ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ| ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ

ದೀಪಾವಳಿ: ಮಲ್ಲೂರಲ್ಲಿ ನಡೆದುಬಂದ ಸಾಂಪ್ರದಾಯಿಕ ಆಚರಣೆ
Published 14 ನವೆಂಬರ್ 2023, 5:44 IST
Last Updated 14 ನವೆಂಬರ್ 2023, 5:44 IST
ಅಕ್ಷರ ಗಾತ್ರ

ಬ್ಯಾಡಗಿ: ಮುಂಗಾರು ಹಂಗಾಮು ಪೂರ್ಣಗೊಂಡ ಬಳಿಕ ಹೊಲದ ಕೆಲಸಗಳಿಂದ ಸ್ವಲ್ಪ ಮಟ್ಟಿಗೆ ಮುಕ್ತರಾಗುವ ರೈತರು ನೆಚ್ಚಿನ ಹೋರಿಗಳಿಗೆ ಸ್ಪರ್ಧೆ ಏರ್ಪಡಿಸಿ ಮನೋರಂಜನೆ ಪಡೆಯುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ.

ತಾಲ್ಲೂಕಿನ ಮಲ್ಲೂರು ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಹಟ್ಟಿ ಹಬ್ಬದ ಮರುದಿನ ಸಾಂಪ್ರದಾಯಿಕ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತದೆ. ಆದರೆ ಯಾವುದೇ ಬಹುಮಾನದ ಘೋಷಣೆ ಇಲ್ಲದೆ ನಡೆಯುವ ಈ ಹಬ್ಬಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಹೋರಿಗಳನ್ನು ಸಿಂಗರಿಸಿಕೊಂಡು ಸ್ಪರ್ಧೆಗೆ ಬಿಡಲು ತರುತ್ತಾರೆ. ಆದರೆ ಪ್ರಸಕ್ತ ಮುಂಗಾರು ವಿಳಂಬವಾಗಿ, ಸಕಾಲಕ್ಕೆ ಮಳೆಯಾಗದೆ ಬೆಳೆ ಸಂಪೂರ್ಣ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ ಮಾಡಿದ ಬಳಿಕ ಮಳೆ ಕೈಕೊಟ್ಟಿದ್ದರಿಂದ ಎರಡು ಬಾರಿ ಬಿತ್ತನೆ ಮಾಡಿ ರೈತರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಸಾಲದ ಹೊರೆ ಅವರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ. ಆದರೂ ಹಬ್ಬ ಹರಿದಿನಗಳ ಆಚರಣೆ ಸರಳವಾಗಿ ನಡೆಯುತ್ತದೆ.

ಅದರಂತೆ ಹೋರಿ ಬೆದರಿಸುವ ಸ್ಪರ್ಧೆಗಳು ಸಾಂಪ್ರದಾಯಿಕವಾಗಿ ನಡೆಯುತ್ತದೆ ಎಂದು ಸಂಘಟಕರು ಹೇಳುತ್ತಾರೆ. ದೀಪಾವಳಿ ಹಬ್ಬ (ಹಟ್ಟಿ ಹಬ್ಬ) ದಂದು ಗ್ರಾಮದಲ್ಲಿ ರಾಸು (ಹೋರಿ) ಗಳ ಮೈತೊಳೆದು ಕೊಂಬುಗಳಿಗೆ ಬಣ್ಣ ಹಚ್ಚಿ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಪೂಜೆಯನ್ನು ಸಲ್ಲಿಸಿ ಚರಗ ಚಲ್ಲುತ್ತಾರೆ. ಬಳಿಕ ಬಣಕಾರ ಮನೆಯಲ್ಲಿನ ರಾಸುಗಳನ್ನು ಸಿಂಗರಿಸಿ ಜೂಲಾ ಹಾಕಿ, ಕೊಂಬುಗಳಿಗೆ ಕೊಬ್ಬರಿಯನ್ನು ಪೋಣಿಸಿ ಸ್ಪರ್ಧೆಗೆ ಅಣಿಗೊಳಿಸುತ್ತಾರೆ. ಸಿಹಿ ತಿಂಡಿಗಳನ್ನು ತಯ್ಯಾರಿಸಿ ನೈವೇದ್ಯ ಅರ್ಪಿಸುತ್ತಾರೆ. ಸಂಜೆ ಕೇಕೆ, ಸಿಳ್ಳೆಗಳ ನಡುವೆ ಬಣಕಾರ ಹೋರಿಯೊಂದಿಗೆ ತಮ್ಮ ಹೋರಿಗಳನ್ನು ಸಹ ಅಗಸಿಗೆ ತಂದು ಸ್ಪರ್ಧೆಗೆ ಬಿಡಲು ತಯಾರಿ ನಡೆಸುತ್ತಾರೆ. ಮೊದಲು ಬಣಕಾರ ಹೋರಿಯನ್ನು ಸ್ಪರ್ಧೆಗೆ ಬಿಡುವ ಮೂಲಕ ಹೋರಿ ಸ್ಪರ್ಧೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ. ಬಳಿಕ ಗ್ರಾಮದ ಹೋರಿಗಳನ್ನು ಒಂದೊಂದರಂತೆ ಸ್ಪರ್ಧೆಗೆ ಬಿಟ್ಟು ಸಂಭ್ರಮಿಸಲಾಗುತ್ತದೆ ಎಂದು ಗ್ರಾಮದ ವೀರಭದ್ರಗೌಡ ಹೊಮ್ಮರಡಿ ಹೇಳುತ್ತಾರೆ.

ದೀಪಾವಳಿ ಹಬ್ಬದ ಮರುದಿನ ನಡೆಯುವ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೆಚ್ಚಿನ ಹೋರಿಗಳಿಗೆ ವಿವಿಧ ತರದ ಜೂಲಾ, ಕಾಲಿಗೆ ಗೆಜ್ಜೆ, ಕೊಂಬೆಣಸು, ರಿಬ್ಬನ್ ಹಾಗೂ ಬಲೂನುಗಳಿಂದ ಅಲಂಕರಿಸಿ ಸ್ಪರ್ಧೆಗೆ ತರಲಾಗುತ್ತದೆ. ಸ್ಪರ್ಧೆ ವೀಕ್ಷಿಸಲು ದಾವಣಗೆರೆ, ಹರಿಹರ ಸೇರಿದಂತೆ ವಿವಿಧ ಭಾಗಗಳಿಂದ ಜನರ ದಂಡು ಹರಿದು ಬರತ್ತದೆ. ಸಿಂಗರಿಸಿದ ಹೋರಿಗಳನ್ನು ಬ್ಯಾಡಗಿ ಹುಲಿ, ಕಿಚ್ಚ, ಮಯೂರ, ಗರುಡ ರೇಖೆ, ಅಂಜದ ಗಂಡು, ಚಾಂದನಿ.....ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

ಓಡುವ ಹೋರಿಗಳ ಮುಂದೆ ಬ್ಯಾಡಗಿ ಹುಲಿ ಬರಾಕತೈತಿ ದಾರಿ ಬಿಡಿ ಎಂದು ಎಚ್ಚರಿಕೆ ನೀಡುವ ಯುವಕರ ದಂಡು, ಕೇಕೆ, ಸಿಳ್ಳೆಗಳಿಂದ ಪ್ರೋತ್ಸಾಹಿಸುವ ಪ್ರೇಕ್ಷಕರು, ಹೋರಿಗಳನ್ನು ಹುರುದುಂಬಿಸಿ ಸ್ಪರ್ಧೆಗೆ ಬಿಡುವ ದೃಶ್ಯಗಳು ಕಂಡು ಬರುತ್ತವೆ. ಇದನ್ನು ನೋಡಿಯೇ ಆನಂದಸಬೇಕು ಎನ್ನುತ್ತಾರೆ ಅಭಿಮಾನಿಗಳು.
 

ಬಹುಮಾನಗಳ ಘೋಷಣೆ ಇಲ್ಲ ಗ್ರಾಮದಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆ ಯಾವುದೇ ಬಹುಮಾನವನ್ನು ಘೋಷಣೆ ಮಾಡುವುದಿಲ್ಲ. ಹೋರಿಗಳನ್ನು ತಂದು ಸ್ಪರ್ಧೆಗೆ ಬಿಟ್ಟು ಮನೋರಂಜನೆ ಪಡುವುದು ಮಾತ್ರ ಇಲ್ಲಿ ನಡೆಯುತ್ತದೆ. ಯುವ ಹಿಡಿತಗಾರರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿಯ ವಿಶೇಷ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT