ಗುರುವಾರ , ಫೆಬ್ರವರಿ 25, 2021
17 °C
ಭಾರತ ಅಂಚೆ ಪಾವತಿ ಬ್ಯಾಂಕ್ ಶಾಖೆಗೆ ಹಾವೇರಿಯಲ್ಲಿ ಚಾಲನೆ ನೀಡಿದ ಜಿಲ್ಲಾಧಿಕಾರಿ

ನಗದು, ಕಾಗದ ರಹಿತ ವ್ಯವಹಾರಕ್ಕೆ ಮಾದರಿ: ವೆಂಕಟೇಶ್ ಎಂ.ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾವೇರಿ: ಭಾರತ ಅಂಚೆ ಪಾವತಿ ಬ್ಯಾಂಕ್‌ (ಐಪಿ‍‍ಪಿಬಿ) ಸರಳ, ಸುರಕ್ಷಿತ, ನಗದು ಮತ್ತು ಕಾಗದ ರಹಿತ ವಹಿವಾಟಿನ ಉತ್ತಮ ಯೋಜನೆ. ಆರ್ಥಿಕ ಸಬಲೀಕರಣಕ್ಕೆ ಅವಶ್ಯಕವಾದ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಎಂ.ವಿ ಹೇಳಿದರು.

ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಾವೇರಿಯ ಪ್ರಧಾನ ಅಂಚೆ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತ ಅಂಚೆ ಪಾವತಿ ಬ್ಯಾಂಕ್‌’ (ಐಪಿಪಿಬಿ) ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಪ್ರತಿಯೊಬ್ಬ ಪ್ರಜೆಗಳಿಗೂ ಅಂಚೆ ಇಲಾಖೆಯೊಂದಿಗೆ ಅವಿನಾಭಾವ ಸಂಬಂಧವಿದೆ. ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಿಂದ ವಿವಿಧ ಸೌಲಭ್ಯ ಪಡೆಯಲು ಹಾಗೂ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಾರಸ್ಥರು, ಕಾರ್ಮಿಕರಿಗೆ ಇದು ಸಹಕಾರಿಯಾಗಿದೆ ಎಂದರು.

ಆನ್‌ಲೈನ್‌ ಮೂಲಕ ಬಿಲ್‌ ಪಾವತಿ, ಸ್ಕಾಲರ್‌ಶಿಪ್‌, ಬ್ಯಾಂಕ್‌ ಸಬ್ಸಿಡಿ ಮತ್ತಿತರ ವ್ಯವಹಾರ ಮಾಡಬಹುದು. ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಪ್ರಯೋಜನ ಪಡೆಯಬಹುದು ಎಂದರು.

ಶಿವಲಿಂಗೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸವಿತಾ ಹಿರೇಮಠ ಮಾತನಾಡಿ, ಐಪಿಪಿಬಿಯು ಸಾಮಾನ್ಯ ಜನರನ್ನು ತಲುಪಲು ಮುಂದಾಗಿದೆ. ಇದು ಪುರುಷರಿಗಿಂತ ಮಹಿಳೆಯರಿಗೆ ಅವಶ್ಯಕವಾಗಿದೆ ಎಂದರು.

ಅಂಚೆ ಕಚೇರಿಯ ಅಧೀಕ್ಷಕ ದಾಮೋದರ ಭಟ್‌ ಮಾತನಾಡಿ, ಗ್ರಾಮೀಣ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವುದು ಹಾಗೂ ಮನೆ ಬಾಗಿಲಲ್ಲೆ ಸೌಲಭ್ಯ ಒದಗಿಸುವುದೇ ನಮ್ಮ ಮುಖ್ಯ ಉದ್ದೇಶ. ಇದರಲ್ಲಿ ಕನಿಷ್ಠ ಬ್ಯಾಲೆನ್ಸ್‌ನ ನಿರ್ಬಂಧ ಇಲ್ಲ. ₹1 ಲಕ್ಷದವರೆಗೆ ಠೇವಣಿ ಇಡಬಹುದು. ಖಾತೆ ತೆರೆಯಲು ಆಧಾರ್‌ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಇದ್ದರೆ ಸಾಕು ಎಂದರು.

ವ್ಯವಹಾರಕ್ಕೆ ಪಾಸ್‌ ಪುಸ್ತಕದ ಅವಶ್ಯಕತೆ ಇಲ್ಲ, ಖಾತೆ ಸಂಖ್ಯೆಯ ಬದಲಿಗೆ ‘ಕ್ಯೂಆರ್‌’ ಕೋಡ್‌ ಎಲ್ಲ ಮಾಹಿತಿ ನೀಡುತ್ತದೆ ಎಂದರು.

ಭಾರತ ಅಂಚೆ ಪಾವತಿ ಬ್ಯಾಂಕ್ ಕಾರ್ಯವೈಖರಿ ಕುರಿತು ಕಿರುಚಿತ್ರ ಪ್ರದರ್ಶನ ಮಾಡಲಾಯಿತು.

ಹುಕ್ಕೇರಿ ಮಠದ ಸದಾಶಿವ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಶಾಖಾ ಪ್ರಬಂಧಕ ಜಗದೀಶ್‌ ಚಿಕ್ಕಮಲಗುಂದ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು