ಹಾವೇರಿ: ಕುರಿಗಳನ್ನು ಕಾಯುತ್ತ ಊರೂರು ಅಲೆಯುವ ಸಂಚಾರಿ ಕುರಿಗಾರರು ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಕುರಿಗಾರರು ಮುಂದೆ ಸಾಗಬೇಕಾದ ದಿಕ್ಕು ತೋರಿಸುವ ಹಬ್ಬವೇ ದೀಪಾವಳಿ ಎಂಬುದು ಪ್ರಸಿದ್ಧಿ ಪಡೆದಿದೆ.

ಹಾವೇರಿ ಜಿಲ್ಲೆಯಲ್ಲಿಯೂ ಕುರಿಗಾರರ ಸಂಖ್ಯೆ ಹೆಚ್ಚಿದ್ದು, ಹಲವು ಗ್ರಾಮಗಳಲ್ಲಿ ಕುರಿಗಾರರ ಕುಟುಂಬಗಳಿವೆ. ಇದರ ಜೊತೆಯಲ್ಲಿ ಅಕ್ಕ–ಪಕ್ಕದ ಜಿಲ್ಲೆ ಹಾಗೂ ಹೊರ ರಾಜ್ಯಗಳ ಕುರಿಗಾರರು ಸಹ ಮೇವು ಅರಸಿ ಹಾವೇರಿ ಜಿಲ್ಲೆಗೆ ಲಗ್ಗೆ ಇಡುತ್ತಾರೆ. ಇಂಥ ಕುರಿಗಾರರೆಲ್ಲರೂ ತಾವು ನೆಲೆಸುವ ಜಮೀನಿನಲ್ಲಿಯೇ ಕುರಿಗಳ ಹಿಂಡಿನ ಜೊತೆಯಲ್ಲಿ ದೀಪಾವಳಿ ಆಚರಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.

ಅಲೆಮಾರಿಗಳಾಗಿ ಅಲೆಯುತ್ತ ಕುರಿಗಳನ್ನು ಮೇಯಿಸುವ ಕುರಿಗಾರರು ದೀಪಾವಳಿ ಹಬ್ಬ ಬಂದರೆ ಸಂಭ್ರಮದಲ್ಲಿ ಮಿಂದೇಳುತ್ತಾರೆ. ಹೊಲ, ಗುಡ್ಡ, ಮೈದಾನ... ಹೀಗೆ ನಾನಾ ಸ್ಥಳಗಳಲ್ಲಿರುವ ಕುರಿಗಾರರು, ಅದೇ ಸ್ಥಳದಲ್ಲಿಯೇ ಕುಟುಂಬ ಸಮೇತರಾಗಿ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ.

ಬೆಳೆಗಳ ಮಧ್ಯೆ ಜೋಳದ ದಂಟಿನ ಚಪ್ಪರ ಹಾಕುವ ಕುರಿಗಾರರು, ಕಂಬಳಿ ಹಂದರ ನಿರ್ಮಿಸಿ ಸಗಣಿ ಹಾಗೂ ಕುರಿಗಳ ಹಿಕ್ಕೆಯನ್ನೇ ದೇವರೆಂದು ಪೂಜೆ ಸಲ್ಲಿಸುತ್ತಾರೆ. ಸಗಣಿ ಹಾಗೂ ಕುರಿ ಹಿಕ್ಕೆಗಳ ಪೂಜೆಯೇ ಲಕ್ಷ್ಮಿ ಪೂಜೆಯೆಂದು ಕುರಿಗಾರರು ಭಕ್ತಿಯಿಂದ ಆಚರಿಸುತ್ತಾರೆ. ಸಂಚಾರಿ ಕುರಿಗಾರರು, ಎಂದಿಗೂ ಆಡಂಬರಕ್ಕೆ ಮಾರು ಹೋದವರಲ್ಲ. ಆಕಾಶಬುಟ್ಟಿ, ಪಟಾಕಿ ಹಾಗೂ ಅಲಂಕಾರಿಕ ವಸ್ತುಗಳಿಗೆ ಇವರ ಬಳಿ ಜಾಗವಿಲ್ಲ. ಇರುವ ಜಾಗದಲ್ಲಿಯೇ ಮನದಾಳದಿಂದ ದೇವರನ್ನು ಆರಾಧಿಸುವ ಕುರಿಗಾರರು, ಆಡಂಬರವಿಲ್ಲದೆ ದೀಪಾವಳಿ ಆಚರಿಸುತ್ತಾರೆ.

ಕುರಿಗಾರರು ಹಬ್ಬದ ದಿನದಂದು ಬೆಳಿಗ್ಗೆ ಜೋಳದ ದಂಟು, ಕಬ್ಬು, ಬಾಳೆ ಕಂಬ, ತೆಂಗಿನ ಗರಿಗಳಿಂದ ಮಂಟಪ ನಿರ್ಮಿಸುತ್ತಾರೆ. ಇದಕ್ಕೆ ಕಂಬಳಿ ಹೊದೆಸಿ ಚೆಂಡು ಹೂವಿನಿಂದ ಅಲಂಕರಿಸಲಾಗುತ್ತದೆ. ಮಂಟಪದ ಮಧ್ಯೆ ಶಂಖ, ಬೆನಕ, ಎಕ್ಕಿಗಿಡದ ಬೇರು, ಕಾಯಿ, ಸಗಣಿಯಿಂದ ನಿರ್ಮಿಸಿದ ಪಾಂಡವರ ಪ್ರತಿಕೃತಿಗಳನ್ನು ಇಟ್ಟು ಅರ್ಥಪೂರ್ಣವಾಗಿ ಜೋಡಿಸುತ್ತಾರೆ. ನಂತರ, ಅಲ್ಲಿಯೇ ಪೂಜೆ ಸಲ್ಲಿಸುತ್ತಾರೆ.

ಪೂಜೆ ಆಗುತ್ತಿದ್ದಂತೆ ಮಂಟಪದ ಮುಂದೆ ಹಾಲು ಉಕ್ಕಿಸುವ ಪದ್ಧತಿ ನಡೆಯುತ್ತದೆ. ಹಾಲು ಯಾವ ದಿಕ್ಕಿನಲ್ಲಿ ಉಕ್ಕಿ ಬೀಳುತ್ತದೆಯೋ ಅದೇ ದಿಕ್ಕು, ಸಂಚಾರಿ ಕುರಿಗಾರರ ಮುಂದಿನ ಮಾರ್ಗವಾಗಿರುತ್ತದೆ. ನಾಲ್ಕು ಬೆರಣಿಗಳ ಕೆಂಡದ ಮೇಲೆ ಹಾಲಿನ ಪಾತ್ರೆ ಇಟ್ಟಾಗ ಹಾಲು ಯಾವ ದಿಕ್ಕಿನಲ್ಲಿ ಉಕ್ಕಿ ಚೆಲ್ಲುವುದೋ ಅದೇ ದಿಕ್ಕಿನತ್ತ ಮುಂದೆ ಇವರ ಪಯಣ ಸಾಗುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಎಂದು ಕುರಿಗಾರರು ಹೇಳುತ್ತಾರೆ.

ಇದಾದ ಕೂಡಲೇ ಕುರಿಗಾರರ ಮುಖ್ಯಸ್ಥರು, ಟಗರು ಹಾಗೂ ನಾಲ್ಕು ಕುರಿಗಳೊಂದಿಗೆ ಪೂಜೆ ಸ್ಥಳದಲ್ಲಿ ಐದು ಪ್ರದಕ್ಷಿಣೆ ಹಾಕುತ್ತಾರೆ. ಈ ಕುರಿಗಳಿಗೆ ಮನೆಯ ಹೆಣ್ಣುಮಕ್ಕಳು ಆರತಿ ಬೆಳಗುತ್ತಾರೆ. ಕುರಿ ಹಿಡಿದುಕೊಂಡ ಪುರುಷರಿಗೂ ಆರತಿ ಬೆಳಗಲಾಗುತ್ತದೆ. ಎಳ್ಳಿನ ಹೋಳಿಗೆ ನೈವೇದ್ಯವೂ ನಡೆಯುತ್ತದೆ. ನಂತರ ಕೈಯಲ್ಲಿ ಒಂದು ಪುಟ್ಟ ಕುರಿಮರಿ, ಚೆಂಡು ಹೂವು ಕಟ್ಟಿದ ಕೋಲು ಹಿಡಿದುಕೊಂಡು ಅಣತಿ ದೂರದಲ್ಲಿ ಹಾಕಲಾಗಿದ್ದ ಅವರೆ, ಗುರೆಳ್ಳಿನ ತಪ್ಪಲು ಹಾಗೂ ಜೋಳದ ದಂಟಿನ ಲಕ್ಷ್ಮಣ ರೇಖೆ ಮುಖ್ಯಸ್ಥ ದಾಟುತ್ತಾನೆ. ಐದು ಕುರಿಗಳು ಅವನನ್ನು ಹಿಂಬಾಲಿಸುತ್ತವೆ. ಇದೆಲ್ಲ ಮುಗಿದು ಹೋಳಿಗೆ ಊಟ ಸವಿಯುವುದರ ಜತೆಗೆ ಹಬ್ಬ ಆಚರಿಸುತ್ತೇವೆ ಎಂದು ಕುರಿಗಾರರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.