ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಮಿತೆಗೆ ಧಕ್ಕೆ ಬಂದರೆ ಸಿಡಿದೇಳುತ್ತೇವೆ: ಸಿಎಂ

ಹಿಂದೂ ಕೆಟ್ಟ ಪದ ಎಂದವರ ಚಿಂತನೆ, ಯೋಚನೆಯಲ್ಲಿ ಹೊಲಸಿದೆ–ಕಿಡಿ
Last Updated 8 ನವೆಂಬರ್ 2022, 14:11 IST
ಅಕ್ಷರ ಗಾತ್ರ

ಶಿರಹಟ್ಟಿ (ಗದಗ ಜಿಲ್ಲೆ): ‘ಹಿಂದೂ ಪದಕ್ಕೆ ಕೆಟ್ಟ ಅರ್ಥವಿದೆ’ ಎಂದಿರುವ ಸತೀಶ ಜಾರಕಿಹೊಳಿ ಚಿಂತನೆ,ಯೋಚನೆಯಲ್ಲಿ ಹೊಲಸಿದೆ. ಅವರ ಆ ಗುಣವೇ ಈ ಮೂಲಕ ಅಭಿವ್ಯಕ್ತಗೊಂಡಿದೆ. ಸನಾತನ ಧರ್ಮವೊಂದರ ಬುನಾದಿಯನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಜನಸಂಕಲ್ಪ ಯಾತ್ರೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆಗೆ ಅವರು ಮಾತನಾಡಿ, ‘ವೇದ ಪುರಾಣಗಳಿಂದ ಇಲ್ಲಿಯವರೆಗೂ ಹಿಂದೂಸ್ತಾನ ಹಿಂದೂಗಳಿಗೆ ಸೇರಿದ್ದು ಎಂದು ಎಲ್ಲರೂ ಹೇಳಿಕೊಂಡೇ ಬಂದಿದ್ದಾರೆ. ನೆಹರೂ ಕೂಡ ಇದೇ ಮಾತು ಹೇಳಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ನೆಹರೂ ಹೇಳಿಕೆಯನ್ನೂ ಒಪ್ಪಿಕೊಳ್ಳಲು ತಯಾರಿಲ್ಲ. ಅದಕ್ಕಿಂತ ಆಶ್ಚರ್ಯ ತರಿಸಿರುವುದು ಕಾಂಗ್ರೆಸ್‌ ಪಕ್ಷದ ಮೌನ. ಈ ವಿಚಾರವಾಗಿ ದೇಶದಾದ್ಯಂತ ಆಕ್ರೋಶ ವ್ಯಕ್ತವಾದರೂ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಒಂದು ಶಬ್ದ ಆಡಿಲ್ಲ. ಭಾರತ್‌ ಜೋಡೊ ನಾಟಕ ಮಾಡಿ, ಈ ರೀತಿ ಹೇಳಿಕೆ ನೀಡಿದ್ದು ಭಾರತ ಒಡೆಯುವ ಕೆಲಸವಲ್ಲವೇ?’ ಎಂದು ಪ್ರಶ್ನಿಸಿದರು.

‘ಜಾರಕಿಹೊಳಿ ಅವರೇ ನಿಮ್ಮ ಜಾತಿ ಪ್ರಮಾಣಪತ್ರದಲ್ಲಿ ಹಿಂದೂ ಎಂಬ ಶಬ್ದವಿಲ್ಲವೇ? ಹಿಂದೂ ಆಗಿ ಹುಟ್ಟಿ, ವಿದ್ಯೆ ಕಲಿತು, ಶಾಸಕರಾಗಿ, ಸಚಿವರಾಗಿರುವ ನೀವು ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಮತ್ತು ಮತ ಗಳಿಕೆಗಾಗಿ ಇಂಥ ಹೇಳಿಕೆ ನೀಡಿ ಕ್ಷುಲ್ಲಕ ರಾಜಕಾರಣ ಮಾಡುತ್ತೀದ್ದೀರಿ’ ಎಂದು ತಿರುಗೇಟು ನೀಡಿದರು.

‘ಅಧಿಕಾರಕ್ಕಾಗಿ, ವೋಟಿಗಾಗಿ, ಅಲ್ಪಸಂಖ್ಯಾತರವನ್ನು ಓಲೈಸುವ ಸಲುವಾಗಿ ಇಡೀ ದೇಶದ ಹಿಂದೂಗಳನ್ನು ಅವಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸ್ವಾಭಿಮಾನ ಹಾಗೂ ಅಸ್ಮಿತೆಗೆ ಧಕ್ಕೆ ಬಂದರೆ ಹಿಂದೂಗಳು ಸಿಡಿದೇಳುತ್ತಾರೆ. ಸತೀಶ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸುವುದಷ್ಟೇ ಅಲ್ಲ; ಇದಕ್ಕೆ ಕೊನೆ ಹಾಡುವಂತಹ ಕಾರ್ಯಕ್ರಮವನ್ನು ಬಿಜೆಪಿ ಹಮ್ಮಿಕೊಳ್ಳಲಿದೆ’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT