‌ನಲ್ಲಿ ಪರಿಚಯವಾದ ಆರೋಪಿಗೆ ₹ 2.90 ಲಕ್ಷ ಕೊಟ್ಟಿದ್ದರು. ಫಾರ್ಮಾಸಿಸ್ಟ್‌ವೊಬ್ಬರು, ಹೆಚ್ಚಿನ ಲಾಭ ಬರುವುದಾಗಿ ತಿಳಿದು ₹ 1.70 ಲಕ್ಷ ನೀಡಿ ವಂಚನೆಗೆ ಒಳಗಾಗಿದ್ದಾರೆ. ಇಂಥ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸಂದೇಶ ಹಾಗೂ ಮೊಬೈಲ್‌ಗೆ ಬರುವ ಸಂದೇಶಗಳನ್ನು ಜನರು ನಂಬಬಾರದು. ಜಾಗೃತಿ ವಹಿಸಿದರೆ ಮಾತ್ರ ಸೈಬರ್ ಅಪರಾಧ ನಿಯಂತ್ರಣ ಸಾಧ್ಯ’ ಎಂದು ಹೇಳಿದರು.

ಸೈಬರ್ ವಂಚನೆ ಪ್ರಕಾರಗಳು

* ಹೂಡಿಕೆ ಮೇಲೆ ಅಧಿಕ ಲಾಭ: ಷೇರು ಮಾರುಕಟ್ಟೆ ಕ್ರಿಪ್ಟೊ ಕರೆನ್ಸಿ ಹಾಗೂ ಇತರೆ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುವ ಆಮಿಷವೊಡ್ಡು ಹಣ ಪಡೆದು ವಂಚನೆ

* ಕ್ಯೂಆರ್‌ ಕೋಡ್ : ಒಎಲ್‌ಎಕ್ಸ್ ಕ್ವಿಕ್ಕರ್ ಸೇರಿ ಹಲವು ಜಾಲತಾಣಗಳಲ್ಲಿ ವಸ್ತುಗಳ ಮಾರಾಟ ಹಾಗೂ ಖರೀದಿ ಸೋಗಿನಲ್ಲಿ ಕ್ಯೂಆರ್‌ ಕೋಡ್ ಕಳುಹಿಸಿ ಹಣ ಹಾಕಿಸಿಕೊಂಡು ವಂಚನೆ

* ಲಾಟರಿ ಬಹುಮಾನ ಉಡುಗೊರೆ: ಹೆಸರಾಂತ ಕಂಪನಿಗಳ ಹೆಸರಿನಲ್ಲಿ ಬಹುಮಾನದ ಆಮಿಷವೊಡ್ಡಿ ಶುಲ್ಕದ ರೂಪದಲ್ಲಿ ಹಣ ಪಡೆದು ವಂಚನೆ

* ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳು: ಫೇಸ್‌ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆಯುವ ವಂಚಕರು ಅದರ ಮೂಲಕವೇ ಜನರನ್ನು ಸಂಪರ್ಕಿಸುತ್ತಿದ್ದಾರೆ. ತುರ್ತು ಸಹಾಯಕ್ಕೆಂದು ಹಣ ಪಡೆದು ವಂಚಿಸುತ್ತಿದ್ದಾರೆ.

* ಕ್ರೆಡಿಟ್ ಡೆಬಿಟ್ ಕಾರ್ಡ್ ವಂಚನೆ: ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ನಿಷ್ಕ್ರಿಯವಾಗಿದೆ ಹಾಗೂ ಬದಲಾವಣೆ ಮಾಡಬೇಕೆಂದು ಹೇಳಿ ವಂಚಿಸಲಾಗುತ್ತಿದೆ.

* ವೈವಾಹಿಕ ಜಾಲತಾಣ: ಜೀವನ್‌ಸಾಥಿ ಶಾದಿ... ಹೀಗೆ ಹಲವು ಜಾಲತಾಣಗಳ ಮೂಲಕ ನಕಲಿ ಖಾತೆಗಳನ್ನು ತೆರೆದು ಯಾರದ್ದೋ ಫೋಟೊಗಳನ್ನು ಪ್ರೊಫೈಲ್‌ಗೆ ಹಾಕಿ ಮದುವೆ ಆಗುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಲಾಗುತ್ತಿದೆ.

* ಉದ್ಯೋಗದ ಆಮಿಷ: ನೌಕರಿ ಡಾಟ್‌ ಕಾಮ್ ಸೇರಿ ಹಲವು ಜಾಲತಾಣಗಳಲ್ಲಿ ರೆಸ್ಯುಮೆ ವಿವರ ಪಡೆದು ಯುವಜನತೆಯನ್ನು ಸಂಪರ್ಕಿಸುವ ವಂಚಕರು ಉದ್ಯೋಗದ ಆಮಿಷವೊಡ್ಡಿ ಹಣ ದೋಚುತ್ತಿದ್ದಾರೆ.

* ಕಾಲ್‌ ಗರ್ಲ್ ಹಾಗೂ ಬಾಯ್‌ ಡೇಟಿಂಗ್: ‘ಹುಡುಗಿಯರು ಇದ್ದಾರೆ’ ಹಾಗೂ ‘ಶ್ರೀಮಂತ ಮಹಿಳೆಯರಿಗೆ ಹುಡುಗರು ಬೇಕಾಗಿದ್ದಾರೆ’ ಎಂದು ಜಾಹೀರಾತುಗಳನ್ನು ಕಳುಹಿಸುವ ವಂಚಕರು ಶುಲ್ಕದ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿದ್ದಾರೆ.

* ಫೋಟೊ ವಿಡಿಯೊ ಕದ್ದು ಬ್ಲ್ಯಾಕ್‌ಮೇಲ್‘ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಅಪ್‌ಲೋಡ್ ಮಾಡುವ ಫೋಟೊ ಹಾಗೂ ವಿಡಿಯೊಗಳನ್ನು ಸೈಬರ್ ವಂಚಕರು ಕದಿಯುತ್ತಾರೆ.  ಅದೇ ಫೋಟೊ–ವಿಡಿಯೊ ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ ದೋಚುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT