ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ಕೋವಿಡ್‌ಗೆ ಬಲಿ: ‘ಬಟ್ಟೆ ಹೊಲಿದು, ಜೀವನ ನಡೆಸಬೇಕ್ರಿ..’

ಪತ್ನಿ ರೇಣುಕಾ ತಳವಾರ ಕಣ್ಣೀರು
Last Updated 23 ಜೂನ್ 2021, 19:30 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ನನ್ನ ಪತಿ ಕೋವಿಡ್‌ಗೆ ಬಲಿಯಾದ ನಂತರ ಕುಟುಂಬ ನಿರ್ವಹಣೆಯೇ ಕಷ್ಟವಾಯಿತು. ತಾಯಿಯ ಮನೆಯಲ್ಲಿದ್ದಾಗ ಕಲಿತಿದ್ದ ಟೇಲರಿಂಗ್‌ ವೃತ್ತಿಯೇ ನಮ್ಮ ಕುಟುಂಬಕ್ಕೆ ಆಸರೆಯಾಗಿದೆ’ ಎಂದುರೇಣುಕಾ ತಳವಾರ ನೋವಿನಿಂದ ನುಡಿದರು.

ತಾಲ್ಲೂಕಿನ ಕುದರಿಹಾಳ ಗ್ರಾಮದಲ್ಲಿ ಕೋವಿಡ್‌ನಿಂದ ಮೃತಪಟ್ಟ ಸುರೇಶ ತಳವಾರ ಅವರ ಕುಟುಂಬದ ಕಣ್ಣೀರ ಕತೆ ಇದು.

ಸುರೇಶ್‌ ಅವರಿಗೆಕೋವಿಡ್‌ ಪಾಸಿಟಿವ್‌ ಬಂದ ತಕ್ಷಣ, ಬೆಡ್‌ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಲ್ಲಿಯೇ ಎರಡು ದಿನ ಕಳೆಯಿತು.ನಂತರ ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ವರ್ಷ ಸೆ.7ರಂದು ದಾಖಲಾಗಿ, ಸೆ.‌11ರಂದು ಮೃತಪಟ್ಟರು.

‘ನಾವು ಚಿಕ್ಕವರಿದ್ದಾಗಲೇ ನಮ್ಮ ತಂದೆ ಕಳೆದುಕೊಂಡು, ತಾಯಿಯ ಮಡಿಲಲ್ಲೇ ಬೆಳೆದೆವು. ಈಗ ನನ್ನ ಪತಿಯನ್ನು ಕಳೆದುಕೊಂಡಿದ್ದೇನೆ. ನನ್ನ ಇಬ್ಬರು ಮಕ್ಕಳು ಅಪ್ಪನನ್ನು ನೆನಪು ಮಾಡಿಕೊಂಡು ಕಣ್ಣೀರಿಡುತ್ತಿವೆ. ನಮ್ಮ ತಾಯಿಅರಳೆವ್ವ ಬಳ್ಳಾರಿ ಜೊತೆಗಿದ್ದು ಧೈರ್ಯ ತುಂಬುತ್ತಿದ್ದಾರೆ’ ಎಂದು ರೇಣುಕಾ ತಳವಾರ ನೋವು ತೋಡಿಕೊಂಡರು.

‘ಲಾಕ್‌ಡೌನ್‌ನಿಂದ ಕೆಲಸ ಕೂಡ ಇಲ್ಲ. ಹಬ್ಬ ಹರಿದಿನಗಳು ಇಲ್ಲ, ಬಟ್ಟೆ ಅಂಗಡಿಗಳು ಬಂದ್‌ ಆಗಿದ್ದರಿಂದ ಬಟ್ಟೆ ಹೊಲಿಸಲು ಗ್ರಾಹಕರು ಮುಂದೆ ಬರುತ್ತಿಲ್ಲ. ಇಬ್ಬರು ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಕೊಡಿಸಲು ಸ್ಮಾಟ್‌ ಪೋನ್‌ ತೆಗೆದುಕೊಳ್ಳಲು ತೊಂದರೆಯಾಗಿದೆ’ ಎಂದು ಅಳಲು ತೋಡಿಕೊಂಡರು.

ಸುರೇಶ್‌ ಅವರ ಮಗಳು ಹೊನ್ನಮ್ಮ ತಳವಾರ 10ನೇ ತರಗತಿ ಓದುತ್ತಿದ್ದಾಳೆ. ಮಗ ಕಾಂತೇಶ ತಳವಾರ 7ನೇ ತರಗತಿ ಓದುತ್ತಿದ್ದಾನೆ. ಲಾಕ್‌ಡೌನ್‌ನಿಂದ ಶಾಲೆ ಇಲ್ಲದ ಕಾರಣ ಇಬ್ಬರು ಮಕ್ಕಳು ತಾಯಿ ಜೊತೆಗೆ ಹೊಲಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ.

‘ನನ್ನ ತಂದೆ ಸಾವಿನ ನಂತರ ತಾಯಿಗೆ ₹600 ವಿಧವಾ ವೇತನ ಬರುತ್ತಿದೆ. ಅದು ಆಸ್ಪತ್ರೆ, ಗುಳಿಗೆ, ಔಷಧಿ ಖರ್ಚಿಗೂ ಸಾಕಾಗುವುದಿಲ್ಲ. ನಮ್ಮವ್ವ ಬಟ್ಟೆ ಹೊಲಿದು ನಮ್ಮನ್ನು ಸಾಕುವ ಜತೆಗೆ ಓದಲು ನೆರವು ನೀಡುತ್ತಿದ್ದಾಳೆ. ಕಷ್ಟಪಟ್ಟು ಪದವಿವರೆಗೂ ಓದಿ ಸರ್ಕಾರಿ ನೌಕರಿ ಹಿಡಿದು ಅಮ್ಮನ ಕಣ್ಣೀರು ಒರೆಸಬೇಕು’ ಎಂದು ಪುತ್ರಿ ಹೊನ್ನಮ್ಮ ತಳವಾರ ಹೇಳಿದರು.

‘ಹರನಗಿರಿ ಸಹಕಾರ ಸಂಘಕ್ಕೆ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದೇನೆ. ನನ್ನ ಪತಿ ಸಾವನ್ನಪ್ಪಿದಾಗ ಸರ್ಕಾರದಿಂದ ಅಂತ್ಯಕ್ರಿಯೆಗೆ ಕೊಡುವ ₹5 ಸಾವಿರ ಇದುವರೆಗೂ ಬಂದಿಲ್ಲ.ರಾಷ್ಟ್ರೀಯ ಕೌಟುಂಬಿಕ ಯೋಜನೆಯಡಿ ₹20 ಸಾವಿರ ಹಣಕ್ಕೆ ಅರ್ಜಿ ಸಲ್ಲಿಸಿದ್ದೇವೆ. 9 ತಿಂಗಳು ಕಳೆದರೂ ಬಂದಿಲ್ಲ. ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಸಾಕಾಗಿದೆ’ ಎನ್ನುತ್ತಾರೆ ರೇಣುಕಾ ತಳವಾರ.

‘ನನ್ನ ಮಗಳು ಬಟ್ಟೆ ಹೊಲಿಯುತ್ತಾಳೆ. ಮೊಮ್ಮಗಳು ರೇಣುಕಾ ಪಿಯುಸಿ ಓದಿದ್ದು, ಯಾವುದಾದರೂ ಸರ್ಕಾರಿ ಉದ್ಯೋಗ ಕೊಟ್ಟರೆ, ನಮ್ಮ ಕಷ್ಟ ತೀರುತ್ತದೆ’ ಎಂಬುದು ಮೃತ ಸುರೇಶ ಅವರ ಅತ್ತೆ ಅರಳೆವ್ವ ಬಳ್ಳಾರಿ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT