ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆ ಪ್ರಕ್ರಿಯೆಗೆ 110 ಸಿಬ್ಬಂದಿ

ನಾಳೆ ಬೆಳಿಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭ: ಜಿಲ್ಲಾಧಿಕಾರಿ
Last Updated 8 ಡಿಸೆಂಬರ್ 2019, 5:18 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯ ಹಿರೇಕೆರೂರು ಮತ್ತು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಒಟ್ಟು 110 ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತ ಎಣಿಕೆ ಕಾರ್ಯವು ಡಿ.9ರಂದು ಹಾವೇರಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಲಿದೆ.ಮತ ಎಣಿಕೆಗಾಗಿ ಎರಡು ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕೊಠಡಿಗೆ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.ಇವಿಎಂ ಮತ ಎಣಿಕೆ ಜತೆಗೆ ಅಂಚೆ ಮತಪತ್ರ ಮತ್ತು ಸೇವಾ ಮತದಾರರ ಮತಗಳ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. 36 ಮತ ಎಣಿಕೆ ಮೇಲ್ವಿಚಾರಕರು, 36 ಎಣಿಕೆ ಸಹಾಯಕರು ಮತ್ತು 36 ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎಣಿಕೆ ಪ್ರಕ್ರಿಯೆ:ಮೊದಲು ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಎಣಿಕೆ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. ನಂತರ ಡಿ.9ರಂದು ಬೆಳಿಗ್ಗೆ 8ಕ್ಕೆ ಅಂಚೆ ಮತಪತ್ರಗಳ ಎಣಿಕೆ ಕೈಗೆತ್ತಿಕೊಳ್ಳಲಾಗುತ್ತದೆ. ಬೆಳಿಗ್ಗೆ 8.30ಕ್ಕೆ ಇವಿಎಂಗಳ ಮತ ಎಣಿಕೆಯನ್ನು ಆರಂಭಿಸಲಾಗುತ್ತದೆ. ನಂತರ ಎರಡು ಪ್ರಕ್ರಿಯೆಗಳು ಏಕಕಾಲದಲ್ಲಿ ನಡೆಯುತ್ತವೆ. ಆದರೆ ಅಂಚೆ ಮತಪತ್ರಗಳು ಅಂತಿಮಗೊಳ್ಳುವವರೆಗೂ ಇವಿಎಂಗಳ ಕೊನೆಯ ಎರಡು ಸುತ್ತುಗಳನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ. ಈ ಎರಡೂ ಪ್ರಕ್ರಿಯೆಗಳು ಮುಕ್ತಾಯಗೊಂಡ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಆಯ್ದ 5 ಮತಗಟ್ಟೆಗಳ ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಲು ಪ್ರಾರಂಭಿಸಲಾಗುತ್ತದೆ. ಅಂತಿಮವಾಗಿ ಫಲಿತಾಂಶ ಘೋಷಿಸಲಾಗುತ್ತದೆ ಎಂದು ವಿವರಿಸಿದರು.

ಮೊಬೈಲ್‌, ಸಿಗರೇಟ್‌ ನಿಷೇಧ:ಪ್ರತಿ ಎಣಿಕೆ ಕೊಠಡಿಯಲ್ಲಿಯೂ ಪ್ರದರ್ಶನ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸುತ್ತಿನ ಒಟ್ಟು ಮತಗಳನ್ನು ಪ್ರದರ್ಶಿಸಲಾಗುತ್ತದೆ. ಎರಡು ವಿಧಾನಸಭಾ ಕ್ಷೇತ್ರಗಳಿಗೆ ಎಣಿಕೆ ಸಿಬ್ಬಂದಿಗೆ ಪ್ರತ್ಯೇಕ ಎರಡು ಬಣ್ಣಗಳ ಪಾಸ್‌ಗಳನ್ನು ನೀಡಲಾಗಿದೆ. ಏಜೆಂಟರು ಕೂಡ ಬೇರೆ ಕೊಠಡಿಗೆ ಹೋಗದಂತೆ ನಿರ್ಬಂಧಿಸಲಾಗುತ್ತದೆ. ಎಲ್ಲ ಸಿಬ್ಬಂದಿಗೆ ಮತ್ತು ಎಣಿಕೆ ಏಜೆಂಟರಿಗೆ ಮೊಬೈಲ್‌, ಇತರೆ ವಿದ್ಯುನ್ಮಾನ ಉಪಕರಣಗಳು, ಬೆಂಕಿ ಪೊಟ್ಟಣ, ಸಿಗರೇಟ್‌, ತಂಬಾಕು ಉತ್ಪನ್ನ, ಬ್ಲೇಡ್‌, ಆಯುಧ, ಎಲೆ–ಅಡಿಕೆ, ಗುಟ್ಕಾ ಮುಂತಾದವುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.

ಅಂಚೆ ಮತಪತ್ರಗಳ ವಿವರ:ಹಿರೇಕೆರೂರು ಕ್ಷೇತ್ರದ ವ್ಯಾಪ್ತಿಯಲ್ಲಿ 353 ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಮತ್ತು 69 ಅಂಚೆ ಮತ ಪತ್ರಗಳನ್ನು ವಿತರಿಸಲಾಗಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ 607 ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಮತ್ತು 57 ಅಂಚೆ ಮತ ಪತ್ರಗಳನ್ನು ವಿತರಿಸಲಾಗಿದೆ. ಒಟ್ಟಾರೆ 960 ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಹಾಗೂ 126 ಅಂಚೆ ಮತ ಪತ್ರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬಂದೋಬಸ್ತ್‌:ಎಸ್ಪಿ ಕೆ.ಜಿ.ದೇವರಾಜ ಮಾತನಾಡಿ,ಮತ ಯಂತ್ರಗಳನ್ನುಸ್ಟ್ರಾಂಗ್‌ ರೂಮ್‌ನಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಕಾಯ್ದಿರಿಸಲಾಗಿದೆ. ಮತ ಎಣಿಕೆ ದಿನದಂದು ಸಶಸ್ತ್ರ ಮೀಸಲು ಪಡೆ, ಕೆ.ಎಸ್.ಆರ್‌.ಪಿ. ತಂಡ, ಪಿಎಸ್‌ಐ, ಸರ್ಕಲ್‌ ಇನ್‌ಸ್ಪೆಕ್ಟರ್‌, ಡಿವೈಎಸ್ಪಿಗಳು ಸೇರಿದಂತೆ 267 ಸಿಬ್ಬಂದಿ ನೇಮಿಸಿದ್ದೇವೆ. ಮತ ಎಣಿಕೆ ಕೇಂದ್ರದ ಮುಂಭಾಗ ಚುನಾವಣಾ ಸಿಬ್ಬಂದಿ ಹೊರತುಪಡಿಸಿ ಇತರರ ವಾಹನಗಳಿಗೆ ಅವಕಾಶ ಇರುವುದಿಲ್ಲ. ಡಿ.9ರಂದು ಹಿರೇಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಗಿ ಭದ್ರತೆ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT