ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಬೆದರಿಕೆ: ಎರಡು ಪ್ರಕರಣ ಪತ್ತೆ

Published 8 ಆಗಸ್ಟ್ 2024, 15:54 IST
Last Updated 8 ಆಗಸ್ಟ್ 2024, 15:54 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹಾವೇರಿ: ‘ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಸರ್ಕಾರಿ ನೌಕರರು ಹಾಗೂ ಇತರರನ್ನು ಬೆದರಿಸುತ್ತಿರುವ ಕುರಿತು ಮಾಹಿತಿ ಇದೆ. ಈ ಬಗ್ಗೆ ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ’ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾನವ ಹಕ್ಕುಗಳು ಹೆಸರಿನೊಂದಿಗೆ ಬೇರೆ ಹೆಸರುಗಳನ್ನು ಸೇರಿಸಿ ಸಂಘಟನೆ ಹಾಗೂ ಸಂಸ್ಥೆಗಳನ್ನು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ವಿಸಿಟಿಂಗ್ ಕಾರ್ಡ್‌ಗಳನ್ನು ಮಾಡಿಸಿ, ಅದನ್ನೇ ಅಧಿಕಾರಿಗಳಿಗೆ ತೋರಿಸಿ ಪ್ರಭಾವ ಬೀರುತ್ತಿದ್ದಾರೆ’ ಎಂದು ಹೇಳಿದರು.

‘ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಯಾರಾದರೂ ಬೆದರಿಕೆಯೊಡ್ಡಿದರೆ, ದೂರು ನೀಡಬಹುದು. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕೆಲವರು ವಾಹನಗಳ ಮೇಲೆ ಮಾನವ ಹಕ್ಕುಗಳು ಫಲಕ ಹಾಕಿಕೊಂಡು ಸುತ್ತಾಡುತ್ತಿದ್ದಾರೆ. ಇಂಥವರ ಫೋಟೊಗಳನ್ನು ಸಾರ್ವಜನಿಕರು ಆಯೋಗಕ್ಕೆ ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಜಿಲ್ಲಾವಾರು ಕಾರ್ಯಕಲಾಪ: ‘ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಆಯೋಗದ ಕಾರ್ಯಕಲಾಪವನ್ನು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದರಿಂದಾಗಿ ದೂರುದಾರರು, ಬೆಂಗಳೂರಿಗೆ ಬರುವುದು ತಪ್ಪಲಿದೆ. ಈಗಾಗಲೇ 12 ಜಿಲ್ಲೆಗಳಲ್ಲಿ ಕಾರ್ಯಕಲಾಪ ಮುಕ್ತಾಯಗೊಳಿಸಿ, 13ನೇ ಜಿಲ್ಲೆಯಾದ ಹಾವೇರಿಗೆ ಬಂದಿದ್ದೇವೆ. ಮುಂದಿನ ದಿನಗಳಲ್ಲೂ ಜಿಲ್ಲಾ ಪ್ರವಾಸ ಮುಂದುವರಿಯಲಿದೆ’ ಎಂದು ಶ್ಯಾಮ್ ಭಟ್ ಹೇಳಿದರು.

2,917 ದೂರು ಬಾಕಿ: ‘ಆಯೋಗಕ್ಕೆ ಸಲ್ಲಿಕೆಯಾದ ದೂರುಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗುತ್ತಿದೆ. ಸದ್ಯ 2,917 ಪ್ರಕರಣಗಳು ಮಾತ್ರ ಬಾಕಿ ಇದ್ದು, ಅವುಗಳ ವಿಚಾರಣೆ ತ್ವರಿತಗತಿಯಲ್ಲಿ ನಡೆಸಲಾಗುವುದು’ ಎಂದು ತಿಳಿಸಿದರು.

‘ಹಾವೇರಿ ಜಿಲ್ಲೆಯಿಂದ ಆಯೋಗಕ್ಕೆ 8 ದೂರುಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 7 ದೂರುಗಳನ್ನು ಗುರುವಾರ ಇತ್ಯರ್ಥಪಡಿಸಲಾಗಿದೆ. ಮಾಜಿ ಸೈನಿಕರ ಭೂಮಿ ಹಂಚಿಕೆ ಸಂಬಂಧ ಒಂದು ಪ್ರಕರಣ ಮಾತ್ರ ಬಾಕಿ ಉಳಿದಿದೆ’ ಎಂದು ತಿಳಿಸಿದರು.

ಆಯೋಗದ ಸದಸ್ಯರಾದ ಎಸ್‌.ಕೆ. ವಂಟಿಗೋಡಿ, ಕಾರ್ಯದರ್ಶಿ ಎ. ದಿನೇಶ್ ಸಂಪತ್‌ರಾಜ್, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿ.ಪಂ. ಸಿಇಒ ಅಕ್ಷಯ್ ಶ್ರೀಧರ್, ಜಿಲ್ಲಾ ಎಸ್‌ಪಿ ಅಂಶಿಕುಮಾರ್ ಇದ್ದರು.

ಹಾವೇರಿ ಜಿಲ್ಲಾ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಶ್ಯಾಮ್ ಭಟ್ ಅವರು ಬಂಧಿಗಳಿಗೆ ನೀಡುವ ಊಟ ಪರಿಶೀಲಿಸಿದರು
ಹಾವೇರಿ ಜಿಲ್ಲಾ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಶ್ಯಾಮ್ ಭಟ್ ಅವರು ಬಂಧಿಗಳಿಗೆ ನೀಡುವ ಊಟ ಪರಿಶೀಲಿಸಿದರು
ಹಾವೇರಿ ಕೇಂದ್ರ ಬಸ್ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಪ್ರಯಾಣಿಕರನ್ನು ಮಾತನಾಡಿಸಿದರು
ಹಾವೇರಿ ಕೇಂದ್ರ ಬಸ್ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಪ್ರಯಾಣಿಕರನ್ನು ಮಾತನಾಡಿಸಿದರು

Highlights - 2,917 ಪ್ರಕರಣ ಬಾಕಿ ಒಂದೇ ದಿನದಲ್ಲಿ ಜಿಲ್ಲೆಯ 7 ಪ್ರಕರಣ ಇತ್ಯರ್ಥ ಬೆದರಿಕೆ ಬಗ್ಗೆ ದೂರು ನೀಡಿದರೆ ಕ್ರಮ

ನಿಲ್ದಾಣ ಸ್ವಚ್ಛತೆಗೆ ನಿರ್ದೇಶನ: ಜೈಲೂಟ ಪರಿಶೀಲನೆ

ಹಾವೇರಿ ನಗರಕ್ಕೆ ಗುರುವಾರ ಬೆಳಿಗ್ಗೆ ಆಗಮಿಸಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಹಾಗೂ ಸದಸ್ಯರಾದ ಎಸ್‌.ಕೆ. ವಂಟಿಗೋಡಿ ಹಲವು ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾವೇರಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅಧ್ಯಕ್ಷ ಹಾಗೂ ಸದಸ್ಯ ನಿಲ್ದಾಣದಲ್ಲಿ ಸುತ್ತಾಡಿದರು. ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಲ್ದಾಣದಲ್ಲಿರುವ ಮಳಿಗೆಗಳನ್ನು ವೀಕ್ಷಿಸಿದರು. ಶುದ್ಧ ಕುಡಿಯುವ ನೀರಿನ ಘಟಕ ನಿಷ್ಕ್ರಿಯವಾಗಿರುವುದನ್ನು ಗಮನಿಸಿದರು. ಜೊತೆಗೆ ಪ್ರಯಾಣಿಕರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದರು. ‘ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಎರಡು ಗಂಟೆಗೊಮ್ಮೆ ಸ್ವಚ್ಛತೆ ಕೈಗೊಳ್ಳಲು ಹಾಗೂ ಶೌಚಾಲಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಎಸ್‌.ಕೆ. ವಂಟಿಗೋಡಿ ಅವರು ತಿಳಿಸಿದರು. ಬಡಾವಣೆಗೆ ಭೇಟಿ: ಹಾನಗಲ್ ರಸ್ತೆಯಲ್ಲಿರುವ ಶ್ರೀಕಂಠಪ್ಪ ಬಡಾವಣೆಗೆ ಭೇಟಿ ನೀಡಿದ್ದ ಅಧ್ಯಕ್ಷ ಹಾಗೂ ಸದಸ್ಯರು ನಿವಾಸಿಗಳ ಅಹವಾಲು ಆಲಿಸಿದರು. ‘ಬಡಾವಣೆ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಸೂಕ್ತ ಚರಂಡಿ ರಸ್ತೆಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿಗಳು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ‘ಬಡಾವಣೆ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೈಲಿನ ಊಟ ಪರಿಶೀಲನೆ: ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಅಧ್ಯಕ್ಷ ಸದಸ್ಯರು ಅಲ್ಲಿಯ ವ್ಯವಸ್ಥೆ ಬಗ್ಗೆ ತಿಳಿದುಕೊಂಡರು. ಕೈದಿಗಳಿಗೆ ನೀಡುವ ರೊಟ್ಟಿ ಊಟವನ್ನು ಪರಿಶೀಲಿಸಿದರು. ಬ್ಯಾರಕ್‌ಗಳಿಗೆ ಹೋಗಿ ಬಂಧಿಗಳ ಅಹವಾಲು ಆಲಿಸಿದರು. ನಂತರ ಸಾಂತ್ವನ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಗುರುವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥದ ಬಗ್ಗೆ ಚರ್ಚಿಸಿದರು.

Cut-off box - ‘ಹಾವೇರಿಗೆ ನಿರಾಶ್ರಿತರ ಕೇಂದ್ರ’ ‘ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ನಿರಾಶ್ರಿತರ ಕೇಂದ್ರವಿಲ್ಲ. ಆದರೆ ಜಿಲ್ಲೆಯಲ್ಲಿ ನಿರಾಶ್ರಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಗಮನಕ್ಕೆ ಬಂದಿದೆ. ಹಾವೇರಿಗೆ ನಿರಾಶ್ರಿತರ ಕೇಂದ್ರದ ಅಗತ್ಯವಿದ್ದು ಈ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಶ್ಯಾಮ್ ಭಟ್ ಹೇಳಿದರು. ‘ಕೇಂದ್ರಕ್ಕೆ 5 ಎಕರೆ ಜಾಗ ಮಂಜೂರು ಆಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇಂದ್ರ ನಿರ್ಮಾಣಕ್ಕೆ ₹ 10 ಕೋಟಿ ಅನುದಾನ ಇರುವುದಾಗಿ ತಿಳಿಸಿದ್ದಾರೆ. ತ್ವರಿತವಾಗಿ ಕೇಂದ್ರ ನಿರ್ಮಾಣ ಕೆಲಸ ಆರಂಭಿಸುವಂತೆ ಸೂಚಿಸಲಾಗಿದೆ’ ಎಂದರು.

ಆಯೋಗಕ್ಕೆ ಯಾವೆಲ್ಲ ದೂರು ನೀಡಬಹುದು ?

* ಜೈಲಿನಲ್ಲಿ ಕೈದಿ ಸಾವು ಪೊಲೀಸ್ ವಶದಲ್ಲಿ ಸಾವು ಪೊಲೀಸರಿಂದ ಚಿತ್ರ ಹಿಂಸೆ ಹಾಗೂ ಕಿರುಕುಳ

* ಪೊಲೀಸರಿಂದ ಅಕ್ರಮ ಬಂಧನ ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆ ಬೆದರಿಕೆ ಸರ್ಕಾರದ ಇತರ ಇಲಾಖೆಯಿಂದ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಇತರೆ

* ಶಿಕ್ಷಣ ಆರೋಗ್ಯ ಪಿಂಚಣಿ ನೀಡದೇ ಸಾವು ಬಾಲ್ಯ ವಿವಾಹ ಮಹಿಳೆ ಮೇಲೆ ದೌರ್ಜನ್ಯ ಜೀತದಾಳು ಬಾಲ ಕಾರ್ಮಿಕರು ಹಾಗೂ ಇತರೆ

* ವಾಸಸ್ಥಳದ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದರೆ ದೂರು ನೀಡಬಹುದು * ದೂರವಾಣಿ ಸಂಖ್ಯೆ 080–22342310 ಅಥವಾ registrar-kshrc@karnataka.Gov.in ಮೂಲಕ ದೂರು ಸಲ್ಲಿಸಬಹುದು. ಆನ್‌ಲೈನ್ (kshrc.karnataka.co.in) ಮೂಲಕವೂ ದೂರು ಸಲ್ಲಿಕೆಗೆ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT