ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಸಮಸ್ಯೆಗಳಿಗೆ ವಲ್ಲಭಬಾಯಿ ಪಟೇಲರು ಕಾರಣ; ದೊಡ್ಡರಂಗೇಗೌಡ ಅಸಮಾಧಾನ

’ಗಡಿನಾಡು ಮತ್ತು ಹೊರನಾಡು ಕನ್ನಡಿಗರ ತಳಮಳಗಳು‘ ಗೋಷ್ಠಿ
Last Updated 8 ಜನವರಿ 2023, 19:04 IST
ಅಕ್ಷರ ಗಾತ್ರ

ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ(ಹಾವೇರಿ): ‘ಅಂದಿನ ಕೇಂದ್ರ ಗೃಹ ಸಚಿವ ಸರ್ದಾರ್‌ ವಲ್ಲಭಬಾಯಿ ಪಟೇಲರು ಭಾಷಾವಾರು ಪ್ರಾಂತ ವಿಂಗಡಣೆಯೆಂದು ಭೂಪಟವನ್ನು ಇಟ್ಟುಕೊಂಡು ಅವೈಜ್ಞಾನಿಕವಾಗಿ ಗೆರೆಗಳನ್ನು ಎಳೆದರು. ಗಡಿ ಸಮಸ್ಯೆಗಳಿಗೆ ಅವರೇ ಮೂಲ ಕಾರಣರಾಗಿದ್ದಾರೆ’ ಎಂದು 86ನೇ ಕನ್ನಡ‌ ಸಾಹಿತ್ಯ ಸಮ್ಮೇಳನದ‌ ಅಧ್ಯಕ್ಷ‌ ಡಾ. ದೊಡ್ಡರಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮೇಳನದ ಮೂರನೇ ದಿನ ನಡೆದ ‘ಗಡಿನಾಡು ಮತ್ತು ಹೊರನಾಡು ಕನ್ನಡಿಗರ ತಳಮಳಗಳು' ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಭಾಷಾವಾರು ಪ್ರಾಂತ ವಿಂಗಡಣೆ ಇತ್ತೀಚೆಗೆ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ. ಗಡಿ ಪ್ರದೇಶದಲ್ಲಿರುವ ಕೆಲವು ಹಳ್ಳಿಗಳು ಮೂರು ರಾಜ್ಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿವೆ. ಜನ ಜೀವನದ ಸಂಸ್ಕೃತಿಗೆ ಮತ್ತು ಭಾಷೆಗೆ ಅನುಗುಣವಾಗಿ ವರ್ಗೀಕರಣವಾಗಲಿಲ್ಲ. ಭಾಷಾವಾರು ಪ್ರಾಂತ ವಿಂಗಡಣೆ ಪುನರ್‌ ಹೊಂದಾಣಿಕೆ ಮಾಡಬೇಕು ಎನ್ನುವುದನ್ನು ಇದು ಸೂಚಿಸುತ್ತದೆ’ ಎಂದರು.

‘ಕಾಸರಗೋಡು ಮತ್ತು ಬೆಳಗಾವಿಯ ಗಡಿ ಸಮಸ್ಯೆ ಸದಾ ಕಾಡುತ್ತಿವೆ. ಸೊಲ್ಲಾಪುರ, ಅಕ್ಕಲಕೋಟೆ, ಜತ್‌ ಪ್ರದೇಶಗಳಲ್ಲಿ ಕನ್ನಡ ವಿಜೃಂಭಿಸಿದೆ. ಶೇಕಡ 90ರಷ್ಟು ಕನ್ನಡ ಭಾಷಿಗರು ಅಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಭಾಗವು ಕರ್ನಾಟಕಕ್ಕೆ ಸೇರಬೇಕು’ ಎಂದು ಪ್ರತಿಪಾದಿಸಿದರು.

‘ಚೆನ್ನೈ, ಮುಂಬೈ ನಗರಗಳಲ್ಲಿ ಕನ್ನಡ ಸಂಘಟನೆಗಳು, ಕೆಲವು ಪತ್ರಿಕೆಗಳು ಸರಾಗವಾಗಿ ಕಾರ್ಯ ನಿರ್ವಹಿಸುತ್ತಿವೆ. ಆ ಭಾಗಗಳಲ್ಲಿ ಅವರು ಕನ್ನಡದ ಕಾರ್ಯಕ್ರಮವೇನಾದರೂ ನಡೆಸಿದರೆ, ಸಾವಿರಾರು ಮಂದಿ ಸೇರುತ್ತಾರೆ. ಹೊರ ರಾಜ್ಯದಲ್ಲಿ ಕನ್ನಡ ಕಟ್ಟುವ ಕೆಲಸ ಸಾಧ್ಯವಾಗುತ್ತದೆ ಎಂದಾದರೆ, ನಮ್ಮ ನಾಡಲ್ಲಿ ಯಾಕಾಗುತ್ತಿಲ್ಲ? ಸರ್ಕಾರದಿಂದ ಅನುದಾನ ದೊರೆಯುತ್ತವೆಯಾದರೂ, ಹಣಕಾಸಿನ‌ ಇಲಾಖೆ ಕೊಕ್ಕೆ ಹಾಕುತ್ತದೆ. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ. ಕೆಲ ಸಮಸ್ಯೆಗಳು ಹಾಗೆಯೇ ಉಳಿದಿವೆ’ ಎಂದು ಸರ್ಕಾರದ ನಡೆಯನ್ನು ಟೀಕಿಸಿದರು.

ಸಾಂವಿಧಾನಿಕವಾಗಿ ಬದುಕೋಣ..: ‘ಕೇರಳದಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತ ಕನ್ನಡಿಗರಿದ್ದಾರೆ. ಕನ್ನಡ ಶಾಲೆ ಇಲ್ಲದ ಕಾರಣ ಕನ್ನಡ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಕನ್ನಡ ಶಾಲೆಗಳನ್ನು ತೆರೆಯಲು ಅಲ್ಲಿಯ ಸರ್ಕಾರ ಕಠೋರವಾಗಿ ವರ್ತಿಸುತ್ತಿದೆ. ಜಾಣಕುರುಡುತನ ಬಿಟ್ಟು, ಕನ್ನಡ ಶಾಲೆ ಕಟ್ಟಿ, ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸಿದ ಡಾ. ದೊಡ್ಡರಂಗೇಗೌಡ, ಪು.ತಿ.ನ ಅವರ ‘ಗುಡಿಯಾಚೆ, ಗಡಿಯಾಚೆ ಕನ್ನಡ ಕಟ್ಟೋಣ’ ಕವನದ ಸಾಲನ್ನು ವಾಚಿಸಿ, ‘ಅಂತಹ ಮಧುರ ಮೈತ್ರಿಗೆ ನಾಂದಿಯಾಗಿ, ಸಾಂವಿಧಾನಿಕವಾಗಿ ಬದುಕೋಣ’ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT