ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತ: ಕೆಆರ್‌ಎಸ್‌ ಆರೋಪ

ಮರಳು ಮಾಫಿಯಾ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ವಿಫಲ: ಕೆಆರ್‌ಎಸ್‌ ಆರೋಪ
Last Updated 14 ಜನವರಿ 2022, 16:14 IST
ಅಕ್ಷರ ಗಾತ್ರ

ಹಾವೇರಿ: ‘ರಾಣೆಬೆನ್ನೂರು ತಾಲ್ಲೂಕಿನ ಐರಣಿ, ಹೊಳೆಮಠ, ಮಾಕನೂರು, ಮುದೇನೂರು, ಕೋಟಿಹಾಳ, ಹಳ್ಳೂರು, ಬೇಲೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಕ್ರಮ ಮರಳು ಅಡ್ಡೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ವಿಫಲವಾಗಿವೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯದರ್ಶಿ ಅರವಿಂದ ಕೆ.ಬಿ. ಗಂಭೀರ ಆರೋಪ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೋಟಿಹಾಳದಲ್ಲಿ ಅಕ್ರಮವಾಗಿ ವಾಹನಗಳಿಗೆ ಮರಳು ತುಂಬುತ್ತಿರುವ ವೇಳೆ, ಕೆಆರ್‌ಎಸ್‌ ದಾವಣಿಗೆರೆ ಜಿಲ್ಲಾ ಘಟಕ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. 112ಕ್ಕೆ ಕರೆ ಮಾಡಿದರೆ, ಎರಡು ತಾಸು ತಡವಾಗಿ ಪೊಲೀಸರು ಬಂದರು. ಈ ವೇಳೆಗೆ ಮಾಫಿಯಾದ ದುಷ್ಕರ್ಮಿಗಳು ಓಡಿ ಹೋದರು. ಅಲ್ಲಿ 93 ಕ್ಯೂಬಿಕ್‌ ಮೀಟರ್‌ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿರುವುದು ಅಕ್ರಮ ನಡೆದದ್ದಕ್ಕೆ ಸಾಕ್ಷಿ ಎಂದು ಹೇಳಿದರು.

ಪೊಲೀಸರ ಸಮ್ಮುಖದಲ್ಲೇ ನಮ್ಮ ಪಕ್ಷದ ಮುಖಂಡ ಶಿವಣ್ಣನವರ ಮೇಲೆ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಮಾರನೇ ದಿನ ಐರಣಿ ಗ್ರಾಮದ ತುಂಗಭದ್ರಾ ನದಿಯ ತಟದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವುದನ್ನು ಮನಗಂಡು, ಬೆನ್ನಟ್ಟಿ ಹೋದಾಗ ಲಾರಿಯೊಂದು ಸಿಕ್ಕಿಹಾಕಿಕೊಂಡಿತು. ಮತ್ತೆ 112ಗೆ ಕರೆ ಮಾಡಿದರೆ ಪೊಲೀಸರು ನಮ್ಮ ನೆರವಿಗೆ ಬರಲಿಲ್ಲ. ನಾವು ಪೊಲೀಸರಿಗೆ ಕರೆ ಮಾಡಿದ ನಂತರ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಯಿತು ಎಂದು ದೂರಿದರು.

ಈ ಬಗ್ಗೆ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ ಮರಳು ಮಾಫಿಯಾದವರು ಸ್ಥಳೀಯ ಪ್ರಭಾವಿಗಳ ನೆರವಿನಿಂದ ನಮ್ಮ ಮೇಲೆ ಸುಳ್ಳು ದೂರು ದಾಖಲಿಸಿ ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಕೆಆರ್‌ಎಸ್‌ ಪಕ್ಷ ಹೆದರುವುದಿಲ್ಲ. ಸಿಎಂ ತವರು ಜಿಲ್ಲೆಯಲ್ಲಿ ಈ ರೀತಿಯ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ತಕ್ಷಣ ಕ್ರಮ ಕೈಗೊಂಡು ಅಕ್ರಮ ಮರಳು ಗಣಿಗಾರಿಕೆಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಹಳ್ಳಿಕೇರಿ, ಚರಣ್‌ ರಾಜ್‌ ದೊಡ್ಡಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT