ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೇಕೆರೂರು: ಮೆಕ್ಕೆಜೋಳದ ಬೆಳೆಗೆ ಗಿಳಿ, ಮಂಗಗಳ ಉಪಟಳ

Published 21 ಆಗಸ್ಟ್ 2024, 4:48 IST
Last Updated 21 ಆಗಸ್ಟ್ 2024, 4:48 IST
ಅಕ್ಷರ ಗಾತ್ರ

ಹಿರೇಕೆರೂರು: ಕಳೆದ ಬಾರಿ ಮಳೆ ಕೊರತೆಯಿಂದ ಈಗಾಗಲೇ ನಷ್ಟ ಅನುಭವಿಸಿರುವ ರೈತರು, ಪ್ರಸಕ್ತ ಮುಂಗಾರು ಹಂಗಾಮಿನ ಮೆಕ್ಕೆಜೋಳದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಬೆಳೆಗೆ ಗಿಳಿ ಹಾಗೂ ಮಂಗಗಳಕಾಟ ಕಾಟ ಶುರುವಾಗಿದೆ.

ತಾಲ್ಲೂಕಿನ ಬಾಳಂಬೀಡ ಗ್ರಾಮದ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಮೆಕ್ಕೆಜೋಳದ ಹೊಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗಿಳಿ ದಾಳಿ ಇಡುತ್ತಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನೆಲ್ಲಾ ಖಾಲಿ ಮಾಡುತ್ತಿವೆ. ಇವುಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಮಾಡಬೇಕಾಗಿದೆ. ದಿನವಿಡೀ ಪೀಪಿ, ತಮಟೆ, ಡಿಜಿಟಲ್ ಶಬ್ದ ಮಾಡುವ ಪರಿಕರಗಳನ್ನು ಹಿಡಿದು ಹೊಲಗಳನ್ನು ಕಾಯುವ ಅನಿವಾರ್ಯತೆ ಎದುರಾಗಿದೆ.

ತಾಲ್ಲೂಕಿನಲ್ಲಿ 26,700 ಹೆಕ್ಟೇರ್‌ ಸಾಗುವಳಿ ಕ್ಷೇತ್ರವಿದ್ದು, ಇದರಲ್ಲಿ 22,455 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಮುಂಗಡ ಬಿತ್ತನೆ ಮಾಡಿರುವ ರೈತರ ಜಮೀನುಗಳಿಗೆ ಬೆಳಗಿನ ಜಾವ ಹಾಗೂ ಸಂಜೆ ಹೊತ್ತು ಹಿಂಡುಹಿಂಡಾಗಿ ಗಿಳಿಗಳು ದಾಳಿ ಇಡುತ್ತಿವೆ. ಇದರಿಂದ ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ದೊಡ್ಡ ತಲೆನೋವಾಗಿದ್ದು, ಸಂಕಷ್ಟದ ಪರಿಸ್ಥಿತಿ ಉದ್ಭವಿಸಿದೆ ಎನ್ನುವುದು ರೈತರು ಅಳಲು.

ಸದ್ದು ಮಾಡುವ ಪರಿಕರ ಬಳಕೆ: ಬೆಳಗಾಗುವುದೇ ತಡ ರೈತರು ಸದ್ದು ಮಾಡುವ ಪರಿಕರಗಳೊಂದಿಗೆ ಹೊಲಕ್ಕೆ ಹೋಗುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಗಿಳಿಗಳ ಕಾಟ ಹೆಚ್ಚಾಗುತ್ತಿದೆ.ಈ ಅವಧಿಯಲ್ಲಿ ರೈತರು ಪೀಪಿ ಊದಿ ಗಿಳಿಗಳು ಹಾಗೂ ಮಂಗಗಳು ಹೊಲಕ್ಕೆ ಬಾರದಂತೆ ಜಾಗೃತಿ ವಹಿಸುತ್ತಿದ್ದಾರೆ.

ಪ್ರತಿ ವರ್ಷವೂ ಸಂಕಷ್ಟ: ಕಳೆದ ಬಾರಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಬೆಳೆದ ಬೆಳೆಗಳು ಕೈಗೆ ಬರದೇ ಹಾಳಾದವು. ಪ್ರಸಕ್ತ ವರ್ಷದ ಮುಂಗಾರು ಮಳೆ ಸರಿಯಾದ ವೇಳೆಗೆ ಬಂದು ಬಿತ್ತನೆ ಮಾಡಿದ ರೈತನಿಗೆ ಗಿಳಿಗಳು ಹಾಗೂ ಮಂಗಗಳ ಕಾಟ ಶುರುವಾಗಿದೆ. ಇದರಿಂದ ಉಳುಮೆಗೆ ಖರ್ಚು ಮಾಡಿದ ಹಣ ವಾಪಾಸು ಬರುತ್ತದೆ ಇಲ್ಲವೋ ಎಂಬ ಚಿಂತೆಯಲ್ಲಿ ತಾಲ್ಲೂಕಿನ ರೈತರು ಮುಳುಗಿದ್ದಾರೆ.

‘ಬೆಳಿಗ್ಗೆ ಹಾಗೂ ಸಂಜೆ ಗಿಳಿ ಹಾಗೂ ಮಂಗಗಳು ಹೊಲಕ್ಕೆ ಬಂದು ಮೆಕ್ಕೆಜೋಳದ ತೆನೆಗಳನ್ನು ತಿನ್ನುತ್ತವೆ.ಇವುಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಕಾಯುವ ಸ್ಥಿತಿ ಬಂದಿದೆ. ಈಗಾಗಲೇ ನಮ್ಮ ಹೊಲದಲ್ಲಿ ತೆನೆಗಳನ್ನು ತಿಂದಿವೆ’ ಎನ್ನುವ ಅಳಲು ರಮೇಶ ಮೇಗಳಮನಿ ಅವರದ್ದು.

ಹಿರೇಕೆರೂರು ಮೆಕ್ಕೆಜೋಳ ಹೊಲದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಕುಳಿತಿರುವ ಗಿಳಿಗಳ ಹಿಂಡು -ಪ್ರಜಾವಾಣಿ ಚಿತ್ರ
ಹಿರೇಕೆರೂರು ಮೆಕ್ಕೆಜೋಳ ಹೊಲದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಕುಳಿತಿರುವ ಗಿಳಿಗಳ ಹಿಂಡು -ಪ್ರಜಾವಾಣಿ ಚಿತ್ರ
ರೈತರು ಸ್ವತಃ ಬೆಳೆಗಳನ್ನು ಕಾಯ್ದುಕೊಳ್ಳಬೇಕು. ಗಿಳಿಯಿಂದ ಹಾಳಾದ ಬೆಳೆಗಳಿಗೆ ಯಾವುದೇ ರೀತಿ ಪರಿಹಾರ ಇಲಾಖೆಯಿಂದ ಇರುವುದಿಲ್ಲ
ಹಿತೇಂದ್ರ ಗೌಡಪ್ಪಳವರ ಸಹಾಯಕ ಕೃಷಿ ನಿರ್ದೇಶಕರು
ನಾಲ್ಕು ಎಕರೆ ಹೊಲವನ್ನು ಲಾವಣಿ ಪಡೆದು ₹25 ಸಾವಿರ ಖರ್ಚು ಮಾಡಿ ಮುಂಗಡವಾಗಿ ಬಿತ್ತನೆ ಮಾಡಿದ್ದೇನೆ ಇವಾಗ ಮೆಕ್ಕೆಜೋಳದ ಹಾಲುಕಾಳು ತೆನೆಗಳು ಆಗಿವೆ
ರಮೇಶ ಮೇಗಳಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT