ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಹಾವೇರಿ: ನೀರಿನ ಸಮಸ್ಯೆ ಆಲಿಸಲು ‘ಸಹಾಯವಾಣಿ’ ಆರಂಭ

Published 8 ಮಾರ್ಚ್ 2024, 5:50 IST
Last Updated 8 ಮಾರ್ಚ್ 2024, 5:50 IST
ಅಕ್ಷರ ಗಾತ್ರ

‌ಹಾವೇರಿ: ಜಿಲ್ಲೆಯ ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಆಲಿಸಿ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಆರಂಭಿಸಿರುವ ಸಹಾಯವಾಣಿ ಕೇಂದ್ರ ಸಂಖ್ಯೆ 9483737129 ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಬಿಡುಗಡೆಗೊಳಿಸಿದರು.

ತಾಲ್ಲೂಕಿನ ದೇವಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶನದಂತೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು 24 ಗಂಟೆ ಕಾರ್ಯನಿರ್ವಹಿಸಲು ಸಹಾಯವಾಣಿಯನ್ನು ಆರಂಭಿಸಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆಗಳು ಇದ್ದಲ್ಲಿ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ಎಂದು ಸಚಿವರು ತಿಳಿಸಿದರು.

‘ಪಂಚಮಿತ್ರ’ ಪೋರ್ಟಲ್ ಅನಾವರಣ:

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ 89 ಸೇವೆಗಳನ್ನು ಗ್ರಾಮೀಣ ಜನರು ಮೊಬೈಲ್‌ ಮೂಲಕ ಕುಳಿತಲ್ಲೇ ಪಡೆಯಲು ಹಾಗೂ ತಮ್ಮ ಕುಂದುಕೊರತೆಗಳನ್ನು ದಾಖಲಿಸಲು ಅನುಕೂಲವಾಗುವಂತೆ ‘ಪಂಚಮಿತ್ರ’ ಪೋರ್ಟಲ್ ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿ, ಪೋಸ್ಟರ್‌ ಬಿಡುಗಡೆ ಮಾಡಿದರು. 

ಬಹುಗ್ರಾಮ ಯೋಜನೆಗೆ ಗರ:

ಜಿಲ್ಲೆಯಲ್ಲಿ 17 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು (ಎಂ.ವಿ.ಎಸ್‌), ಅವುಗಳಲ್ಲಿ 8 ಯೋಜನೆಗಳು ತುಂಗಭದ್ರಾ ನದಿ ಮತ್ತು 9 ಯೋಜನೆಗಳು ವರದಾ ನದಿಯ ನೀರಿನ ಮೇಲೆ ಅವಲಂಬಿತವಾಗಿವೆ. ಪ್ರಸ್ತುತ ವರದಾ ನದಿ ಬತ್ತಿರುವ ಕಾರಣ 3 ಎಂ.ವಿ.ಎಸ್‌.ಗಳು ಸ್ಥಗಿತಗೊಂಡಿವೆ. ಈ ತಿಂಗಳಾಂತ್ಯಕ್ಕೆ 7 ಯೋಜನೆಗಳು ಸ್ಥಗಿತಗೊಳ್ಳಲಿವೆ. ಏಪ್ರಿಲ್‌ಗೆ 5 ಯೋಜನೆಗಳು ಬಂದ್‌ ಆಗಲಿವೆ. ರಟ್ಟೀಹಳ್ಳಿ, ಬೈರನಪಾದ, ಅಗಡಿ ಯೋಜನೆಗಳು ಮಾತ್ರ ಚಾಲ್ತಿಯಲ್ಲಿರುತ್ತವೆ ಎಂದು ಸಿಇಒ ಅಕ್ಷಯ ಶ್ರೀಧರ್‌ ಮಾಹಿತಿ ನೀಡಿದರು. 

ಬಿಲ್‌ ಪಾವತಿಸಬೇಡಿ:

₹709 ಕೋಟಿ ವೆಚ್ಚದ ತಡಸ ಬಹುಗ್ರಾಮ ಯೋಜನೆ ಕಾಮಗಾರಿ ಶೇ 50ರಷ್ಟು ಮಾತ್ರ ಪೂರ್ಣಗೊಂಡಿರುವ ಬಗ್ಗೆ ಸಚಿವರು ಬೇಸರ ವ್ಯಕ್ತಪಡಿಸಿದರು. ಆಣೂರು ಬಹುಗ್ರಾಮ ಯೋಜನೆ ಫೆಬ್ರುವರಿ 24ಕ್ಕೆ ಮುಗಿಯಬೇಕಿತ್ತು. ಆದರೆ ಶೇ 30ರಷ್ಟು ಕಾಮಗಾರಿ ಇನ್ನೂ ಬಾಕಿಯಿದೆ. ಈಗಾಗಲೇ ಗುತ್ತಿಗೆದಾರರಿಗೆ 17 ಯೋಜನೆಗಳಿಗೆ ಸಂಬಂಧಿಸಿದಂತೆ ಸುಮಾರು ₹470 ಕೋಟಿ ಪಾವತಿಸಲಾಗಿದೆ. ಆದರೂ ಯೋಜನೆಗಳು ನಿರೀಕ್ಷಿತ ಪ್ರಗತಿಯಾಗದ ಕಾರಣ ಗುತ್ತಿಗೆದಾರರಿಗೆ ಬಾಕಿ ಬಿಲ್‌ ಪಾವತಿಸಿದರೆ ನಿನ್ನ ಮೇಲೆ ಕ್ರಮ ಜರುಗಿಸುತ್ತೇನೆ ಎಂದು ಜಿ.ಪಂ.ಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಖಡಕ್‌ ಎಚ್ಚರಿಕೆ ನೀಡಿದರು. 

ನಿಯಮಾನುಸಾರ ಕ್ರಮ ಜರುಗಿಸಿ:

ರಾಷ್ಟ್ರೀಯ ವಿಪತ್ತು ನಿರ್ವಹಣಾ ಅನುದಾನವನ್ನು ಕೊಳವೆಬಾವಿಗಳ ಫ್ಲೆಷಿಂಗ್, ಡೀಪ್‌ನಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಅದನ್ನು ಬಳಸಿಕೊಳ್ಳಬೇಕು. ಖಾಸಗಿ ಕೊಳವೆಬಾವಿಗಳ ಬಾಡಿಗೆ ಆಧಾರದ ಮೇಲೆ ಪಡೆದು ಪೈಪ್‍ಲೈನ್ ಅಳವಡಿಸಿ ನೀರು ಪಡೆಯಬೇಕು. ಖಾಸಗಿ ಕೊಳವೆಬಾವಿಗಳನ್ನು ಕುಡಿಯುವ ನೀರಿಗಾಗಿ ಕೊಡಲು ಹಿಂದೇಟು ಹಾಕಿದರೆ ನಿಯಮಾನುಸಾರ ಕ್ರಮಕೈಗೊಂಡು ಖಾಸಗಿ ಕೊಳವೆಬಾವಿಗಳನ್ನು ಪಡೆದು ನೀರು ಪೂರೈಸಬೇಕು ಎಂದು ಸೂಚಿಸಿದರು. 

ಹಣ ಹೊಡೆಯಲು ಎಂ.ವಿ.ಎಸ್‌:

ಸಚಿವ ಜಿಲ್ಲೆಯಲ್ಲಿ ಜಾರಿಯಲ್ಲಿರುವ 17 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ (ಎಂ.ವಿ.ಎಸ್‌.) ಪ್ರಗತಿಯನ್ನು ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ ನಿಧಾನಗತಿಯ ಕಾಮಗಾರಿ ಮತ್ತು ಅಸಮರ್ಪಕ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಗುತ್ತಿಗೆದಾರರಿಗೆ ಬಿಲ್‌ ಮಾಡಿ ಕೊಡೋಕೆ ಹಣ ಹೊಡೆಯಲು ಈ ಯೋಜನೆಗಳು ಬಳಕೆಯಾಗುತ್ತಿವೆ ಅನಿಸುತ್ತಿದೆ. ಕಾಲಮಿತಿಯಲ್ಲಿ ಕಾಮಗಾರಿಗಳು ಮುಗಿದಿಲ್ಲ. ಆದರೆ ಹಣ ಮಾತ್ರ ಖರ್ಚಾಗುತ್ತಿದೆ. ಅಧಿಕಾರಿಗಳಲ್ಲಿ ಕರ್ತವ್ಯದ ಬಗ್ಗೆ ಬದ್ಧತೆ ಪ್ರಾಮಾಣಿಕತೆ ಕಾಣುತ್ತಿಲ್ಲ. ಮೇಲ್ವಿಚಾರಣೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. 

ಮೇವಿನ ಹಣ:

ಮನುಷ್ಯನಿಗೆ ತಿನ್ನಲು ಕೊಡಬೇಡ’ ಜಿಲ್ಲೆಗೆ ₹5 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಸರ್ಕಾರಿ ಗೋಶಾಲೆಯ 20 ಜಾನುವಾರಿಗಳಿಗೆ ಮೇವು ಪೂರೈಸಲು ಸ್ವಲ್ಪ ಹಣ ಬಳಕೆ ಮಾಡಿಕೊಂಡಿದ್ದೇವೆ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್‌.ವಿ.ಸಂತಿ ಸಚಿವರಿಗೆ ತಿಳಿಸಿದರು. ಆಗ ಸಚಿವರು ಜಾನುವಾರುಗಳಿಗಾಗಿ ಕೊಟ್ಟ ಹಣವನ್ನು ಮನುಷ್ಯನಿಗೆ ತಿನ್ನಲು ಕೊಡಬೇಡ ಎಂದಾಗ ಸಭೆಯಲ್ಲಿದ್ದ ಅಧಿಕಾರಿಗಳು ಗೊಳ್ಳನೆ ನಕ್ಕರು. ಜಿಲ್ಲೆಗೆ ಬಂದ 10 ಸಾವಿರ ಮೇವಿನ ಬೀಜದ ಕಿಟ್‌ಗಳು  ಸದ್ಬಳಕೆ ಆಗಿವೆಯೇ ಎಂಬ ಬಗ್ಗೆ ಸಮೀಕ್ಷೆ ನಡೆಸಿ ತಹಶೀಲ್ದಾರ್‌ಗಳಿಂದ ವರದಿ ತರಿಸಿಕೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT