ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಮಹಿಳೆ ಮೇಲಿನ ಪ್ರೀತಿಯಿಂದಲೇ ತವರಿಗೆ ಬರುತ್ತಿದ್ದರು ಸುಧಾಮೂರ್ತಿ!

ಸುಧಾಮೂರ್ತಿ ಹುಟ್ಟಿದ ಮನೆ ಸುತ್ತಲು ‘ಮೈಸೂರು ದಸರಾ ಸಂಭ್ರಮ’
Last Updated 17 ಅಕ್ಟೋಬರ್ 2018, 14:35 IST
ಅಕ್ಷರ ಗಾತ್ರ

ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಭೋಗು’ ಎಂಬ ಹೆಸರಿನ ಮುಸ್ಲಿಂ ಮಹಿಳೆ ಅವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅವರೆಂದರೆ, ಸುಧಾಕ್ಕರಿಗೆ ಬಹಳ ಅಕ್ಕರೆ. ಸುಧಾಕ್ಕ ಶಿಗ್ಗಾವಿ ಬಿಟ್ಟು ಹೋದ ಬಳಿಕವೂ ಆಕೆಯ ಮನೆಗೆ ಬಂದು ಹಾಸಿಗೆ, ಬಟ್ಟೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಕೊಟ್ಟು ಹೋಗುತ್ತಿದ್ದರು...

ತವರು ಗ್ರಾಮ ನೋಡಲೆಂದೇ ಆಗಾಗ ಬರುತ್ತಿರುತ್ತಾರೆ. ಬೋಗು ಅವರು ಇದ್ದಾಗ ಅವರ ಮನೆಗೆ ಅವರನ್ನು ನೋಡಲು ಪದೇಪದೇ ಬರುತ್ತಿದ್ದರು.

ಈ ಬಾರಿಯ ಮೈಸೂರು ದಸರಾ ಉದ್ಘಾಟಿಸಿದ ಲೇಖಕಿ ಸುಧಾಮೂರ್ತಿ ಅವರು ಹುಟ್ಟಿದರಾಘವೇಂದ್ರ ದೇವಸ್ಥಾನದ ಓಣಿಯಲ್ಲಿರುವ ಮನೆಯ ನೆರೆಮನೆಯ ನಿವಾಸಿ,83 ವರ್ಷದ ನಿವೃತ್ತ ಶಿಕ್ಷಕ ಜೆ.ಎ.ಕುಲಕರ್ಣಿ ‘ಪ್ರಜಾವಾಣಿ’ ಜೊತೆ ನೆನಪುಗಳನ್ನು ಮೆಲುಕು ಹಾಕಿದರು.

‘ಸವಣೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಸುಧಾಮೂರ್ತಿ ಅಪ್ಪ (ಡಾ.ಆರ್.ಎಚ್.ಕುಲಕರ್ಣಿ) ಹಾಗೂ ಅಮ್ಮ (ರಂಗಮ್ಮ-ವಿಮಲಾ ಕುಲಕರ್ಣಿ) ಇಲ್ಲಿನ ಮನೆಯಲ್ಲಿ ವಾಸವಾಗಿದ್ದರು. ಆಗ ಸುಧಾ ಜನಿಸಿದ್ದಳು’ ಎಂದಾಗ ಅವರ ಕಣ್ತುಂಬಿ ಬಂತು.

’ಅವರ ಅಜ್ಜ ಹನುಮಂತರಾವ್ ಕದಿನದಿವಾನ್ ಅವರು, ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಬಳಿಕ ಶಿಗ್ಗಾವಿಗೆ ಬಂದು ಮಗನೊಂದಿಗೆ ವಾಸವಿದ್ದರು. ಅವರು ಕಾಯಕ ಯೋಗಿಗಳಾಗಿದ್ದರು. ಮನೆ ಕೆಲಸ ಮಾಡುವ ಜೊತೆಗೆ ಮನೆ ಸುತ್ತಲಿನ ಚರಂಡಿಗಳನ್ನು ಅವರೇ ಸ್ವಚ್ಚ ಮಾಡುತ್ತಿದ್ದರು. ನಾವು ಅವರ ಮಾರ್ಗದರ್ಶನ ಪಡೆಯುತ್ತಿದ್ದೆವು’ ಎಂದು ವಿವರಿಸಿದರು.

‘ಸುಧಕ್ಕಾ ಗ್ರಾಮದಲ್ಲಿ ಸೂಲಗಿತ್ತಿಯೊಬ್ಬರಿಗೆ (ಹೆರಿಗೆ ಮಾಡುವ) ಮನೆ ಕಟ್ಟಿಸಿಕೊಟ್ಟಿದ್ದಾರೆ. ಇಲ್ಲಿನ ರಾಘವೇಂದ್ರಸ್ವಾಮಿ ಮಠಕ್ಕೆ ಬೆಳ್ಳಿ ಸಮೆ ನೀಡಿದ್ದಾರೆ. ಅಲ್ಲಿನ ಆರಾಧನೋತ್ಸವದ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಾರೆ. ಶಿಗ್ಗಾವಿ ಮಾಮ್ಲೇದೇಸಾಯಿ ಕಾಲೇಜಿಗೆ ₹ 4.5ಲಕ್ಷ ವೆಚ್ಚದಲ್ಲಿ ಗ್ರಂಥಾಲಯವನ್ನು ನೀಡಿದ್ದಾರೆ’ ಎಂದು ನಿವೃತ್ತ ಪ್ರಾಚಾರ್ಯ ಎಸ್.ವಿ.ದೇಶಪಾಂಡೆ ತಿಳಿಸಿದರು. ತವರಿಗೆ ಸುಧಾಮೂರ್ತಿ ಅವರು ನೀಡಿದ ಕೊಡುಗೆಗಳೇ ಅಪಾರ. (‘ತವರು ಜಿಲ್ಲೆಯ ಮಹಿಳೆಯ ಆರ್ಥಿಕ ಸಬಲೀಕರಣ ಹಾಗೂ ಜಿಲ್ಲೆಯನನ್ನು ಬಯಲು ಶೌಚ ಮುಕ್ತ ಮಾಡುವ ಕನಸಿದೆ’ ಎಂದು ಈ ಹಿಂದೆ ‘ಪ್ರಜಾವಾಣಿ’ ಜೊತೆ ತಮ್ಮ ಮನದಿಂಗಿತವನ್ನು ಸುಧಾಮೂರ್ತಿ ಹಂಚಿಕೊಂಡಿದ್ದರು.)

‘ಬಾಲ್ಯದಲ್ಲಿ ಮನೆ ಹತ್ತಿರದ ಹೊಂಡದಿಂದ ಬಿಂದಿಗೆಯಲ್ಲಿ ಕುಡಿಯುವ ನೀರು ತರುತ್ತಿದ್ದೆವು. ಆಗಲೇ ಸುಧಾ ಚುರುಕು ಹುಡುಗಿ. ಯಾವುದೇ ಆಟ– ಪಾಠದಲ್ಲೂ ಯಾರನ್ನೂ ಬಿಟ್ಟುಕೊಡುತ್ತಿರಲಿಲ್ಲ. (ವಿಜಯದಶಮಿ) ಗುಳ್ಳೆದಹಬ್ಬ, ದೀಪಾವಳಿಗೆ ಗೆಳತಿಯರ ಗುಂಪು ಕಟ್ಟಿಕೊಂಡು ಕೃಷ್ಣ, ರುಕ್ಮಿಣಿ ಸೇರಿದಂತೆ ವಿವಿಧ ವೇಷ ತೊಟ್ಟು ಕೋಲಾಟ ಆಡುತ್ತಿದ್ದೆವು. ಮನೆ, ಮನೆಗಳಿಗೆ ಹೋಗಿ ಹಾಡು ಹೇಳುತ್ತಿದ್ದೆವು. ಅಂದು, ಇದೇ ಬೀದಿಯಲ್ಲಿ ‘ದಸರಾ’ ಸಂಭ್ರಮಿಸಿದ್ದೆವು’ ಎಂದು ಎಂದು ಬಾಲ್ಯದ ಗೆಳತಿ ಬಣುತಾಯಿ ಕುಲಕರ್ಣಿ (ಲಕ್ಷ್ಮೀಬಾಯಿ) ಸಂಭ್ರಮಿಸಿದರು.

ಬಾಲ್ಯದ ಗೆಳತಿ ಬಣುತಾಯಿ...

‘ಸುಧಾ, ಎಷ್ಟೇ ಎತ್ತರ ಸ್ಥಾನಮಾನ ಹೊಂದಿದ್ದರೂ, ನಾವಿಬ್ಬರು ಅತ್ಯಂತ ಒಡನಾಡಿಗಳಾಗಿದ್ದೇವೆ. ಈಗಲೂ ಫೋನ್ ಮಾಡಿ ಕುಶಲೋಪರಿ ಹಂಚಿಕೊಳ್ಳುತ್ತೇವೆ. ಈ ಬಾರಿ ನಾಡಹಬ್ಬಕ್ಕೆ ಆಕೆ ಚಾಲನೆ ನೀಡಿದಾಗ ನಮ್ಮ ಮನೆಯಲ್ಲಿ ದೊಡ್ಡ ಸಂಭ್ರಮಾಚರಣೆ. ಮನೆ ಮಂದಿಯೆಲ್ಲ ಕುಳಿತು ಟಿವಿ ಎದುರು ಎವೆಯಿಕ್ಕದೇ ಕುಳಿತು ನೋಡಿದ್ದೆವು. ತಾಯಿ ಚಾಮುಂಡೇಶ್ವರಿಯು ನಮ್ಮ ಸುಧಾಗೆ ಇನ್ನು ಹೆಚ್ಚಿನ ಸ್ಥಾನಮಾನಗಳು ನೀಡಲಿ ಎಂದು ಪ್ರಾರ್ಥಿಸಿದ್ದೆವು’ ಎಂದು ಬಾಲ್ಯದ ಗೆಳತಿ ಬಣುತಾಯಿ ಕುಲಕರ್ಣಿ (ಲಕ್ಷ್ಮೀಬಾಯಿ) ಭಾವುಕರಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT