ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಅಗತ್ಯಬಿದ್ದರೆ ಟ್ಯಾಂಕರ್‌ನಿಂದ ನೀರು ಪೂರೈಸಿ -ಜಿ.ಪಂ. ಅಧ್ಯಕ್ಷ ಏಕನಾಥ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ
Last Updated 9 ಮಾರ್ಚ್ 2021, 17:10 IST
ಅಕ್ಷರ ಗಾತ್ರ

ಹಾವೇರಿ: ‘ಬೇಸಿಗೆ ಆರಂಭವಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪೂರ್ವಸಿದ್ಧತೆಯನ್ನು ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಪ್ರಸ್ತುತ ಸ್ಥಿತಿಗತಿಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸಮಸ್ಯಾತ್ಮಕ ಹಳ್ಳಿಗಳನ್ನು ಈಗಿನಿಂದಲೇ ಗುರುತು ಮಾಡಿಕೊಳ್ಳಿ. ನೀರಿನ ಸಮಸ್ಯೆ ಇದ್ದಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಿ. ನೀರಿನ ಮೂಲಗಳಿಲ್ಲದ ಹಳ್ಳಿಗಳಲ್ಲಿ ಅನಿವಾರ್ಯತೆ ಉಂಟಾದಲ್ಲಿ ಮಾತ್ರ ಟ್ಯಾಂಕರ್ ಬಳಕೆಗೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಕೊಳವೆಬಾವಿ ಕೊರೆಯಲು ಸರ್ಕಾರದ ಅನುಮತಿ ಇರುವುದಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ಪರ್ಯಾಯ ವ್ಯವಸ್ಥೆ ಕುರಿತಂತೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಯಾವ ಹಳ್ಳಿಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.

ನೀರಿನ ಅಭಾವವಿಲ್ಲ:ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮಾಹಿತಿ ನೀಡಿ, ಸದ್ಯ ಜಿಲ್ಲೆಯಲ್ಲಿ ನೀರಿನ ಅಭಾವವಿಲ್ಲ. ಕಳೆದ ಮೂರು ವರ್ಷಗಳ ಪರಿಸ್ಥಿತಿಯನ್ನು ಅವಲೋಕಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಲಜೀವನ್‌ ಮಿಷನ್ ಯೋಜನೆ ಒಳಪಡುವ ಗ್ರಾಮಗಳು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಗ್ರಾಮಗಳ ನಕ್ಷೆ ತಯಾರಿಸಲಾಗಿದೆ. ಒಂದು ವಾರದೊಳಗೆ ಟಾಸ್ಕ್‌ಫೋರ್ಸ್‌ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಮಂಜೂರಾದ ತಕ್ಷಣ ಕ್ರಿಯಾ ಯೋಜನೆ ತಯಾರಿಸಿ ಸೂಕ್ತ ಕ್ರಮ ಗೊಳ್ಳಲಾಗುವುದು ಎಂದು ತಿಳಿಸಿದರು.

ಅನುದಾನ ಪೂರ್ಣ ಬಳಸಿ:ಈ ವರ್ಷ ಇಲಾಖಾವಾರು ನಿಗದಿಯಾಗಿರುವ ಅನುದಾನ ಬಳಕೆಗೆ ಸಾಧ್ಯವಾಗದೇ ಹಿಂತಿರುಗಿಸಲಾಗಿದೆ ಎಂಬ ವಿಷಯ ಬರಬಾರದು. ಬಿಡುಗಡೆಯಾದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಸ್‌ ಸಂಚಾರ ಆರಂಭಿಸಿ:ಶಾಲಾ-ಕಾಲೇಜುಗಳು ಪುನಾರರಂಭಗೊಂಡಿವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿಗದಿತ ಮಾರ್ಗದಲ್ಲಿ ಬಸ್‍ಗಳನ್ನು ಪುನಃ ಆರಂಭಿಸಬೇಕು. ಕೊರೊನಾ ಸಂದರ್ಭದಲ್ಲಿ ಬಸ್ ಓಡಾಟ ನಿಲ್ಲಿಸಲಾಗಿತ್ತು. ಈಗಲೂ ಕೆಲ ಮಾರ್ಗದಲ್ಲಿ ಬಸ್ ಆರಂಭಗೊಳಿಸಿಲ್ಲ ಎಂಬ ಸದಸ್ಯರ ಆಕ್ಷೇಪದ ಹಿನ್ನೆಲೆಯಲ್ಲಿ ತಕ್ಷಣ ಎಲ್ಲ ಮಾರ್ಗಗಳಲ್ಲೂ ಬಸ್ ಸಂಚಾರ ಆರಂಭಿಸಿ ವಾಯವ್ಯ ರಸ್ತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಭೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಟಾಕನಗೌಡ ಪಾಟೀಲ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವರಾಜ ಅಮರಾಪೂರ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಕನ್ನಪ್ಪಳವರ, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT