ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | 'ಮಳೆಯ ಅವಘಡ ನಿಯಂತ್ರಿಸಲು ಮುಂದಾಗಿ'

ಮುಂಗಾರು ವಿಪತ್ತು ನಿರ್ವಹಣೆ: ಕೆರೆ ತುಂಬಿಸಲು ತಯಾರಿಸಿ ನಡೆಸಿ– ಜಿಲ್ಲಾಧಿಕಾರಿ
Published 13 ಮೇ 2024, 16:12 IST
Last Updated 13 ಮೇ 2024, 16:12 IST
ಅಕ್ಷರ ಗಾತ್ರ

ಹಾವೇರಿ: ‘ಗುಡುಗು-ಸಿಡಿಲು ಹಾಗೂ ಅಕಾಲಿಕ ಮಳೆಯ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತಗಳು ಮುನ್ನೆಚ್ಚರಿಕೆ ವಹಿಸಬೇಕು. ಸಿಡಿಲಿನ ಪರಿಣಾಮಗಳ ಕುರಿತಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ’ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮುಂಗಾರು ಮಳೆ-ಗಾಳಿ ಹಾಗೂ ಗುಡುಗು-ಸಿಡಿಲಿನ ಅವಘಡಗಳ ಮುನ್ನಚ್ಚರಿಕೆ ಸಿದ್ಧತೆಗಳು ಹಾಗೂ ಬೇಸಿಗೆ ಕುಡಿಯುವ ನೀರಿನ ಸ್ಥಿಗತಿಗಳ ಕುರಿತಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ತಾಲ್ಲೂಕುವಾರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮುಂಗಾರು ಮಳೆಯ ವಿಪತ್ತುಗಳ ನಿರ್ವಹಣೆಗೆ ತಾಲ್ಲೂಕುವಾರು ಸಿದ್ಧತೆಗಳ ಕುರಿತಂತೆ ಚರ್ಚಿಸಿ ಲಿಖಿತವಾಗಿ ಮಾಹಿತಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಈ ವರ್ಷ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆ ಬಿಳುವುದಾಗಿ ಹವಾಮಾನ ಇಲಾಖೆ ಅಂದಾಜಿಸಿದೆ. ಮುಂಗಾರು ಮಳೆಯ ಪ್ರಾಕೃತಿಕ ಅವಘಡಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತಾಲ್ಲೂಕುವಾರು ವಿಪತ್ತು ಪರಿಹಾರ ಕ್ರಮಗಳ ಯೋಜಿತ ಸಿದ್ಧತೆಯನು ಮಾಡಿಕೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿನಿಂದಲೇ ರಾಜಕಾಲುವೆಗಳು ಒಳಗೊಂಡಂತೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು ಎಂದರು. 

ಕೆರೆ ತುಂಬಿಸಿ: ಮುಂಬರುವ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಈ ಮಳೆಗಾಲದಲ್ಲಿ ಯೋಜಿತ ರೀತಿಯಲ್ಲಿ ಕಾಲ ಮಿತಿಯೊಳಗೆ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬೇಕು. ಈ ನಿಟ್ಟಿನಲ್ಲಿ ತುಂಗಾ ಮೇಲ್ದಂಡೆ ಯೋಜನೆ ಅಭಿಯಂತರರು ಸೂಕ್ತ ಯೋಜನೆಯನ್ನು ಹಾಕಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇದೇ ಗುರುವಾರ ಪ್ರತ್ಯೇಕ ಸಭೆ ನಡೆಸಲಾಗುವುದು. ಅಗತ್ಯ ಮಾಹಿತಿಯೊಂದಿಗೆ ಹಾಜರಾಗಲು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಹೂಳು ತೆಗೆಸಲು ಸೂಚನೆ: ಹಾವೇರಿ ನಗರಕ್ಕೆ ಹೆಗ್ಗೇರಿ ಕೆರೆಯಿಂದ ಬಳಕೆಗಾಗಿ ಪೂರೈಸುತ್ತಿರುವ ನೀರನ್ನು ಒಪ್ಪಂದ ಪ್ರಕಾರ ಪ್ರತಿ ದಿನ 8 ಎಂ.ಎಲ್.ಡಿ ಪಂಪ್‍ ಮಾಡಿ ಪೂರೈಸಬೇಕು. ಎರಡು ದಿನದೊಳಗಾಗಿ ಈ ನಿಟ್ಟಿನಲ್ಲಿ ಗುತ್ತಿಗೆದಾರನಿಗೆ ಸೂಕ್ತ ನಿರ್ದೇಶನ ನೀಡಿ ಪಂಪ್‍ಹೌಸ್‍ಗೆ ಸರಾಗವಾಗಿ ನೀರು ಹರಿದುಬರುವ ನಿಟ್ಟಿನಲ್ಲಿ ಹೂಳು ತೆಗೆಸಲು ಪೌರಾಯುಕ್ತರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯ ನಗರ ನೀರು ಪೂರೈಕೆ ವ್ಯವಸ್ಥೆ ಕುರಿತಂತೆ ಬುಧವಾರ ಪ್ರತ್ಯೇಕ ಸಭೆ ಕರೆಯಲಾಗುವುದು. ಎಲ್ಲ ಮಾಹಿತಿಗಳೊಂದಿಗೆ ಹಾಜರಾಗಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ, ಉಪವಿಭಾಗಾಧಿಕಾರಿ ಚೆನ್ನಪ್ಪ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಸಂತಿ, ತಾಲ್ಲೂಕಿನ ಎಲ್ಲ ತಹಶೀಲ್ದಾರ್‌ಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಕುಡಿಯುವ ನೀರು ಸರಬರಾಜು ಇಲಾಖೆ ಎಂಜಿನಿಯರ್‌, ಸಣ್ಣ ನೀರಾವರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಎಂಜಿನಿಯರ್‌ಗಳು ಇದ್ದರು.

Cut-off box - ‘ಕಾಳಜಿ ಕೇಂದ್ರ ಗುರುತಿಸಿ’ ‘ಕಾಳಜಿ ಕೇಂದ್ರಗಳನ್ನು ಗುರುತಿಸಿಕೊಳ್ಳಬೇಕು. ಪ್ರವಾಹದಂತಹ ಸಂದರ್ಭದಲ್ಲಿ ಜನರ ರಕ್ಷಣೆಗೆ ಅಗತ್ಯವಿರುವ ವಿಪತ್ತು ನಿರ್ವಹಣಾ ಉಪಕರಣಗಳು ಈಜುಗಾರರು ಬೋಟ್ ವ್ಯವಸ್ಥೆ ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ದಳ ಸೇರಿದಂತೆ ರಕ್ಷಣಾ ಪಡೆಯ ನೆರವಿಗೆ ಸಂಪರ್ಕ ವ್ಯವಸ್ಥೆ ಒಳಗೊಂಡಂತೆ ಎಲ್ಲ ಸಿದ್ಧತೆಗಳ ಕುರಿತಂತೆ ಚರ್ಚಿಸಿ ಅಧಿಕಾರಿಗಳ ತಂಡಗಳನ್ನು ರಚಿಸಿ ಪೂರ್ವ ತಯಾರಿಯಲ್ಲಿರಬೇಕು’ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

Cut-off box - ‘ಕೆರೆಗಳ ಮೇಲೆ ನಿಗಾವಹಿಸಿ’ ‘ಮಳೆ ನೀರಿನಿಂದಾಗಿ ಕಳೆದ ಐದು ವರ್ಷಗಳಲ್ಲಿ ಕೆರೆಯ ದಡಗಳು ಒಡೆದು ಹೋಗುವುದು ಕೋಡಿಯ ಮೂಲಕ ರಸ್ತೆಗೆ ನೀರು ಹರಿದು ಸಂಪರ್ಕ ಕಡಿತಗೊಂಡಿರುವ ಕುರಿತಾದ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಅಂತಹ ಪ್ರದೇಶಗಳ ನಿಗಾವಹಿಸಿ. ಕೆರೆ ತುಂಬಿ ರಸ್ತೆಗೆ ನೀರು ಹರಿಯುವ ಸನ್ನಿವೇಶ ಸೃಷ್ಟಿಯಾದರೆ ಯಾವುದೇ ಅವಘಡಗಳಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚಾರ ಸುಗಮಗೊಳಿಸಲು ಸಮನ್ವಯದಿಂದ ಕಾರ್ಯನಿರ್ವಹಿಸಿ’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಹೆದ್ದಾರಿ ಹಾಗೂ ರೈಲ್ವೆ ಕೆಳಸೇತುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಗಳು ರೈಲ್ವೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT