ಶನಿವಾರ, ಮೇ 21, 2022
28 °C
ಬೆಳೆಗಾರರಿಗೆ ನಷ್ಟದ ಭೀತಿ

ರಾಣೆಬೆನ್ನೂರು: ಮಳೆ ತಂದ ಸಂಕಷ್ಟ, ಕೊಳೆಯುತ್ತಿದೆ ಗೂಡು ಹಾಕಿದ ಈರುಳ್ಳಿ

ಮುಕ್ತೇಶ ಪಿ. ಕೂರಗುಂದಮಠ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ಹೊಲದಲ್ಲಿರುವ ಈರುಳ್ಳಿ ಫಸಲು ಹಾಗೂ ಕಿತ್ತು ಗೂಡು ಹಾಕಿರುವ ಈರುಳ್ಳಿ ಸತತ ಮಳೆಯ ಪರಿಣಾಮ ಕೊಳೆಯುತ್ತಿದೆ.

ಕಳೆದ ವರ್ಷ ಅತಿವೃಷ್ಟಿಯಿಂದ ನೀರಿನ ರಭಸಕ್ಕೆ ಈರುಳ್ಳಿ ಕೊಚ್ಚಿಕೊಂಡು ಹೋಗಿತ್ತು. ಈ ವರ್ಷನೂ ಅದೇ ರಾಗ ಅದೇ ಹಾಡು. ಈರುಳ್ಳಿ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ವಾರಗಟ್ಟಲೇ ಮಳೆ ಬಂದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎನ್ನುತ್ತಾರೆ ರೈತರು.

ತಾಲ್ಲೂಕಿನ ಕೆರೆಮಲ್ಲಾಪುರ, ಹೊನ್ನತ್ತಿ, ಯತ್ತಿನಹಳ್ಳಿ, ಕುದರಿಹಾಳ, ಸೋಮಲಾಪುರ, ರಡ್ಡಿಯಲ್ಲಾಪುರ, ಮೈದೂರ, ಗುಡಗೂರ, ಗಂಗಾಪುರ, ಅಂತರವಳ್ಳಿ, ಯರೇಕುಪ್ಪಿ, ಬೆನಕನಕೊಂಡ, ಉಕ್ಕುಂದ ಸರ್ವಂದ, ಅಸುಂಡಿ, ಹುಲಿಹಳ್ಳಿ, ಕಾಕೋಳ, ಕುಪ್ಪೇಲೂರ, ಅಂತರವಳ್ಳಿ, ಆಲದಕಟ್ಟಿ, ಹಲಗೇರಿ, ಇಟಗಿ, ಚಳಗೇರಿ ಗ್ರಾಮ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಾರು ಹಂಗಾಮಿನಲ್ಲಿ ಅಂದಾಜು 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದಾರೆ.

ಕೆರಿಮಲ್ಲಾಪುರ ಗ್ರಾಮದ ರೈತ ಮಹಿಳೆ ಹಾಲಮ್ಮ ಶಿವಲಿಂಗಣ್ಣನವರ ಅವರು 2.26 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ಭಾರಿ ಮಳೆಯ ಪರಿಣಾಮ ಗಿಡ ಸರಿಯಾಗಿ ಹುಟ್ಟಲಿಲ್ಲ. ಬಂದಿರುವ ಫಸಲು ಸಹ ತೇವಾಂಶ ಹೆಚ್ಚಾಗಿ ಬೇರು ಸಮೇತ ಕೊಳೆತು ಹೋಗಿದೆ. ಬೀಜ, ಗೊಬ್ಬರ, ಟ್ರಾಕ್ಟರ್ ಬಾಡಿಗೆ, ಕಳೆ, ಕೂಲಿ ಸೇರಿ ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ. ಈ ರೀತಿ ನಷ್ಟವಾದರೆ ಜೀವನ ಮಾಡುವುದು ಹೆಂಗೆ ಎಂದು ಅವರು ಪ್ರಶ್ನಿಸುತ್ತಾರೆ.

ಬಿತ್ತನೆ ಕಾಲದಲ್ಲಿ ಸಕಾಲಕ್ಕೆ ಮುಂಗಾರು ಮಳೆ ಬಿದ್ದಿದ್ದರಿಂದ ಈರುಳ್ಳಿ ಚೆನ್ನಾಗಿ ಬಂದಿದೆ. ಅತಿಯಾದ ಮಳೆಗೆ ತೇವಾಂಶ ಹೆಚ್ಚಾಗಿ ಹುಲ್ಲುತುಂಬಿ ಕೊಂಡಿದ್ದರಿಂದ ಕಳೆನಾಶಕ ಔಷಧ, ರಸಗೊಬ್ಬರ ಹಾಕಿ ಈರುಳ್ಳಿ ಉಳಿಸಿಕೊಂಡಿದ್ದಾರೆ. ಈಗ ಗಡ್ಡಿಯಾಗಿದ್ದಕ್ಕೆ ಕಿತ್ತು ಗೂಡು ಹಾಕಿದರೆ ಮತ್ತೆ ಮಳೆ ಪ್ರಾರಂಭವಾಗಿ ಗೂಡಲ್ಲೆ ಕೊಳೆತು ಗಬ್ಬು ನಾರುತ್ತಿದೆ. ಇದೇ ರೀತಿ ಮುಂದುವರೆದರೆ ಬೆಳೆ ಸರ್ವನಾಶವಾಗಿ ರೈತರು ಜೀವನ ನಡೆಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಹಾಗೂ ಹಾರೊಗೊಪ್ಪ ಗ್ರಾಮದ ರೈತ ಬಸವರಾಜ ಚೌಡಣ್ಣನವರ.

8-10 ದಿನ ನಿರಂತರ ಮಳೆ ಸುರಿದು ಹಸಿ ಹೆಚ್ಚಾಗಿ ಫಸಲಿಗೆ ಬಂದ ಈರುಳ್ಳಿ ಕೊಳೆತ ಸ್ಥಿತಿಯಲ್ಲಿದೆ. ಕಿತ್ತು ಗೂಡು ಹಾಕಿದ ಈರುಳ್ಳಿ ಕೊಳೆತ ಶವದಂತೆ ಆಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಉತ್ತಮ ಬೆಲೆ ಸಿಗುತ್ತಿಲ್ಲ ಎನ್ನುತ್ತಾರೆ ತಾಲ್ಲೂಕಿನ ಬೆನಕನಕೊಂಡ ಗ್ರಾಮದ ಶಿವಕುಮಾರ ಬಲಿಗೇರ.

ಇಳುವರಿ ಚೆನ್ನಾಗಿ ಬಂದಿತ್ತು. ಮಾರುಕಟ್ಟೆಗೆ ಸಾಗಿಸುವಾಗ ಕ್ವಿಂಟಲ್‌ಗೆ ₹ 500 ರಿಂದ ₹ 700 ದರ ಇತ್ತು. ದರ ಕಡಿಮೆ ಎಂಬ ಕಾರಣಕ್ಕೆ  ಒಣಗಿಸಲು ಗೂಡು ಹಾಕಿದ್ದೆ, ಈಗ ಮಳೆ ಹೆಚ್ಚಾಗಿ ನೀರು ತುಂಬಿ ಹುಳ ಹತ್ತಿ ಕೊಳೆತಿದೆ ಎನ್ನುತ್ತಾರೆ ರೈತ ಹಲಗೇರಿಯ ಮಹೇಶಪ್ಪ ಕಡೂರ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು