ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧದಲ್ಲಿ ರಾಮನಿಗೆ ಪೂಜೆಯಾಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು: ಕಟೀಲ್

Last Updated 11 ಮಾರ್ಚ್ 2023, 13:35 IST
ಅಕ್ಷರ ಗಾತ್ರ

ಬ್ಯಾಡಗಿ (ಹಾವೇರಿ): ‘ವಿಧಾನಸೌಧದಲ್ಲಿ ಶ್ರೀರಾಮನಿಗೆ ಪೂಜೆಯಾಗಬೇಕಾದರೆ, ಆಂಜನೇಯನ ಮಂತ್ರ ಮೊಳಗಬೇಕಾದರೆ, ವಾಲ್ಮೀಕಿ ಮಹರ್ಷಿಗೆ ಗೌರವ ಸಿಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ಪರಿಶಿಷ್ಟ ಪಂಗಡದ (ಎಸ್‌.ಟಿ) ಸಮಾವೇಶದಲ್ಲಿ ಅವರು ಮಾತನಾಡಿದರು. ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ವಿರೋಧ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವ ಮೂಲಕ ರಾಮಭಕ್ತರ ಕನಸನ್ನು ಸಾಕಾರ ಮಾಡಿದ್ದಾರೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಈ ಸಮುದಾಯಕ್ಕೆ ಶಕ್ತಿ ಕೊಡುವ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೂ ಕಮಲ ಅರಳಲಿದೆ ಎಂದರು.

ಆರುವ ದೀಪ ಜೋರಾಗಿ ಉರಿಯುತ್ತಿದೆ: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಇಡೀ ದೇಶದಲ್ಲೇ ಕಾಂಗ್ರೆಸ್‌ ಅನ್ನು ಜನರು ಬೇರು ಸಮೇತ ಕಿತ್ತು ಹಾಕಿದ್ದಾರೆ. ಅಸ್ತಿತ್ವ ಕಳೆದುಕೊಂಡು ಕಾಂಗ್ರೆಸ್‌ ದಾರುಣ ಸ್ಥಿತಿಯಲ್ಲಿದೆ. ಆದರೂ ಕಾಂಗ್ರೆಸ್‌ ನಾಯಕರು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲು ಗನಸು ಕಾಣುತ್ತಿದ್ದಾರೆ. ಆರುವ ಮುನ್ನ ದೀಪ ಜೋರಾಗಿ ಉರಿಯುತ್ತದೆ, ಆ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ದೇಶ ಒಡೆಯಲು ಯತ್ನ: ಜಾತಿ–ಜಾತಿ ನಡುವೆ ವಿಷಬೀಜ ಬಿತ್ತಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಕಾಂಗ್ರೆಸ್‌ ಸರ್ಕಾರದ ಕಾಲದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕಗ್ಗೊಲೆಯನ್ನು ಯಾರೂ ಮೆರೆಯಲು ಸಾಧ್ಯವಿಲ್ಲ. ಭಾರತ್‌ ಜೋಡೋ ಯಾತ್ರೆ ಮಾಡಿದ ರಾಹುಲ್‌ ಗಾಂಧಿಯವರು ವಿದೇಶದಲ್ಲಿ ಕುಳಿತು ದೇಶ ಒಡೆಯುವ ಪ್ರಯತ್ನ ಮಾಡಿದರು ಎಂದು ವಿಜಯೇಂದ್ರ ಆರೋಪಿಸಿದರು.

ಅಧಿಕಾರಕ್ಕೆ ಬಂದರೆ ಉಚಿತ ಅಕ್ಕಿ, ಉಚಿತ ವಿದ್ಯುತ್‌ ಕೊಡುತ್ತೇವೆ ಎನ್ನುತ್ತಿದ್ದಾರೆ ಕಾಂಗ್ರೆಸ್‌ ನಾಯಕರು. ಕೇಂದ್ರದ ಬಿಜೆಪಿ ಸರ್ಕಾರ ಕೊಟ್ಟ ಅಕ್ಕಿಯ ಗೋಣಿಚೀಲಕ್ಕೆ ಇವರ ಫೋಟೊ ಹಾಕಿಸಿ, ತಾವು ಅಕ್ಕಿ ಕೊಟ್ಟೆವು ಅಂತ ಕಾಂಗ್ರೆಸ್‌ನವರು ಪ್ರಚಾರ ಪಡೆದರು. ದೇಶಕ್ಕೆ ಸ್ವಾತಂತ್ರ್ಯಬಂದ ನಂತರ 60 ವರ್ಷಗಳ ಕಾಲ ಕಾಂಗ್ರೆಸ್‌ ಆಳ್ವಿಕೆ ನಡೆಸಿದೆ. ಆದರೂ ಬಡವರು ಬಡವರಾಗೇ ಉಳಿದಿದ್ದಾರೆ ಎಂದು ಜರಿದರು.

ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯ ಬಿಜೆಪಿ ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಶಿವರಾಜ ಸಜ್ಜನರ, ಮಹೆಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT