ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಗುರುತಿಸಿ, ಪ್ರಸ್ತಾವ ಸಲ್ಲಿಸಿ: ಸಂಸದ ಉದಾಸಿ ಸೂಚನೆ

ವಾಣಿಜ್ಯ ವಾಹನಗಳ ಚಾಲನಾ ತರಬೇತಿ ಕೇಂದ್ರ ಆರಂಭಕ್ಕೆ ಕ್ರಮ
Last Updated 25 ಜನವರಿ 2021, 16:34 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ವಾಣಿಜ್ಯ ವಾಹನಗಳ ಚಾಲನಾ ತರಬೇತಿ ಕೇಂದ್ರ ಆರಂಭಿಸುವ ಕುರಿತಂತೆ ಜಮೀನು ಗುರುತಿಸಿ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನಿಷ್ಠ 50 ಎಕರೆ ಜಮೀನನ್ನು ಗುರುತಿಸಿ ಪ್ರಸ್ತಾವ ಸಲ್ಲಿಸಿ, ಈಗಾಗಲೇ ತರಬೇತಿ ಕೇಂದ್ರ ಮಂಜೂರಾತಿ ಕುರಿತಂತೆ ಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಪಾರ್ಕಿಂಗ್‌ ಜಾಗ ಗುರುತಿಸಿ:ಹಾವೇರಿ ಹಾಗೂ ರಾಣೆಬೆನ್ನೂರು ನಗರದೊಳಗೆ ವಾಹನ ಪಾರ್ಕಿಂಗ್ ನಿಲುಗಡೆ ಜಾಗಗಳನ್ನು ಗುರುತಿಸಲು ಸೂಚನೆ ನೀಡಿದರು. ಹಾಗೂ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ 2019ರ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಜಾಗೃತಿ ಮೂಡಿಸಬೇಕು ಹಾಗೂ ಟ್ರ್ಯಾಕ್ಟರ್ ಟ್ರಾಲಿಗಳಿಗೆ ರಿಫ್ಲೆಕ್ಟರ್‌ ಅಳವಡಿಸಲು ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಏಳು ಬ್ಲಾಕ್ ಸ್ಪಾಟ್‍ಗಳನ್ನು ಗುರುತಿಸಿ ಈ ಪೈಕಿ ಐದು ಅಪಘಾತ ಸ್ಥಳಗಳ ದುರಸ್ತಿ ಮಾಡಲಾಗಿದೆ. ಶಿಗ್ಗಾವಿ ಐ.ಬಿ, ಛತ್ರ ಬಳಿ ದುರಸ್ತಿ ಮಾಡಬೇಕಾಗಿದೆ. ಇದರೊಂದಿಗೆ ಕೋಟೆಗುಡ್ಡ ಹತ್ತಿರ ರಸ್ತೆ ವಿಸ್ತರಣೆಗೆ ಮನವಿ ಮಾಡಿಕೊಂಡರು.

ರಸ್ತೆ ಕಣ ತಡೆಯಿರಿ:ಹೆದ್ದಾರಿಯ ಸೇವಾ ರಸ್ತೆ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಗಳ ಮೇಲೆ ರೈತರು ಒಕ್ಕಣೆ ಮಾಡುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಈ ಕುರಿತಂತೆ ರೈತರಿಗೆ ಜಾಗೃತಿ ಮೂಡಿಸಿ ರಸ್ತೆಯಲ್ಲಿ ಕಣ ಮಾಡುವುದನ್ನು ತಡೆಯುವಂತೆ ಸೂಚನೆ ನೀಡಿದರು.

ಕಾಲೇಜುಗಳಲ್ಲಿ ಪರವಾನಗಿ ಶಿಬಿರ:ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ವಾಹನ ಚಾಲನೆ, ರಸ್ತೆ ಸುರಕ್ಷತಾ ಕ್ರಮಗಳ ಕುರಿತಂತೆ ಜಾಗೃತಿಯ ಜೊತೆಗೆ ಅರ್ಹರಿಗೆ ಎಲ್.ಎಲ್.ಆರ್. ಹಾಗೂ ಡಿ.ಎಲ್‍.ಗಳನ್ನು ನೀಡಲು ತಾಲ್ಲೂಕುವಾರು ಕಾಲೇಜುಗಳಲ್ಲಿ ಶಿಬಿರಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಸಾಬ ಮುದ್ದೇಬಿಹಾಳ ಮಾತನಾಡಿ, 32ನೇ ರಾಷ್ಟ್ರೀಯ ಸುರಕ್ಷತಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಒಂದು ತಿಂಗಳು ಆಯೋಜಿಸಲಾಗಿದ್ದು, ಹಲವಾರು ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಏಕನಾಥ ಬಾನುವಳ್ಳಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಇದ್ದರು.

‘ಸುರಕ್ಷತಾ ತಡೆಗೋಡೆ ನಿರ್ಮಿಸಿ’
ಗ್ರಾಮೀಣ ಭಾಗದ ಕೆರೆ ದಂಡೆಗಳ ಮೇಲೆ ಹಾದು ಹೋಗಿರುವ ಹೆದ್ದಾರಿ ಹಾಗೂ ಕೆಲ ಮುಖ್ಯ ರಸ್ತೆಗಳು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆ ಮೇಲೆ ವಾಹನ ಹಾದು ಹೋಗುವಾಗ ಅಪಘಾತಗಳು ಸಂಭವಿಸಿದರೆ ಕಂದಕಕ್ಕೆ ಉರುಳುವ ಅಪಾಯ ಹೆಚ್ಚಾಗಿದೆ. ಇಂತಹ ಸ್ಪಾಟ್‍ಗಳನ್ನು ಗುರುತಿಸಿ ಕೆರೆಗಳ ದಂಡೆ ಮೇಲೆ ರಸ್ತೆಗಳ ವಿಸ್ತರಣೆ, ರಸ್ತೆ ಇಕ್ಕೆಲಗಳಲ್ಲಿ ಸುರಕ್ಷತಾ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.

ಈಗಾಗಲೇ ಹಾನಗಲ್ ತಾಲ್ಲೂಕಿಗೆ ₹22 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ. ಪೊಲೀಸ್, ಸಾರಿಗೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಹೆದ್ದಾರಿಗಳಲ್ಲಿ ಸೇವಾ ರಸ್ತೆಗಳ ಅಭಿವೃದ್ಧಿಗೆ ಭೂಸ್ವಾಧೀನವಾಗದ ಕೆಲ ಪ್ರಕರಣಗಳಿವೆ. ಈ ಕುರಿತಂತೆ ತ್ವರಿತವಾಗಿ ಇತ್ಯರ್ಥಪಡಿಸಿ ಹಾವೇರಿ ನಗರದಲ್ಲಿ ರಸ್ತೆ ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT