ಹಾವೇರಿ: ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಯಲ್ಲಾಪುರದಲ್ಲಿ ನಡೆದಿದ್ದ ಸಾದಿಕ್ ಹುಸೇನಮಿಯಾ ಚಿಕ್ಕಮತ್ತೂರ (30) ಎಂಬುವವರ ಅಸಹಜ ಸಾವು ಪ್ರಕರಣ ಭೇದಿಸಿರುವ ಹಂಸಬಾವಿ ಠಾಣೆ ಪೊಲೀಸರು, ಕೃತ್ಯ ಎಸಗಿದ್ದ ಆರೋಪದಡಿ ಪತ್ನಿ ಉಮ್ಮಿಸಲ್ಮಾ ಹಾಗೂ ಪ್ರಿಯಕರ ಜಾಫರ್ ಸಾದಿಕ್ ಸತ್ತರಸಾಬ ಶೇತಸನದಿ ಅವರನ್ನು ಬಂಧಿಸಿದ್ದಾರೆ.
‘ಕೂಲಿ ಕಾರ್ಮಿಕ ಸಾದಿಕ್ ಚಿಕ್ಕಮತ್ತೂರು ಸಾವಿನ ಬಗ್ಗೆ ಸಂಬಂಧಿಕರು ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಮೃತ ಸಾದಿಕ್ ಅವರನ್ನು ಕೊಲೆ ಮಾಡಿರುವುದು ಪತ್ನಿ ಉಮ್ಮಿಸಲ್ಮಾ ಹಾಗೂ ಆಕೆಯ ಪ್ರಿಯಕರ ಜಾಫರ್ ಎಂಬುದು ಗೊತ್ತಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಉಮ್ಮಿಸಲ್ಮಾ ಹಾಗೂ ಪ್ರಿಯಕರ ಜಾಫರ್, ಸಲುಗೆಯಿಂದ ಇದ್ದರು. ತಮ್ಮಿಬ್ಬರ ಸಲುಗೆಗೆ ಅಡ್ಡಿಯಾಗುತ್ತಾರೆಂದು ತಿಳಿದು ಸಾದಿಕ್ ಅವರನ್ನು ಕೊಲೆ ಮಾಡಿರುವುದಕ್ಕೆ ಪುರಾವೆಗಳು ಲಭ್ಯವಾಗಿವೆ’ ಎಂದು ಮಾಹಿತಿ ನೀಡಿದರು.
ತಲೆಯ ಹಿಂಭಾಗಕ್ಕೆ ಮಚ್ಚಿನೇಟು: ‘ಸಾದಿಕ್ ಅವರನ್ನು ಕೊಲೆ ಮಾಡಲು ಉಮ್ಮಿಸಲ್ಮಾ ಹಾಗೂ ಜಾಫರ್ ಸಂಚು ರೂಪಿಸಿದ್ದರು. ಕೃತ್ಯ ಎಸಗಲು ಸಮಯಕ್ಕಾಗಿ ಕಾಯುತ್ತಿದ್ದರು. ಸೆ. 24ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದ ಸಾದಿಕ್, ಊಟ ಮಾಡಿ ಮಲಗಿದ್ದರು. ಇದೇ ಸಂದರ್ಭದಲ್ಲಿ ಉಮ್ಮಿಸಲ್ಮಾ, ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು’ ಎಂದು ಪೊಲೀಸರು ತಿಳಿಸಿದರು.
‘ಮಲಗಿದ್ದ ಸಾದಿಕ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಸಾದಿಕ್ ಎಚ್ಚರವಾಗುತ್ತಿದ್ದಂತೆ, ಅವರ ತಲೆಯ ಹಿಂಭಾಗಕ್ಕೆ ಮಚ್ಚಿನಿಂದ ಎರಡು ಬಾರಿ ಬಲವಾಗಿ ಹೊಡೆದಿದ್ದರು. ಇದರಿಂದಾಗಿ ಸಾದಿಕ್, ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದರು’ ಎಂದು ಹೇಳಿದರು.
ಶೌಚಾಲಯದಲ್ಲಿ ಮೃತದೇಹ ಇರಿಸಿ ನಾಟಕ: ‘ಕೊಲೆ ಎಂಬುದು ಗೊತ್ತಾಗಬಾರದೆಂದು ಸಾಕ್ಷ್ಯ ನಾಶ ಮಾಡಲು ಯೋಚಿಸಿದ್ದ ಆರೋಪಿಗಳು, ಮೃತದೇಹವನ್ನು ಬೆಡ್‌ರೂಮ್ ಬಳಿಯ ಶೌಚಾಲಯದಲ್ಲಿ ಇರಿಸಿದ್ದರು. ನಂತರ, ಉಮ್ಮಿಸಲ್ಮಾ ಹಾಗೂ ಜಾಫರ್, ನಸುಕಿನವರೆಗೂ ಜೊತೆಯಲ್ಲಿದ್ದರು. ಜಾಫರ್ ಮನೆಯಿಂದ ನಸುಕಿನಲ್ಲಿ ಹೊರಟು ಹೋಗಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಸೆ. 25ರಂದು ನಸುಕಿನಲ್ಲಿ ಶೌಚಾಲಯ ಬಳಿ ಹೋಗಿದ್ದ ಉಮ್ಮಿಸಲ್ಮಾ, ‘ನನ್ನ ಪತಿ ಶೌಚಾಲಯದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಕಾಪಾಡಿ...’ ಎಂದು ಚೀರಾಡಿದ್ದಳು. ತಲೆಯ ಹಿಂಭಾಗದಲ್ಲಿ ಏಟಾಗಿದ್ದರಿಂದ, ಕಾಲು ಜಾರಿ ಬಿದ್ದಿರಬಹುದೆಂದು ಸ್ಥಳೀಯರು ಅಂದುಕೊಂಡಿದ್ದರು. ಬಳಿಕ, ಜೀವ ಇರಬಹುದೆಂದು ತಿಳಿಸು ಹಿರೇಕೆರೂರು ಆಸ್ಪತ್ರಗೆ ತೆಗೆದುಕೊಂಡು ಹೋಗಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಸಾದಿಕ್ ಮೃತಪಟ್ಟಿರುವುದಾಗಿ ತಿಳಿಸಿದ್ದರು’ ಎಂದು ವಿವರಿಸಿದರು.
‘ಮೃತದೇಹದ ಮೇಲಿನ ಗಾಯದ ಗುರುತು ನೋಡಿದ್ದ ಸಂಬಂಧಿಕರು, ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಅಸಹಜ ಪ್ರಕರಣ (ಯುಡಿಆರ್) ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದ ಸಿಪಿಐ ಬಸವರಾಜ ಪಿ.ಎಸ್. ಹಾಗೂ ಪಿಎಸ್‌ಐ ಮಾಳಪ್ಪ ಚಿಪ್ಪಲಕಟ್ಟಿ ನೇತೃತ್ವದ ತಂಡ, ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಿದಾಗ ಆರೋಪಿಗಳು ಸಿಕ್ಕಿಬಿದ್ದರು. ಬಳಿಕ, ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.