ಹಾವೇರಿ: ರಾಜ್ಯದ ಅತೀ ದೊಡ್ಡ ಕೆರೆಗಳ ಪೈಕಿ ಎರಡನೇ ಸ್ಥಾನದಲ್ಲಿರುವ ನಗರದ ಹೆಗ್ಗೇರಿ ಕೆರೆ, ಹಲವು ಸೌಕರ್ಯಗಳಿಂದ ವಂಚಿತವಾಗಿದೆ. ‘ನೀರು ಸಂಗ್ರಹಕ್ಕಷ್ಟೇ ಸೀಮಿತವಾಗಿರುವ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು’ ಎಂಬ ಇಲ್ಲಿಯ ಜನರ ಕನಸು ಹಲವು ವರ್ಷವಾದರೂ ಈಡೇರಿಲ್ಲ.
ಕೆರೆ ಪ್ರದೇಶ ಒತ್ತುವರಿ, ಅರ್ಧಕ್ಕೆ ನಿಂತ ಗಾಜಿನ ಮನೆ ನಿರ್ಮಾಣ, ಕೆರೆ ಗುರುತಿಸಲು ಇಲ್ಲದ ತಡೆಗೋಡೆಗಳು, ದಾಖಲೆಯಷ್ಟೇ ಉಳಿದ ಜೀವ ವೈವಿಧ್ಯಗಳ ತಾಣ... ಹೀಗೆ ಹಲವು ಸಮಸ್ಯೆಗಳನ್ನು ಹೆಗ್ಗೇರಿ ಕೆರೆ ಎದುರಿಸುತ್ತಿದೆ. ಸಮಸ್ಯೆಗಳ ಬಗ್ಗೆ ಜನರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಆಗಾಗ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ.
ಕೆರೆ ಅಭಿವೃದ್ಧಿ ಹೆಸರಿನಲ್ಲಿ ಹಲವು ಯೋಜನೆಗಳಡಿ ಅನುದಾನ ಬಿಡುಗಡೆಯಾಗಿದೆ. ಕೆರೆ ಪ್ರದೇಶದಲ್ಲಿಯೂ ಮೇಲ್ನೋಟಕ್ಕಷ್ಟೇ ಕಾಮಗಾರಿಗಳು ನಡೆದಿವೆ. ಆದರೆ, ಕೆರೆ ಮಾತ್ರ ಸಂಪೂರ್ಣ ಅಭಿವೃದ್ಧಿಯಾದಂತೆ ಕಾಣುತ್ತಿಲ್ಲ. ಕೆರೆ ಸುತ್ತಮುತ್ತಲಿನ ಸ್ಥಳದಲ್ಲಿ ಸುತ್ತಾಡಿದರೆ, ಹದಗೆಟ್ಟ ಪಾದಚಾರಿ ಮಾರ್ಗ ಹಾಗೂ ಕಸ ಬೆಳೆದ ಪ್ರದೇಶವೇ ಕಣ್ಣಿಗೆ ಕಾಣುತ್ತಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಕೆರೆಯಿದೆ. ಕೆರೆ ತಲುಪುತ್ತಿದ್ದಂತೆ ಕೋಡಿ ಬೀಳುವ ಸ್ಥಳ ಗೋಚರಿಸುತ್ತದೆ. ಈ ಸ್ಥಳದಲ್ಲೂ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ.
ಹಾವೇರಿಗೆ ಕುಡಿಯುವ ನೀರು ಒದಗಿಸಲು ಆಸರೆಯಾದ ಕೆರೆಯನ್ನು 2008ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಗರಸಭೆ ಅಧೀನಕ್ಕೆ ನೀಡಲಾಗಿದೆ. ಕೆರೆ ಹಾಗೂ ಕೆರೆ ಪ್ರದೇಶದ ನಿರ್ವಹಣೆ ಕೊರತೆ ಹೆಚ್ಚಿದೆ. ಇದರಿಂದಾಗಿ, ಕೆರೆ ಪ್ರದೇಶವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಾನೂನು ಬಾಹಿರ ಚಟುವಟಿಕೆಗಳೂ ನಡೆಯುತ್ತಿವೆ.
ನಿತ್ಯವೂ ಸಂಜೆ ಹಾಗೂ ರಾತ್ರಿ ಕಿಡಿಗೇಡಿಗಳು ಕೆರೆ ಪ್ರದೇಶಕ್ಕೆ ಬಂದು ಮದ್ಯದ ಪಾರ್ಟಿ ಮಾಡುತ್ತಿದ್ದಾರೆ. ಕೆಲವರಂತೂ ಹಗಲಿನಲ್ಲಿಯೇ ಪಾದಚಾರಿ ಮಾರ್ಗದಲ್ಲಿ ಕುಳಿತು, ಮದ್ಯ ಕುಡಿಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ರಜಾ ದಿನಗಳಲ್ಲಿಯೂ ಕೆರೆ ದಡ ಹಾಗೂ ನಿರ್ಜನ ಪ್ರದೇಶದಲ್ಲಿ ಪಾರ್ಟಿ ಮಾಡುವವರು ಹೆಚ್ಚಾಗುತ್ತಿದ್ದಾರೆ. ಇದರಿಂದಾಗಿ, ಮಹಿಳೆಯರು ಹಾಗೂ ಮಕ್ಕಳ ಸಮೇತ ಕೆರೆ ಬಳಿ ಹೋಗಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
‘ನಮ್ಮ ಭಾಗದ ಅತೀ ದೊಡ್ಡ ಕೆರೆ, ಹೆಗ್ಗೇರಿ ಕೆರೆ. ನಿರ್ವಹಣೆ ಕೊರತೆಯಿಂದಾಗಿ ಕೆರೆ ಕುಗ್ಗಿದೆ. ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಜೊತೆಗೆ, ಹೆಗ್ಗೇರಿ ಕೆರೆಯನ್ನು ರಾಜ್ಯದ ಮಾದರಿ ಕೆರೆಯನ್ನಾಗಿ ಮಾಡಬೇಕು’ ಎಂದು ಡಾ. ಮಹಾದೇವ ಬಣಕಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಕಾರ್ಯದರ್ಶಿ ಅಬ್ದುಲ್ ಹುಬ್ಬಳ್ಳಿ ಆಗ್ರಹಿಸಿದರು.
‘ಶರಣರು, ಸಂತರು ಹಾಗೂ ದಾರ್ಶನಿಕರು ಜನಿಸಿದ ನಾಡು ಹಾವೇರಿ. ಇಂಥ ಊರಿನಲ್ಲಿ ಸುಸಜ್ಜಿತ ಉದ್ಯಾನ ಹಾಗೂ ಪ್ರವಾಸಿ ತಾಣವಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೆಗ್ಗೇರಿ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿದರೆ, ಹೆಚ್ಚು ಜನರು ಬಂದು ಹೋಗುತ್ತಾರೆ. ಹಾವೇರಿಗೂ ಹೆಸರು ಬರುತ್ತದೆ’ ಎಂದು ಹೇಳಿದರು.
ಕುಡಿಯುವ ನೀರು ಯೋಜನೆಗೆ ಗ್ರಹಣ: ಹೆಗ್ಗೇರಿ ಕೆರೆ ನೀರನ್ನು ಬಳಸಿಕೊಂಡು ಹಾವೇರಿಗೆ 24 ಗಂಟೆ ಕುಡಿಯುವ ನೀರು ಒದಗಿಸುವ ಯೋಜನೆ ಅರ್ಧಕ್ಕೆ ನಿಂತಿದ್ದು, ನೀರು ಯಾವಾಗ ಬರುತ್ತದೆ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಯೋಜನೆಯ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರ, ಜಿಲ್ಲಾಡಳಿತದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದರ ವಿರುದ್ಧ ಜಿಲ್ಲಾಡಳಿತ ಸಹ ಕಾನೂನು ಹೋರಾಟ ನಡೆಸುತ್ತಿದೆ. ಕಾಮಗಾರಿ ಮುಕ್ತಾಯ ದಿನವನ್ನು ಮುಂದೂಡಲು ನಗರಸಭೆ ಆಯುಕ್ತರು ಹಲವು ಬಾರಿ ಅವಕಾಶ ನೀಡಿ ಲೋಪ ಎಸಗಿದ್ದನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪತ್ತೆ ಮಾಡಿದ್ದರು. ಜೊತೆಗೆ, ಆಯುಕ್ತರ ಅಮಾನತಿಗೂ ಸೂಚಿಸಿದ್ದರು. ಆದರೆ, ಇದುವರೆಗೂ ಆಯುಕ್ತರ ಅಮಾನತಾಗಿಲ್ಲ. ಯೋಜನೆಯೂ ಪೂರ್ಣಗೊಂಡಿಲ್ಲ.
ಕೆರೆ ಬಹುಪಾಲು ಭರ್ತಿ: ನಗರಕ್ಕೆ ಕುಡಿಯುವ ನೀರು ಒದಗಿಸುವ ಹೆಗ್ಗೇರಿ ಕೆರೆಗೆ ಈ ಬಾರಿ ಮಳೆಗಾಲದಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಬಂದಿದೆ. ಅಪ್ಪರ್ ತುಂಗಾ ಮೇಲ್ದಂಡೆ (ಯುಟಿಪಿ) ಹಾಗೂ ಚೌಡದಾನಪುರ ಏತ ನೀರಾವರಿ ಯೋಜನೆಗಳ ಕಾಲುವೆ ಮೂಲಕವೂ ಕೆರೆಗೆ ನೀರು ಹರಿಸಲಾಗಿದೆ.
ಮಳೆ ನೀರು ಹಾಗೂ ಕಾಲುವೆಗಳ ನೀರಿನಿಂದಾಗಿ ಕೆರೆ ಬಹುಪಾಲು ಭರ್ತಿಯಾಗಿದೆ. 2019ರಲ್ಲಿ ಕೋಡಿ ಬಿದ್ದಿದ್ದ ಕೆರೆ, ನಂತರದ ವರ್ಷಗಳಲ್ಲಿ ಸೋರಗಿತ್ತು. ಈ ಬಾರಿ ಕೆರೆ, ಕೋಡಿ ಬೀಳುವ ಮುನ್ಸೂಚನೆ ಸಹ ನೀಡುತ್ತಿದೆ.
ಕೆರೆ ಬಹುಪಾಲು ತುಂಬಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ‘ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ವಿಶೇಷ ಯೋಜನೆ ಘೋಷಿಸಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಹೆಗ್ಗೇರಿ ಕೆರೆಗೆ ದೇಶ–ವಿದೇಶದಿಂದ ವಲಸೆ ಪಕ್ಷಿಗಳು ಬರುತ್ತಿವೆ. ಹೀಗಾಗಿ, ಹೆಗ್ಗೇರಿ ಕೆರೆಯನ್ನು ಪಕ್ಷಿಧಾಮವನ್ನಾಗಿ ಘೋಷಿಸಬೇಕೆಂಬ ಒತ್ತಾಯವೂ ಇದೆ.
‘ಕೆರೆ ಜಾಗ ಒತ್ತುವರಿ’
ಹರಿಯುವ ನೀರಿಗೆ ಹಾವೊಂದು ಅಡ್ಡವಾಗಿ ಬಂದಿದ್ದರಿಂದ ಇದೇ ಜಾಗದಲ್ಲಿ ನಳ ಚಕ್ರವರ್ತಿಯು ಕೆರೆ ಕಟ್ಟಿಸಿದನೆಂಬ ಮಾತಿದೆ. ಅದೇ ಕೆರೆಗೆ ನಲ್ಲಹಳಕೆರೆ ಎಂಬ ಹೆಸರಿತ್ತು. ನಂತರ ಅದು ಹಾವೇರಿಯ ಹೆಗ್ಗೇರಿ ಕೆರೆಯೆಂದು ನಾಮಕರಣಗೊಂಡಿತೆಂಬ ಇತಿಹಾಸವಿದೆ. ಇದೇ ಕೆರೆಯ ಜಾಗವನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದು ಅದರ ತೆರವಿಗೆ ಜನರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ‘ರಾಜ್ಯದ ಅತೀ ದೊಡ್ಡ ಕೆರೆಗಳ ಪೈಕಿ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಸೊಳೆಕೆರೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಹಾವೇರಿಯ ಹೆಗ್ಗೇರಿ ಕೆರೆ ಇದೆ. ಕೆಲ ದಾಖಲೆಗಳ ಪ್ರಕಾರ ಸುಮಾರು 800 ಎಕರೆ ಪ್ರದೇಶದಲ್ಲಿ ಕೆರೆ ಚಾಚಿಕೊಂಡಿತ್ತು. ಆದರೆ ಈಗ ಕೆರೆಯ ವಿಸ್ತೀರ್ಣ 689 ಎಕರೆಗೆ ಮಾತ್ರ ಸೀಮಿತವಾಗಿದೆ. ಉಳಿದ ಭಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಅಬ್ದುಲ್ ಹುಬ್ಬಳ್ಳಿ ಆರೋಪಿಸಿದರು. ‘ಒತ್ತುವರಿ ತೆರವು ಮಾಡಬೇಕು. ಕೆರೆಯ ಜಾಗವನ್ನು ಗುರುತಿಸಿ ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ಅತಿಕ್ರಮಣ ಮಾಡಿರುವವರನ್ನು ಪತ್ತೆ ಮಾಡಿ ಸುಪ್ರೀಂಕೋರ್ಟ್ ಆದೇಶದನ್ವಯ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ಗಾಜಿನ ಮನೆ ನಿರ್ಮಾಣದಲ್ಲೂ ಅಕ್ರಮ’
‘ಹೆಗ್ಗೇರಿ ಕೆರೆಯಲ್ಲಿ ‘ಗಾಜಿನ ಮನೆ’ (ಗ್ಲಾಸ್ ಹೌಸ್) ನಿರ್ಮಾಣ ಮಾಡುವ ಕಾಮಗಾರಿ ಅರ್ಧಕ್ಕೆ ನಿಂತಿದೆ. ಯೋಜನೆಗೆ ₹ 2.60 ಕೋಟಿ ವ್ಯಯಿಸಿರುವುದಾಗಿ ಲೆಕ್ಕ ತೋರಿಸಲಾಗಿದೆ. ಈ ಹಣದಲ್ಲಿ ಅಕ್ರಮ ನಡೆದಿರುವ ಅನುಮಾನವಿದೆ’ ಎಂದು ಜನರು ಆರೋಪಿಸುತ್ತಿದ್ದಾರೆ. 2017–18ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಗೆ ₹50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಅದರಲ್ಲಿ ₹5 ಕೋಟಿಯನ್ನು ಗಾಜಿನ ಮನೆ ಮತ್ತು ಇತರ ಕಾಮಗಾರಿಗಳಿಗೆ ಮೀಸಲಿಡಲಾಗಿತ್ತು. ಜಿಲ್ಲಾಡಳಿತ ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಟೆಂಡರ್ ಕರೆದು ಕಂಪನಿಯೊಂದಕ್ಕೆ ಕಾಮಗಾರಿಯ ಹೊಣೆ ನೀಡಿ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಇದರ ನಡುವೆಯೇ ಕಾಮಗಾರಿ ಆರಂಭವಾಗಿತ್ತು. ಆದರೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಗಾಜಿನ ಮನೆ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿತ್ತು. ಅಂದಿನಿಂದ ಕೆಲಸ ಅರ್ಧಕ್ಕೆ ನಿಂತಿದ್ದು ಕೆರೆಯಲ್ಲಿಯೇ ಅವಶೇಷಗಳು ಉಳಿದುಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.