ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಜಿಲ್ಲೆಯಲ್ಲಿ 1,450 ಶಿಕ್ಷಕ ಹುದ್ದೆಗಳು ಖಾಲಿ

ಪ್ರಾಥಮಿಕ – ಪ್ರೌಢಶಾಲೆಗಳಲ್ಲಿ 6,231 ಶಿಕ್ಷಕರು ಕಾರ್ಯ | ಅತಿಥಿ ಶಿಕ್ಷಕ ನೇಮಕಕ್ಕೆ ಪ್ರಕ್ರಿಯೆ
Published 6 ಜುಲೈ 2024, 5:45 IST
Last Updated 6 ಜುಲೈ 2024, 5:45 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 1,450 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಮಕ್ಕಳ ಕಲಿಕೆಗೆ ಅಡ್ಡಿಯಾಗಬಾರದೆಂದು ಹೊಸದಾಗಿ 1,205 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಮಂಜೂರಾತಿ ನೀಡಲಾಗಿದೆ.

ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಲಭ್ಯವಿರುವ ಶಿಕ್ಷಕರೇ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಇದು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿರುವುದಾಗಿ ಪೋಷಕರು ದೂರುತ್ತಿದ್ದಾರೆ.

ಗ್ರಾಮೀಣ ಪ್ರದೇಶ ಹೆಚ್ಚಿರುವ ಜಿಲ್ಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ, ಪ್ರತಿ ವರ್ಷವೂ ಶಿಕ್ಷಕರ ಕೊರತೆ ಕಾಡುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 6,330 ಶಿಕ್ಷಕ ಹುದ್ದೆಗಳು ಮಂಜೂರಾಗಿದ್ದು, 5,155 ಶಿಕ್ಷಕರು ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. 1,175 ಶಿಕ್ಷಕ ಹುದ್ದೆಗಳು ಖಾಲಿ ಇರುವುದಾಗಿ ಶಿಕ್ಷಣ ಇಲಾಖೆಯ ದಾಖಲೆಗಳಿಂದ ಗೊತ್ತಾಗಿದೆ.

ಪ್ರೌಢಶಾಲೆಗಳಲ್ಲಿಯೂ 1,351 ಹುದ್ದೆಗಳು ಮಂಜೂರಾಗಿದ್ದು, ಸದ್ಯ 1,076 ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. 275 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಇದು ಮಕ್ಕಳ ಕಲಿಕೆಗೆ ತೊಂದರೆ ಉಂಟು ಮಾಡುತ್ತಿರುವುದಾಗಿ ಪೋಷಕರು ಆರೋಪಿಸುತ್ತಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಶಿಗ್ಗಾವಿ ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿ ಇವೆ.

‘ಪ್ರಾಥಮಿಕ ಶಾಲೆಗಳಲ್ಲಿ 964 ಹಾಗೂ ಪ್ರೌಢಶಾಲೆಗಳಲ್ಲಿ 241 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಮಂಜೂರಾತಿ ದೊರೆತಿದೆ. ಆದರೆ, ಹಲವು ಕಡೆಗಳಲ್ಲಿ ಇದುವರೆಗೂ ಶಿಕ್ಷಕರ ನೇಮಕಾತಿ ಮಾಡಿಕೊಂಡಿಲ್ಲ. ಇದರಿಂದಾಗಿ, ಲಭ್ಯವಿರುವ ಶಿಕ್ಷಕರು ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಪಾಠ ಕೇಳಲು ಆಗುತ್ತಿಲ್ಲ’ ಎಂದು ಪೋಷಕರು ದೂರಿದರು.

ಶೇ 95ರಷ್ಟು ಅತಿಥಿ ಶಿಕ್ಷಕರ ನೇಮಕಾತಿ:

‘ಮಕ್ಕಳ ಸಂಖ್ಯೆಗೆ ತಕ್ಕಂತೆ ಶಿಕ್ಷಕರು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಪ‍್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 1,450 ಶಿಕ್ಷಕ ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಬಾರದೆಂದು, ಖಾಲಿ ಹುದ್ದೆಗಳಲ್ಲಿಯೇ ಕೆಲಸ ಮಾಡಲು 1,205 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಶೇ 95ರಷ್ಟು ಅತಿಥಿ ಶಿಕ್ಷಕರ ನೇಮಕಾತಿ ಆಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುರೇಶ ಹುಗ್ಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ 1,175 ಹುದ್ದೆ ಖಾಲಿ ಪ್ರೌಢಶಾಲೆಗಳಲ್ಲಿ 275 ಹುದ್ದೆ ಖಾಲಿ ಅತಿಥಿ ಶಿಕ್ಷಕರ ನೇಮಕ ಶೇ 95ರಷ್ಟು ಪೂರ್ಣ

ವಿದ್ಯಾರ್ಹತೆ ಹಾಗೂ ಇತರೆ ಮಾನದಂಡಗಳನ್ನು ಆಧರಿಸಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಾಯಂ ಹಾಗೂ ಅತಿಥಿ ಶಿಕ್ಷಕರಿಂದ ಸರ್ಕಾರಿ ಶಾಲೆ ಮಕ್ಕಳ ಕಲಿಕೆ ಮಟ್ಟ ಸುಧಾರಿಸಲಿದೆ. ಕಲಿಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು
ಸುರೇಶ ಹುಗ್ಗಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ

ಸಮವಸ್ತ್ರ ಪಠ್ಯ ಪುಸ್ತಕ ವಿತರಣೆ ಪೂರ್ಣ ಜಿಲ್ಲೆಯ ಮಕ್ಕಳ ಸಂಖ್ಯೆಗೆ ತಕ್ಕಂತೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಣೆ ಬಹುಪಾಲು ಪೂರ್ಣಗೊಂಡಿದೆ. ‘2023ರ ಸೆಪ್ಟೆಂಬರ್‌ನಲ್ಲಿದ್ದ ಅಂಕಿ–ಅಂಶ ಆಧರಿಸಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ 2024–25ನೇ ಸಾಲಿನಲ್ಲಿ 149732 ಸಮವಸ್ತ್ರಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಸಂಪೂರ್ಣ ಪ್ರಮಾಣದಲ್ಲಿ ಸಮವಸ್ತ್ರಗಳು ಪೂರೈಕೆಯಾಗಿವೆ. ಈ ಪೈಕಿ 148682 ಸಮವಸ್ತ್ರಗಳನ್ನು ಹಂಚಿಕೆ ಮಾಡಲಾಗಿದೆ. 1050 ಸಮವಸ್ತ್ರಗಳು ಮಾತ್ರ ಉಳಿದಿವೆ’ ಎಂದು ಸುರೇಶ ಹುಗ್ಗಿ ಹೇಳಿದರು. ‘ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತವಾಗಿ ವಿತರಿಸಲು 29.74 ಲಕ್ಷ ಹಾಗೂ ಖಾಸಗಿ ಶಾಲೆಗಳಿಗೆ ಮಾರಲು 7.08 ಲಕ್ಷ ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. 21.37 ಲಕ್ಷ ಹಾಗೂ 6.67 ಲಕ್ಷ ಪಠ್ಯಕ್ರಮ ಪೂರೈಕೆಯಾಗಿದೆ. ಈ ಪೈಕಿ ಶೇ 100ರಷ್ಟು ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಪೂರೈಕೆ ಬಾಕಿ ಇರುವ ಶೇ 9ರಷ್ಟು ಪಠ್ಯ ಪುಸ್ತಕಗಳು ಬರಬೇಕಿದೆ. ಬಂದ ನಂತರ ಅವುಗಳನ್ನೂ ಸಮರ್ಪಕವಾಗಿ ವಿತರಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಲ್ಲೂಕುವಾರು ಶಿಕ್ಷಕ ಹುದ್ದೆಗಳ ವಿವರ ತಾಲ್ಲೂಕು;ಪ್ರಾಥಮಿಕ ಶಾಲೆಗಳ ಕಾರ್ಯನಿರತ ಶಿಕ್ಷಕರು; ಖಾಲಿ ಹುದ್ದೆಗಳು; ಪ್ರೌಢಶಾಲೆಗಳ ಕಾರ್ಯನಿರತ ಶಿಕ್ಷಕರು; ಖಾಲಿ ಹುದ್ದೆಗಳು ಬ್ಯಾಡಗಿ; 487; 108; 106; 27 ಹಾನಗಲ್; 884; 328; 209; 50 ‌ಹಾವೇರಿ; 884; 122; 131; 29 ಹಿರೇಕೆರೂರು; 758; 137; 151; 12 ರಾಣೆಬೆನ್ನೂರು; 913; 119; 154; 25 ಸವಣೂರು; 530; 196; 160; 77 ಶಿಗ್ಗಾವಿ; 699; 165; 165; 55

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT