ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಮದ್ಯ ಅಕ್ರಮ ಮಾರಾಟ: ಕಡಿವಾಣಕ್ಕೆ ಆಗ್ರಹ

ಹಾವೇರಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮಧ್ಯ ರಾತ್ರಿಯಲ್ಲೂ ಅಕ್ರಮವಾಗಿ ಸಿಗಲಿದೆ ಮದ್ಯ!
ದುರಗಪ್ಪ.ಪಿ.ಕೆಂಗನಿಂಗಪ್ಪನವರ
Published 10 ಜೂನ್ 2024, 5:16 IST
Last Updated 10 ಜೂನ್ 2024, 5:16 IST
ಅಕ್ಷರ ಗಾತ್ರ

‌ಗುತ್ತಲ: ಹಾವೇರಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮದ್ಯವನ್ನು ಅಕ್ರಮ ಎಗ್ಗಿಲ್ಲದೆ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ದೂರುವ ಗ್ರಾಮಸ್ಥರು ಶಾಲೆ, ದೇವಸ್ಥಾನ, ಆಸ್ಪತ್ರೆಗಳ ಪಕ್ಕ ಎಲ್ಲೆಂದರಲ್ಲಿ ಮದ್ಯವನ್ನು ಅಕ್ರವಾಗಿ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.

ಪ್ರಮುಖ ಗ್ರಾಮಗಳಾದ ಕನವಳ್ಳಿ, ಹಾವನೂರ, ಹೊಸರಿತ್ತಿ, ಸೋಮನಕಟ್ಟಿ, ಭರಡಿ, ಕೂರಗೂಂದ, ತಿಮ್ಮಾಪೂರ, ಕಂಚಾರಗಟ್ಟಿ,ತೇರದಹಳ್ಳಿ, ಮೇವುಂಡಿ, ಗ್ರಾಮಗಳು ಸೇರಿದಂತೆ ಇನ್ನು ಅನೇಕ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು, ಅಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ.  ಮಧ್ಯ ರಾತ್ರಿಯಲ್ಲೂ ಮದ್ಯ ಸಿಗುವುದು ವಿಷಾದದ ಸಂಗತಿ ಎಂದು ಗ್ರಾಮದ ಜನರು ಹೇಳುತ್ತಾರೆ.

ಚುನಾವಣೆ, ಮತ ಎಣಿಕೆ, ಹಬ್ಬ ಹರಿದಿನಗಳಲ್ಲಿ ಸರ್ಕಾರ ಮದ್ಯ ಮಾರಾಟ ನಿಷೇಧ ಮಾಡಿ ಸರ್ಕಾರ ಆದೇಶ ಹೊರಡಿಸುತ್ತದೆ. ಇಂಥ ಆದೇಶದ ದುರುಪಯೋಗಪಡಿಸಿಕೊಂಡು ಅಕ್ರಮ ಮದ್ಯ ಮಾರಾಟ ಮಾಡುವವರು ಒಂದು ವಾರಕ್ಕಾಗುವಷ್ಟು ಮದ್ಯವನ್ನು ಸಂಗ್ರಹಿಸಿ ಇಡುತ್ತಾರೆ. ಆ ಕಾರಣದಿಂದ ಹಳ್ಳಿಗಳಲ್ಲಿ ನಿರಂತರವಾಗಿ ಮದ್ಯ ಸಿಗುತ್ತದೆ ಎನ್ನುತ್ತಾರೆ ಕೆಲವು ಗ್ರಾಮಸ್ಥರು.

ಮದ್ಯದಂಗಡಿ ಬಂದ್ ಇರುವ ಸಮಯದಲ್ಲಿ ದುಪ್ಪಟ್ಟು ದರದಲ್ಲಿ ಮದ್ಯವನ್ನು ಮಾರಾಟ ಮಾಡುತ್ತಾರೆ.ಯಾವುದೇ ಮದ್ಯವನ್ನು ಮಾರಾಟ ಮಾಡಿದರೂ ₹15ರಿಂದ ₹20 ಲಾಭಾಂಶ ಇಟ್ಟುಕೊಂಡು ಮದ್ಯವನ್ನು ಮಾರಾಟ ಮಾಡುತ್ತಾರೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರು ಗ್ರಾಹಕರಿಗೆ ಉದ್ರಿಯಾಗಿಯೂ ಮದ್ಯ ನೀಡುತ್ತಾರೆ. ಈ ಕಾರಣದಿಂದ ಮದ್ಯಪ್ರಿಯರು ಮದ್ಯದಂಗಡಿಯನ್ನು ಬಿಟ್ಟು ಮದ್ಯದ ಅಕ್ರಮ ಮಾರಾಟ ನಡೆಸುವವರ ಹತ್ತಿರ ಹೆಚ್ಚಾಗಿ ಹೋಗುತ್ತಾರೆ. ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವವರು ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಕಾಲೇಜಗಳ ಕೂಗಳತೆ ದೂರದಲ್ಲಿ ಪಾನ್ ಶಾಪ್, ಎಗ್‌ರೈಸ್ ಸೆಂಟರ್ ಮತ್ತು ಗ್ರಾಮದ ಹೊರವಲಯದಲ್ಲಿ ನಾಯಿಕೊಡೆಯಂತೆ ಹುಟ್ಟಿರುವ ಡಾಬಾಗಳಿಗೆ ಮಾರಾಟ ಮಾಡುತ್ತಾರೆ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರು ಮಾಹಿತಿ ನೀಡಿದರು.

ಶಾಲಾ–ಕಾಲೇಜು, ದೇವಸ್ಥಾನ ಮತ್ತು ಆಸ್ಪತ್ರೆಗಳ ಸಮೀಪದಲ್ಲಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಿ ಎಂದು ಹಲುವಾರು ಬಾರಿ ಮನವಿ ನೀಡಿದರೂ ಮತ್ತು ದೂರವಾಣಿ ಕರೆಮಾಡಿದರು ಅಧಿಕಾರಿಗಳಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕನವಳ್ಳಿ ಗ್ರಾಮದ ಜನರು ಆರೋಪಿಸಿದ್ದಾರೆ.

ತಾಲ್ಲೂಕಿನ ಯಾವುದೇ ಗ್ರಾಮದವರು ದೂರು ನೀಡಿದರೂ ದೂರುಗಳಿಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಅಬಕಾರಿ ಅಧಿಕಾರಿಗಳು ದಾಳಿ ಮಾಡಿದರೂ ಮದ್ಯ ಅಕ್ರಮ ಮಾರಾಟ ಮಾಡುವವರನ್ನು ವಶಕ್ಕೆ ಪಡೆದುಕೊಂಡು ಹೋಗುತ್ತಾರೆ. ಅರ್ಧ ಗಂಟೆ ನಂತರ ಯಾವುದೇ ಕ್ರಮ ತೆಗೆದುಕೊಳ್ಳದೆ ಅವರನ್ನು ಬಿಟ್ಟುಬಿಡುತ್ತಾರೆ ಎಂದು ಹಾವನೂರ ಗ್ರಾಮದ ಜನರು ದೂರುತ್ತಾರೆ.

ಉಗ್ರ ಹೋರಾಟದ ಎಚ್ಚರಿಕೆ

ಹಾವೇರಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಶಾಲಾ ಕಾಲೇಜು, ದೇವಸ್ಥಾನ ಮತ್ತು ಆಸ್ಪತ್ರೆ ಪಕ್ಕದಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಾರೆ.ಅವರ ವಿರುದ್ಧ ಗ್ರಾಮ ಪಂಚಾಯ್ತಿ ಪಿಡಿಒ, ಅಧ್ಯಕ್ಷರು ಮತ್ತು ಎಸ್‌ಡಿಎಂಸಿ ಸದಸ್ಯರು ಕ್ರಮ ಜರುಗಿಸಬೇಕು. ಇಲ್ಲವೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿ ಅಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಅಕ್ರಮ ಮದ್ಯದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾವೇರಿ ತಾಲ್ಲೂಕು ಘಟಕದ ಕಾರ್ಯಧ್ಯಕ್ಷ ಮಂಜುನಾಥ ಕದಂ ಒತ್ತಾಯಿಸಿದರು.

ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಶಾಲೆ, ದೇವಸ್ಥಾನ ಮತ್ತು ಆಸ್ಪತ್ರೆ ಸುತ್ತಮುತ್ತ ಮದ್ಯ ಅಕ್ರಮ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು
-ರಮೇಶ ಕೆ.ಎಚ್ಅಬಕಾರಿ ಸಬ್‌ ಇನ್‌ಸ್ಪೆಕ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT