ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನಿಗಳ ನೆರವು; ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್‌ ಭಾಗ್ಯ

ನಾಗನೂರು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ
Last Updated 29 ಫೆಬ್ರುವರಿ 2020, 10:41 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ನಾಗನೂರು ಗ್ರಾಮದ ಸರ್ಕಾರಿ ಉನ್ನತೀಕರಿಸಿದಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಸ್ಮಾರ್ಟ್‌ಕ್ಲಾಸ್‌ ಭಾಗ್ಯ ಒದಗಿದೆ.

ಶಾಲೆಗೆ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿದೆ. ಈ ಬಾರಿ ಶಾಲೆಯಲ್ಲಿ 211 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 8 ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯವಾಗಿ ಈ ಶಾಲೆಯು ಕಲಿಕಾ ಗುಣಮಟ್ಟಕ್ಕೂ ಹೆಸರು ವಾಸಿಯಾಗಿದೆ.

‘ಇಲ್ಲಿಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಯಲ್ಲಿಯೂ ಗಮನ ಸೆಳೆದಿದ್ದಾರೆ. 2019ರ ಸಾಲಿನಲ್ಲಿ ಜಿಲ್ಲಾ ಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ನಲ್ಲಿ ಭಾಗವಹಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೆ, ಇಬ್ಬರು ವಿದ್ಯಾರ್ಥಿಗಳು ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದಾರೆ’ ಎಂದು ಮುಖ್ಯ ಶಿಕ್ಷಕ ಆರ್‌.ಎನ್‌.ಕರ್ಜಗಿ ಹೇಳಿದರು.

ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸುವಂತೆ ಮನವಿ ಮಾಡಲು ಹಿಂದಿನ ವರ್ಷದ ಡಿಸೆಂಬರ್‌ ತಿಂಗಳಲ್ಲಿ ತಾಯಂದಿರ ಸಭೆ ಕರೆಯಲಾಗಿತ್ತು. ಮಕ್ಕಳಿಗಾಗಿ ಸ್ಮಾರ್ಟ್‌ಕ್ಲಾಸ್‌ ಅಳವಡಿಸುವ ಚಿಂತನೆಯನ್ನು ತಾಯಂದಿರ ಮುಂದೆ ಇಡಲಾಯಿತು. ಈ ಸಭೆಯಲ್ಲಿ ತಾಯಂದಿರೆ ಹಣವನ್ನು ಕೂಡಿಸಿ ಶಾಲೆಗೆ ಸ್ಮಾರ್ಟ್‌ಕ್ಲಾಸ್‌ ನೀಡಲು ನಿರ್ಣಯವನ್ನು ತೆಗೆದುಕೊಂಡರು ಎಂದು ಅವರು ವಿವರಿಸಿದರು.

‘ತಾಯಂದಿರು ಸೇರಿಸಿದ ಹಣ, ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಹಾಗೂ ಹಾಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಸಹ ₹2.5 ಲಕ್ಷ ಹಣದಲ್ಲಿ ಸ್ಮಾರ್ಟ್‌ಕ್ಲಾಸ್‌ ಆರಂಭಿಸಲು ನೆರವಾಗಿದ್ದಾರೆ’ ಎಂದು ಶಿಕ್ಷಕರಾದ ಆರ್‌.ವಿ.ಮಂಟೂರ ಹಾಗೂ ಬಿ.ಆರ್‌.ಸುಳ್ಳಳ್ಳಿ ಹೇಳಿದರು.

ನೆರೆ ಸಂದರ್ಭದಲ್ಲಿದಾನಿಗಳ ನೆರವು

ನೆರೆ ಬಂದಾಗ ವಿದ್ಯಾರ್ಥಿಗಳ ನೋಟ್‌ ಪುಸ್ತಕಗಳೆಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದ್ದವು. ವಿದ್ಯಾರ್ಥಿಗಳ ಕಲಿಕೆ ನಿಲ್ಲಬಾರದು ಎಂಬ ಉದ್ದೇಶದಿಂದ ದಾವಣಗೆರೆಯ ವನಿತಾ ಸೇವಾ ಸಮಾಜದವರು ₹1.20ಲಕ್ಷದಲ್ಲಿ ನೋಟ್‌ಪುಸ್ತಕ, ಬ್ಯಾಗ್‌, ಕಂಪಾಸುಗಳನ್ನು ನೀಡಿದರು. ಅಲ್ಲದೆ, ರಾಣೆಬೆನ್ನೂರಿನ ಕೆ.ಎಫ್‌.ಪಾಟೀಲ ಟ್ರಸ್ಟ್‌ನವರು ₹94 ಸಾವಿರ ವೆಚ್ಚದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡಿದ್ದಾರೆ ಎಂದು ಶಿಕ್ಷಕರಾದ ಬಿ.ಎಂ.ಬಾರ್ಕಿ, ಎನ್‌.ಜೆ.ಸಂಗನಗೌಡ್ರ ಹೇಳಿದರು.

ಕೂಡಲದ ಗುರುನಂಜೇಶ್ವರ ಸ್ವಾಮೀಜಿ ಈ ಗ್ರಾಮದ ಶಾಲೆಯಲ್ಲಿವ್ಯಾಸಂಗ ಮಾಡಿದ್ದರು. ಈ ಶಾಲೆಯು 99 ವರ್ಷ ಪೂರೈಸಿದ್ದು, ಮುಂದಿನ ವರ್ಷ ಶತಮಾನೋತ್ಸವ ಆಚರಣೆ ಮಾಡಲಿದೆ. ಅಲ್ಲದೆ, ಡಿಜಿಟಲ್‌ ಗ್ರಂಥಾಲಯ ನಿರ್ಮಾಣ, ಕೈತೋಟ ನಿರ್ಮಾಣ ಮಾಡುವ ಯೋಜನೆ ಇದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಈ ಸ್ಮಾರ್ಟ್‌ಕ್ಲಾಸ್‌ಗೆ ಗುರುನಂಜೇಶ್ವರ ಎಂದು ಹೆಸರಿಡಲಾಗಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿಂಗರಾಜ ಓಂಕಾರಣ್ಣನವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT